ನಟರು, ನಿರ್ಮಾಪಕರು, ನಿರ್ದೇಶಕರು ಹಾಗೂ ರಾಜಕಾರಣಿಗಳ ಮಕ್ಕಳು ಸಿನಿಮಾ ಇಂಡಸ್ಟ್ರಿ ಪ್ರವೇಶಿಸೋದು ಕಾಮನ್. ಇದೀಗ ದುನಿಯಾ ವಿಜಯ್ ಮಗ ಸಾಮ್ರಾಟ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಫ್ಯಾಮಿಲಿಯಿಂದ ಮತ್ತೊಂದು ಕುಡಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ರೆಡಿಯಾಗಿದೆ.
ಸಲಗ ಸಿನಿಮಾದ ಯಶಸ್ಸಿನ ಬಳಿಕ ನಟನೆ ಜೊತೆಗೆ ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡಿರುವ ದುನಿಯಾ ವಿಜಯ್, 'ಭೀಮ'ನಿಗೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿರೋ ಹೊತ್ತಲ್ಲಿ ದುನಿಯಾ ವಿಜಯ್ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ನಾಳೆ ನಟನ 50ನೇ ವರ್ಷದ ಜನ್ಮದಿನ. ಬರ್ತ್ ಡೇ ಅಂಗವಾಗಿ ವಿಜಯ್ 29ನೇ ಸಿನಿಮಾ ಅನೌನ್ಸ್ ಆಗಿದೆ. 'VK-29' ವಿಜಯ್ ಅವರ ಮುಂದಿನ ಸಿನಿಮಾದ ಶೀರ್ಷಿಕೆ.
ಕೆಲ ದಿನಗಳ ಹಿಂದಷ್ಟೇ ದುನಿಯಾ ವಿಜಯ್ ಅವರ ಇಬ್ಬರು ಪುತ್ರಿಯರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಮೊದಲ ಪತ್ನಿಯ ಇಬ್ಬರು ಮಕ್ಕಳು ಮೋನಿಕಾ ಹಾಗೂ ಮೋನಿಷಾ ಇಬ್ಬರೂ ಸಿನಿಮಾಗೆ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಇವರಿಬ್ಬರಲ್ಲಿ ಯಾರು ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ? ಅನ್ನೋದಕ್ಕೀಗ ಉತ್ತರ ಸಿಕ್ಕಿದೆ.
ದುನಿಯಾ ವಿಜಯ್ ಪುತ್ರಿ ಮೋನಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅಭಿಮಾನಿಗಳಿಗೆ ಖುಷಿ ಕೊಡುವ ವಿಷಯವೇನಂದರೆ, ದುನಿಯಾ ವಿಜಯ್ ಹಾಗೂ ಪುತ್ರಿ ಮೋನಿಕಾ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಪ್ಪನ ಸಿನಿಮಾ ಮೂಲಕವೇ ಮೋನಿಕಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಸುದ್ದಿ ಕೇಳಿದ ವಿಜಯ್ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.
ಅಪ್ಪ ಹಾಗೂ ಮಗಳನ್ನು ಒಟ್ಟಿಗೆ ತೆರೆಮೇಲೆ ತೋರಿಸೋಕೆ ಹೊರಟಿರೋದು ಜಡೇಶ್ ಕುಮಾರ್. ದರ್ಶನ್ ನಟಿಸುತ್ತಿರುವ 'ಕಾಟೇರ' ಸಿನಿಮಾಗೆ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಜೆಂಟಲ್ ಮ್ಯಾನ್ ಹಾಗೂ ಶರಣ್ ನಟಿಸಿದ್ದ ಗುರುಶಿಷ್ಯರು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇವರೀಗ ದುನಿಯಾ ವಿಜಯ್ ಹಾಗೂ ಪುತ್ರಿ ಮೋನಿಕಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಈ ಚಿತ್ರ ಅಪ್ಪ ಮಗಳ ಸಂಬಂಧ ಹಾಗೂ ಬಾಂಧವ್ಯಗಳ ಕುರಿತಾದ ಕಥೆ ಹೊಂದಿರಲಿದೆ ಅಂತಾ ಹೇಳಲಾಗುತ್ತಿದೆ. ಜಡೇಶ್ ಕುಮಾರ್ ಹೆಣೆದಿರೋ ಈ ಕಥೆ ಎಲ್ಲಾ ವರ್ಗಕ್ಕೂ ತಲುಪಲಿದೆಯಂತೆ. ಆದರೆ, ದುನಿಯಾ ವಿಜಯ್ ಹಾಗೂ ಮಗಳು ಮೋನಿಕಾ ಪಾತ್ರವೇನು? ತೆರೆಮೇಲೆ ಹೇಗೆ ಕಾಣಿಸಬಹುದು ಎಂಬ ಕುತೂಹಲ ವಿಜಯ್ ಅಭಿಮಾನಿಗಳಲ್ಲಿದೆ.
ಇನ್ನೂ ಮೋನಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಡಲು ನಿರ್ಧರಿಸುವುದಕ್ಕೂ ಮುನ್ನ ನಟನೆ ಬಗ್ಗೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರಂತೆ. ಮುಂಬೈನ ಅನುಪಮ್ ಖೇರ್ ಆ್ಯಕ್ಟಿಂಗ್ ಸ್ಕೂಲ್‌ನಲ್ಲಿ ಆರು ತಿಂಗಳು ಅಭಿನಯಕ್ಕೆ ಬೇಕಾಗುವ ಎಲ್ಲ ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಒಟ್ಟಾರೆ ಅಪ್ಪ ಮಗಳ ಕಥೆಯನ್ನ ಹೊಂದಿರುವ ಈ ಚಿತ್ರದಲ್ಲಿ, ವಿಜಯ್ ಮಗಳು ಮೋನಿಕಾ ಕನ್ನಡಿಗರ ಮನಸ್ಸನ್ನು ಎಷ್ಟರ ಮಟ್ಟಿಗೆ ಗೆಲ್ಲುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಕೆಲ ತಿಂಗಳವರೆಗೆ ಕಾಯಬೇಕಿದೆ.