ಕೊಚ್ಚಿ(ಕೇರಳ): ನಿರ್ದೇಶಕ ಮತ್ತು ನಟರ ವಿರುದ್ಧ ನಟಿಯರು ಮಾಡಿರುವ ಆರೋಪ ಮಲಯಾಳಂ ಚಿತ್ರರಂಗದಲ್ಲಿ ಸಂಚಲ ಮೂಡಿಸಿದೆ. ಆರೋಪ ಕೇಳಿಬಂದ ಬೆನ್ನಲ್ಲೇ ಮಲಯಾಳಂನ ಖ್ಯಾತ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೊಂದೆಡೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಟ ಸಿದ್ದಿಕ್ ಕೆಳಗಿಳಿದಿದ್ದಾರೆ.
ಸಿನಿಮಾ ಆಡಿಷನ್ ವೇಳೆ ನಿರ್ದೇಶಕ ರಂಜಿತ್ ಅವರು ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಗಂಭೀರ ಆರೋಪ ಮಾಡಿದ್ದಾರೆ. 2009ರಲ್ಲಿ ಪಲೇರಿ ಮಾಣಿಕ್ಯಂ: ಒರು ಪತಿರಕೋಲಪಾಠಕತಿಂತೆ ಕಥಾ ಸಿನಿಮಾದ ಆಡಿಷನ್ ವೇಳೆ ಈ ಘಟನೆ ನಡೆದಿದೆ ನಟಿ ದೂರಿದ್ದಾರೆ. ಈ ಬೆನ್ನಲ್ಲೇ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ನಿರ್ದೇಶಕ ರಂಜಿತ್ ಕೆಳಗಿಳಿದಿದ್ದಾರೆ.
ಮತ್ತೊಂದೆಡೆ, ನಟ ಸಿದ್ದಿಕ್ ವಿರುದ್ಧ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಸಿನಿಮಾ ಕುರಿತ ಚರ್ಚೆಗೆ ಆಹ್ವಾನಿಸಿದ್ದ ನಟ ಸಿದ್ದಿಕ್ ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆಗಸ್ಟ್ 24 ರಂದು ನಟಿ ಆರೋಪ ಮಾಡಿದ್ದರು. ಈ ಹಿನ್ನೆಲೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ದಿಕ್ ರಾಜೀನಾಮೆ ನೀಡಿದ್ದಾರೆ.
ತನ್ನ ರಾಜೀನಾಮೆ ಪತ್ರವನ್ನು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಅಧ್ಯಕ್ಷ ಮೋಹನ್‌ಲಾಲ್ ಅವರಿಗೆ ಸಲ್ಲಿಸಿರುವುದಾಗಿ ಸಿದ್ದಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಹೌದು. ನಾನು ನನ್ನ ಅಧಿಕೃತ ರಾಜೀನಾಮೆಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಲಾಲ್ ಅವರಿಗೆ ನೀಡಿದ್ದೇನೆ. ನನ್ನ ವಿರುದ್ಧ ಆರೋಪಗಳಿರುವುದರಿಂದ, ನಾನು ಹುದ್ದೆಯಲ್ಲಿ ಮುಂದುವರೆಯದಿರಲು ನಿರ್ಧರಿಸಿ ರಾಜೀನಾಮೆ ನೀಡಿದ್ದೇನೆ" ಎಂದು ಸಿದ್ದಿಕ್ ಹೇಳಿದ್ದಾರೆ.
ಇತ್ತೀಚಿಗೆ ಜಸ್ಟಿಸ್ ಹೇಮಾ ಸಮಿತಿ ಕೇರಳ ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟಿತ್ತು. ಇದರ ನಡುವೆ ಈಗ ಈ ಬೆಳವಣಿಗೆ ನಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.