'ಎಕ್ಕ' ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದಲ್ಲಿ ಸಖತ್ ಟಾಕ್ ಆಗುತ್ತಿರುವ ಸಿನಿಮಾ. ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಅಭಿನಯಿಸುತ್ತಿರುವ ಎರಡನೇ ಚಿತ್ರ. ಚಿತ್ರದ ಮುಹೂರ್ತವನ್ನು ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿಸಲಾಗಿತ್ತು. ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಾದ ಪಿ.ಆರ್.ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಹಾಗೂ ಕೆ.ಆರ್.ಜಿ.ಸ್ಟುಡಿಯೋಸ್ ಸಹಯೋಗದಲ್ಲಿ ಅದ್ದೂರಿಯಾಗಿ ನಿರ್ಮಾಣ ಆಗುತ್ತಿರುವ ಹೈ ವೋಲ್ಟೇಜ್ ಸಿನಿಮಾ ಮೇಲೆ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆಗಳಿವೆ.
'ಎಕ್ಕ' ಒಬ್ಬ ಯುವಕನ ಕಥೆ. ಭೂಗತ ಲೋಕದವರ ದೌರ್ಜನ್ಯಕ್ಕೊಳಗಾದ ಹುಡುಗ ಹೇಗೆ ಮಾಫಿಯಾವನ್ನು ಮಟ್ಟ ಹಾಕುತ್ತಾನೆ ಅನ್ನೋದು ಕಥಾಹಂದರ. ನಾಯಕ ನಟ ಯುವ ರಾಜ್ಕುಮಾರ್ ಸಿನಿಮಾಗಾಗಿ ಇಂದಿನ ಟ್ರೆಂಡ್ಗೆ ತಕ್ಕಂತೆ ಕಿವಿ ಚುಚ್ಚಿಸಿರುತ್ತಾರೆ. ಇದೀಗ ನಿರ್ಮಾಪಕರು ಹಾಗೂ ನಿರ್ದೇಶಕರಿಗೂ ಕಿವಿ ಚುಚ್ಚಿಸಿದ್ದಾರೆ. ಯುವ ರಾಜ್ಕುಮಾರ್ ನಿರ್ಮಾಪಕ ಹಾಗು ನಿರ್ದೇಶಕರಿಗೆ ಕಿವಿ ಚುಚ್ಚುವ ಮಷಿನ್ ಹಿಡಿದು ಮೊದಲು ಯಾರಿಗೆ ಚುಚ್ಚಿಸಬೇಕೆಂದು ಮಾತುಕತೆ ನಡೆಸುವ ಫನ್ನಿ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದೆ.
ಈ ತಮಾಷೆಯ ವಿಡಿಯೋ ಚಿತ್ರದ ಪಂಚಿಂಗ್ ಪದಗಳಾದ 'ಎಕ್ಕ ಮಾರ್ ಗುನ್ನಿಸ್ ಕಟ್ ಚಬ್ಬೀಸ್ ಕಟ್' ಹೊಂದಿದ್ದು, ಸಖತ್ ಟ್ರೆಂಡ್ ಸೆಟ್ ಮಾಡುತ್ತಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾಗಿ ಆ ಚಿತ್ರದ ನಟನ ಹೇರ್ ಸ್ಟೈಲ್ ಅಥವಾ ಬಟ್ಟೆಗಳು ಟ್ರೆಂಡ್ ಆಗುತ್ತವೆ. ಆದ್ರೆ ಎಕ್ಕ ಸಿನಿಮಾ ಶೂಟಿಂಗ್ ಹಂತದಲ್ಲೇ ಸಖತ್ ಸೌಂಡ್ ಮಾಡುತ್ತಿದೆ.
ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಯುವ ರಾಜ್ಕುಮಾರ್ ಜೋಡಿಯಾಗಿ ಯುವ ನಟಿ ಸಂಪದಾ ಅಭಿನಯಿಸುತ್ತಿದ್ದಾರೆ. ಇವರ ಜೊತೆಗೆ ಅತ್ತುಲ್ ಕುಲಕರ್ಣಿ, ಶ್ರುತಿ ಕೃಷ್ಣ, ರಾಹುಲ್ ದೇವ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಲಿದ್ದಾರೆ.
ಸಿನಿಮಾದ ಚಿತ್ರಕಥೆಯನ್ನು ರೋಹಿತ್ ಪದಕಿ ಮತ್ತು ವಿಕ್ರಮ್ ಹತ್ವಾರ್ ರಚಿಸಿದ್ದಾರೆ. ಸಂಗೀತವನ್ನು ಚರಣ್ ರಾಜ್ ಸಂಯೋಜಿಸಲಿದ್ದು, ಹಾಡುಗಳಿಗೆ ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್, ನಾಗಾರ್ಜುನ ಶರ್ಮ, ಡಾಲಿ ಧನಂಜಯ್ ಹಾಗು ರೋಹಿತ್ ಪದಕಿ ಬರೆಯಲಿದ್ದಾರೆ.
ಇದನ್ನೂ ಓದಿ: 'ಗಾಡ್ ಲೆವೆಲ್ ಪರ್ಫಾಮರ್': ಅಲ್ಲು ಅರ್ಜುನ್ಗೆ ಹರಿದು ಬಂತು ಮೆಚ್ಚುಗೆಯ ಮಹಾಪೂರ; 'ಪುಷ್ಪ 2' ವಿಮರ್ಶೆ
ರೋಹಿತ್ ಪದಕಿ ನಿರ್ದೇಶನವಿರುವ ಚಿತ್ರಕ್ಕೆ ಸತ್ಯ ಹೆಗಡೆ ಮುಖ್ಯ ಛಾಯಾಗ್ರಾಹಕರಾಗಿದ್ದು, ದೀಪು ಎಸ್.ಕುಮಾರ್ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸವನ್ನು ನೋಡಿಕೊಳ್ಳಲಿದ್ದಾರೆ. ಚಿತ್ರದ ಫೈಟ್ಸ್ ಸೀನ್ಗಳನ್ನು ಅರ್ಜುನ್ ರಾಜ್ ಮತ್ತು ಚೇತನ್ ಡಿಸೋಜಾ ನಿರ್ದೇಶಿಸಲಿದ್ದಾರೆ.
ಇದನ್ನೂ ಓದಿ: ಮಹಿಳಾ ಅಭಿಮಾನಿ ಸಾವು; ಮೃತಳ ಕುಟುಂಬಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ ಅಲ್ಲು ಅರ್ಜುನ್ ತಂಡ
ಅಶ್ವಿನಿ ಪುನೀತ್ ರಾಜ್ ಕುಮಾರ್ ಪಿ.ಆರ್.ಕೆ ಪ್ರೊಡಕ್ಷನ್ಸ್, ಜಯಣ್ಣ ಮತ್ತು ಭೋಗೇಂದ್ರ ಜಯಣ್ಣ ಫಿಲಂಸ್ ಹಾಗು ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಕೆ.ಆರ್.ಜಿ.ಸ್ಟುಡಿಯೋಸ್ ಲಾಂಛನದಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. 2025ರ ಜೂನ್ 6ರಂದು ಚಿತ್ರ ಬಿಡುಗಡೆಗೆ ಚಿತ್ರತಂಡ ಯೋಜಿಸಿದೆ.