ಬೆಂಗಳೂರು: ಇಂದು 2024-25ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯುತ್ತಿದೆ. ಫಿಲ್ಮ್ ಚೇಂಬರ್ ಚುನಾವಣೆಗೆ ಇದೇ ಮೊದಲ ಬಾರಿಗೆ ಇವಿಎಂ ಬಳಸಲಾಗಿದೆ. ಇಂದು 10 ಇವಿಎಂಗಳನ್ನು ಬಳಸಲಾಗಿದೆ. ರಾಜ್ ಫಿಲ್ಮ್ ಚೇಂಬರ್ ಪಕ್ಕದ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಯುತ್ತಿದೆ. ಫಿಲ್ಮ್ ಚೇಂಬರ್ ಸದಸ್ಯರಿಂದ ವೋಟಿಂಗ್ ಪ್ರಕ್ರಿಯೆ ಆರಂಭವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಮತ ಚಲಾಯಿಸುತ್ತಿದ್ದಾರೆ. ಮಧ್ಯಾಹ್ನದಿಂದ ಸಂಜೆ 6ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ರಾತ್ರಿ 8ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಚುನಾವಣೆಗೂ ಮೊದಲು ವಾರ್ಷಿಕ ಸಭೆಯಲ್ಲಿ ಚಿತ್ರರಂಗದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಯಿತು. ಪೈರಸಿ, ಸಬ್ಸಿಡಿ ಗೊಂದಲ, ಸದಸ್ಯತ್ವ ಹಾಗೂ ಅವ್ಯವಹಾರಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಚುನಾವಣೆ ಪ್ರಕ್ರಿಯೆಯಲ್ಲಿ ಈಗಾಗಲೇ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ಒಟ್ಟು 128 ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ಒಟ್ಟು 1,409 ಮತದಾರರಿದ್ದು, ನಿರ್ಮಾಪಕ ವಲಯದಿಂದಲೇ 889 ಮತಗಳಿವೆ. ಈ ಬಾರಿ ಪ್ರದರ್ಶಕರ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಿಡಲಾಗಿದ್ದು, ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಎಂ ಮತ್ತು ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್ ರಾಜು ಆರ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸುಂದರ್ ರಾಜು ಹಾಲಿ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಯಾಗಿದ್ದಾರೆ.
ಪ್ರತೀ ವರ್ಷ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸೇರಿದಂತೆ, ಮೂರು ವಲಯಗಳಿಂದ ತಲಾ ಒಬ್ಬರು ಖಜಾಂಚಿ, ಮೂರು ವಲಯಕ್ಕೆ ಪ್ರತ್ಯೇಕ ಉಪಾಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ನಡೆಯುತ್ತದೆ. ಈ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ಮೂರು ವಲಯಗಳಲ್ಲಿಯೂ ತಲಾ ಮೂವರು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಗೌರವ ಕಾರ್ಯದರ್ಶಿ ಹುದ್ದೆಗೆ ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್, ನಿರ್ಮಾಪಕ ಸಿದ್ದರಾಜು ಟಿ.ಪಿ, ವಿರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ಎಲ್.ಸಿ., ವಿತರಕ ಕೆಸಿಎನ್ ಕುಮಾರ್ ಮೊದಲಾದವರು ಭಿನ್ನ ವಲಯಗಳಿಂದ ಕಣಕ್ಕಿಳಿದಿದ್ದಾರೆ. ಖಂಜಾಚಿ ಹುದ್ದೆಗೆ ನಟ ಸುಂದರ್ ರಾಜ್ ಸೇರಿ ಮೂವರು ಕಣದಲ್ಲಿದ್ದಾರೆ. ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಜಯಸಿಂಹ ಮುಸುರಿ, ಅಣಜಿ ನಾಗರಾಜ್ ಮೊದಲಾದವರು ಕಾರ್ಯಕಾರಿ ಸಮಿತಿಯ ಸದಸ್ಯತ್ವಕ್ಕಾಗಿ ಸ್ಪರ್ಧಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ:
ಅಧ್ಯಕ್ಷ ಸ್ಥಾನಕ್ಕೆ
- ನರಸಿಂಹಲು ಎಂ ಹಾಗೂ ಆರ್. ಸುಂದರ್ ರಾಜು
ಉಪಾಧ್ಯಕ್ಷ ಸ್ಥಾನಕ್ಕೆ - ನಿರ್ಮಾಪಕ ವಲಯ
- ಕಮಲಾ
- ಆಸ್ಕರ್ ಕೃಷ್ಣ
- ಪಾರ್ಥ ಸಾರಥಿ
- ಸಫೈರ್ ವೆಂಕಟೇಶ್
ನಿರ್ಮಾಪಕರ ವಲಯದ ಕಾರ್ಯದರ್ಶಿ ಸ್ಥಾನಕ್ಕೆ
- ಟಿಪಿ ಸಿದ್ದರಾಜು (ದುನಿಯಾ ನಿರ್ಮಾಪಕ)
- ಟೇಶಿ ವೆಂಕಟೇಶ್
- ಪ್ರವೀಣ್ ಕುಮಾರ್
- ದಯಾಳ್ ಪದ್ಮನಾಭನ್
ವಿತರಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ
- ಎಂಆರ್ ರಮೇಶ್ ಬಾಬು
- ಹೆಚ್ ಸಿ ಶ್ರೀನಿವಾಸ್
ವಿತರಕರ ವಲಯದ ಗೌರವ ಕಾರ್ಯದರ್ಶಿ
- ಕುಮಾರ್ ಎಂ. ಎನ್ (ಕೆಸಿಎನ್ ಕುಮಾರ್)
- ಅರುಣ್ ಕುಮಾರ್ ಎಂ.ಎನ್
ಪ್ರದರ್ಶಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ
- ಶ್ರೀಧರ್ ಕೆ.ಎಸ್
- ರಂಗಪ್ಪ
ಪ್ರದರ್ಶಕರ ವಲಯ ಕಾರ್ಯದರ್ಶಿ ಸ್ಥಾನಕ್ಕೆ
- ಕುಶಾಲ್ ಎಲ್.ಸಿ
- ಅಶೋಕ್ ಕೆ.ಸಿ
- ಖಜಾಂಚಿ ಸ್ಥಾನಕ್ಕೆ
- ಸುಂದರ್ ರಾಜನ್ (ಕಲಾವಿದರು)
- ನರಸಿಂಹ
ಇದನ್ನೂ ಓದಿ: ವಿಡಿಯೋ: ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ; ಐಕಾನ್ ಸ್ಟಾರ್ ಬಿಗಿದಪ್ಪಿದ ರಿಯಲ್ ಸ್ಟಾರ್
ಇದನ್ನೂ ಓದಿ: Watch- ಜೈಲಿನಲ್ಲಿ ಒಂದು ರಾತ್ರಿ ಕಳೆದ ಅಲ್ಲು ಅರ್ಜುನ್ ವಾಪಸ್; ಬಿಗಿದಪ್ಪಿದ ಪತ್ನಿ, ಮಕ್ಕಳು: ರಶ್ಮಿಕಾ ಹೇಳಿದ್ದಿಷ್ಟು