ಹೈದರಾಬಾದ್: ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಟ ಸಿದ್ದಿಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಯೋಜಿಸಿದ್ದು, ಕಾನೂನು ಹೋರಾಟ ತೀವ್ರಗೊಂಡಿದೆ. ಸದ್ಯ ತಲೆಮರೆಸಿಕೊಂಡಿರುವ ಸಿದ್ದಿಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನಟನೀಗ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಕಾಕ್ಕನಾಡ್ ಪದಂ ಮತ್ತು ಆಲುವಾ ಕುಟ್ಟಮಸೇರಿಯಲ್ಲಿರುವ ಅವರ ನಿವಾಸಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ. ಮತ್ತೊಂದೆಡೆ, ನಟಿಯೊಬ್ಬರು ಕಿರುಕುಳ ನೀಡಿದ ಆರೋಪದ ಹಿನ್ನೆಲೆ ವಿಶೇಷ ತನಿಖಾ ತಂಡ ನಟ ಇಡವೇಲ ಬಾಬು ಅವರನ್ನು ಬಂಧಿಸಿತ್ತು. ನಂತರ ಅವರು ಜಾಮೀನ ಮೇಲೆ ಹೊರಬಂದಿದ್ದಾರೆ
ನಟ ಸಿದ್ದಿಕ್ ಪ್ರಕರಣ ಗಮನಿಸೋದಾದರೆ, ದೇಶ ಬಿಟ್ಟು ಹೋಗದಂತೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಕೊಚ್ಚಿಯಲ್ಲಿ ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬೆನ್ನಲ್ಲೇ ಕೆಲ ಸಿನಿಗಣ್ಯರ ವಿರುದ್ದ ಗಂಭೀರ ಅರೋಪಗಳು ಕೇಳಿಬಂದಿವೆ. 2016ರಲ್ಲಿ ನಡೆದ ಘಟನೆಯೊಂದರ ಆರೋಪಗಳಿಗೆ ಸಂಬಂಧಿಸಿದಂತೆ ಸಿದ್ದಿಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದೆಡೆ, ನಟಿಯೊಬ್ಬರ ದೂರಿನ ಆಧಾರದ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಒಂದು ಸುತ್ತಿನ ವಿಚಾರಣೆ ನಡೆಸಿದ ನಂತರ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ನಟ ಇಡವೆಲ ಬಾಬು ಅವರನ್ನು ಇಂದು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಮೂರು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು, ಬಳಿಕ ಬಾಬು ಅವರನ್ನು ಅರೆಸ್ಟ್ ಮಾಡಲಾಯಿತು. ಸೆಷನ್ಸ್ ನ್ಯಾಯಾಲಯದಿಂದ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾದ ಹಿನ್ನೆಲೆ, ವೈದ್ಯಕೀಯ ಪರೀಕ್ಷೆಯ ನಂತರ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಬಿಗ್ ಬಾಸ್ ಹೊಸ ಅಧ್ಯಾಯ: ಸುದೀಪ್ ಸೂತ್ರಧಾರಿ, ವೀಕ್ಷಣೆಗೆ ನೀವ್ ರೆಡಿನಾ? - Bigg Boss Kannada
ಚಲನಚಿತ್ರ ಸಂಸ್ಥೆಯಲ್ಲಿ ಸದಸ್ಯತ್ವ ನೀಡುವ ನೆಪದಲ್ಲಿ ಇಡವೆಲ ಬಾಬು ನಟಿಗೆ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಟಿಯರ ದೂರುಗಳ ಆಧಾರದ ಮೇಲೆ ಕೇರಳ ಪೊಲೀಸರು ಇದುವರೆಗೆ 11 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪೈಕಿ ಒಂಬತ್ತು ಮಂದಿ ಚಿತ್ರರಂಗದವರು. ಮುಖೇಶ್, ಜಯಸೂರ್ಯ, ಮಣಿಯನ್ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್, ವಿ.ಕೆ.ಪ್ರಕಾಶ್ ಮತ್ತು ಪ್ರೊಡಕ್ಷನ್ ಕಾರ್ಯನಿರ್ವಾಹಕರಾದ ವಿಚು ಮತ್ತು ನೋಬಲ್ ಕೂಡಾ ಆರೋಪಗಳನ್ನು ಎದುರಿಸುತ್ತಿದ್ದಾರೆ. ನಟ ಬಾಬುರಾಜ್ ಮತ್ತು ನಿರ್ದೇಶಕ ತುಳಸಿದಾಸ್ ಅವರುಗಳ ಹೆಸರುಗಳು ಕೇಳಿ ಬಂದಿದ್ದರೂ ಕೂಡಾ ಅವರ ವಿರುದ್ಧ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.