ದಕ್ಷಿಣ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ನಿರ್ಮಾಣದ 'ಕಲ್ಕಿ 2898 ಎಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಸಾಹಸ ದೃಶ್ಯಗಳಿಗೆ ಪ್ರೇಕ್ಷಕ ವರ್ಗ ಮೂಕವಿಸ್ಮಿತವಾಗಿದೆ. ನಾಗ್ ಅಶ್ವಿನ್ ನಿರ್ದೇಶನ ಶೈಲಿಗೂ ಬಹುಪರಾಕ್ ಸಿಕ್ಕಿದೆ.
ಅಭಿಮಾನಿಗಳು ಪ್ರಭಾಸ್ ಹೊಸ ಅವತಾರಕ್ಕೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. 'ಸಲಾರ್'ಗೂ ಮುನ್ನ ಸರಣಿ ಹಿನ್ನಡೆ ಕಂಡಿದ್ದ ನಟನಿಗೆ ಕಲ್ಕಿ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಇದರೊಂದಿಗೆ ತಮ್ಮ 'ಪ್ಯಾನ್ ಇಂಡಿಯಾ ಸ್ಟಾರ್' ಎಂಬ ಜನಪ್ರಿಯತೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ ಪ್ರಭಾಸ್. 'ಕಲ್ಕಿ' ಅಂಥದ್ದೊಂದು ದೊಡ್ಡ ಗೆಲುವನ್ನು ನಟನಿಗೆ ಉಡುಗೊರೆಯಾಗಿ ನೀಡಿದೆ.
ಫ್ಯಾಂಟಸಿ ಸಿನಿಮಾಗಳ ಮೂಲಕ, ಕಣ್ಣಿಗೆ ಅಚ್ಚರಿ ಎನಿಸುವ ದೃಶ್ಯಾವಳಿಗಳನ್ನು ನೋಡುಗರಿಗೆ ನೀಡಿ ಸಿನಿರಸಿಕರನ್ನು ಪ್ರಭಾಸ್ ತಂಡ ರಂಜಿಸುತ್ತಿದೆ. ಇದರೊಂದಿಗೆ ತಮ್ಮ ಗಮನಾರ್ಹ ಆನ್-ಸ್ಕ್ರೀನ್ ಪಾತ್ರದಿಂದಲೂ ಪ್ರಭಾಸ್ ಜಾಗತಿಕ ಅಭಿಮಾನಿಗಳನ್ನೂ ತನ್ನೆಡೆ ಸೆಳೆದುಕೊಳ್ಳುತ್ತಿದ್ದಾರೆ.
ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ 'ಕಲ್ಕಿ' ಸಿನಿಮಾ ವೀಕ್ಷಿಸಲು ಜಪಾನ್‌ನಿಂದ ಹೈದರಾಬಾದ್‌ಗೆ ಆಗಮಿಸಿತ್ತು ಎಂಬುದು ಇನ್ನೂ ವಿಶೇಷ. ಚಿತ್ರದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್, ಹೈದರಾಬಾದ್‌ನ ಪ್ರಸಾದ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಐಕಾನಿಕ್ 'ರೆಬೆಲ್' ಟ್ರಕ್ ಪಕ್ಕದಲ್ಲಿ ನಿಂತಿರುವ ಮೂವರು ಜಪಾನಿ ಅಭಿಮಾನಿಗಳ ಫೋಟೋಗಳನ್ನು ಹಂಚಿಕೊಂಡಿದೆ. ಪ್ರಭಾಸ್ ಪಾತ್ರದ ಭೈರವ ಮತ್ತು ಬುಜ್ಜಿ ವಾಹನದ ಫೋಟೋ ಇರುವ ವಿಶೇಷ ಬಾವುಟ ಹಿಡಿದು ಕಲ್ಕಿ ಬಿಡುಗಡೆಗೆ ಅಭಿನಂದನೆಗಳು ಎಂದು ಜಪಾನ್ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಭೈರವನ ಕೊನೆ ಪಾಠ' ಹೇಳಲು ಬರುತ್ತಿದ್ದಾರೆ ಕರುನಾಡ ಚಕ್ರವರ್ತಿ: ಶಿವಣ್ಣನಿಗೆ ಹೇಮಂತ್ ಡೈರೆಕ್ಷನ್ - Bhairavana Kone PaaTa
'ಸಲಾರ್' ನಂತರ ಬಿಡುಗಡೆಯಾದ 'ಕಲ್ಕಿ' ಸಿನಿಮಾ ಮೂಲಕ ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಓಪನಿಂಗ್ ಕೂಡಾ ಸಿಕ್ಕಿದೆ. 'ಬಾಹುಬಲಿ'ಯಿಂದ 'ಸಲಾರ್', 'ಕಲ್ಕಿ 2898 ಎಡಿ'ವರೆಗೆ ಪ್ರಭಾಸ್ ತಮ್ಮ ಸ್ಟಾರ್ ಪವರ್‌ಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಸಮಕಾಲೀನ ಸಿನಿಮಾರಂಗದಲ್ಲಿ ಅತ್ಯಂತ ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಪ್ರಭಾಸ್.
ಇದನ್ನೂ ಓದಿ: 'ರೂಪಾಂತರ'ದ ಕಿತ್ತಾಳೆ ಸವಿ: ರಾಜ್ ಬಿ ಶೆಟ್ಟಿ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು - Kittale Song From Roopanthara
ಅಂದಹಾಗೆ, ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ'ಯನ್ನು ಹಿಂದೂ ಮಹಾಕಾವ್ಯ ಮಹಾಭಾರತದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ವೈಜ್ಞಾನಿಕ ಆ್ಯಕ್ಷನ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಹಿರಿಯ ಕಲಾವಿದರಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.
₹700 ಕೋಟಿಗೂ ಅಧಿಕ ಕಲೆಕ್ಷನ್: ಕಳೆದ ಗುರುವಾರ (ಜೂನ್ 27) ಬಹುಭಾಷೆಗಳಲ್ಲಿ ಚಿತ್ರಮಂದಿರ ಪ್ರವೇಶಿಸಿದ ಈ ಬಿಗ್ ಬಜೆಟ್ ಪ್ರಾಜೆಕ್ಟ್ ವಿಶ್ವಾದ್ಯಂತ ಈವರೆಗೆ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವಲ್ಲಿ ಯಶ ಕಂಡಿದೆ.