ಕನ್ನಡ ಚಿತ್ರರಂಗದಲ್ಲಿ ಕಳೆದ ಆರು ತಿಂಗಳಲ್ಲಿ ಸ್ಟಾರ್ ಸಿನಿಮಾಗಳಿಗೆ ಬರ ಎದುರಾಗಿತ್ತು. ಇದೀಗ, ಈಗ ಇಬ್ಬರು ಸ್ಟಾರ್ ನಟರಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಕೃಷ್ಣಂ ಪ್ರಯಣ ಸಖಿ' ಹಾಗು ದುನಿಯಾ ವಿಜಯ್ ನಟನೆಯ 'ಭೀಮ' ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುತ್ತಿವೆ.
ವಿಜಯ್ ಅಭಿನಯಿಸಿ, ನಿರ್ದೇಶಿಸಿರುವ 'ಭೀಮ' ಆಗಸ್ಟ್ 9ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದರೆ, ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಒಂದು ವಾರದ ಅಂತರಲ್ಲಿ ಎರಡೂ ಚಿತ್ರಗಳು ಜನರ ಮುಂದೆ ಬರುತ್ತಿವೆ. ಸದ್ಯ ಎರಡೂ ಸಿನಿಮಾಗಳು ಸಾಕಷ್ಟು ವಿಚಾರಗಳಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ.
ಇದರ ನಡುವೆ, ದುನಿಯಾ ವಿಜಯ್ ಹಾಗೂ ಗಣೇಶ್ ಬಹಳ ವರ್ಷಗಳ ಬಳಿಕ ಒಂದು ಮೈದಾನದಲ್ಲಿ ಭೇಟಿ ಆಗಿದ್ದಾರೆ. ವಿಜಯ್ ಹಾಗೂ ಗಣೇಶ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಗಳಾಗುವುದಕ್ಕೂ ಮುನ್ನ ಎದುರಿಸಿದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.
ವಿಶೇಷವೆಂದರೆ, 2006ರ ಡಿಸೆಂಬರ್ನಲ್ಲಿ ಗಣೇಶ್ ಅಭಿನಯದ 'ಮುಂಗಾರು ಮಳೆ' ಬಿಡುಗಡೆ ಆಗಿ ಗಣೇಶ್ ಸ್ಟಾರ್ ಆದರು. ಅದೇ ರೀತಿ, 2007ರ ಫೆಬ್ರವರಿಯಲ್ಲಿ 'ದುನಿಯಾ' ಚಿತ್ರದಿಂದ ವಿಜಯ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಅವೆರಡೂ ಸಿನಿಮಾಗಳು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದವು. ಮುಂಗಾರು ಮಳೆ, ದುನಿಯಾ ಸಿನಿಮಾಗಳು ಬಂದು ಸುಮಾರು 17ರಿಂದ 18 ವರ್ಷಗಳೇ ಕಳೆದಿವೆ. ಇದೀಗ ಮತ್ತೆ ಈ ಇಬ್ಬರೂ ನಾಯಕರ ಚಿತ್ರಗಳು ತೆರೆಗೆ ಬರುತ್ತಿವೆ.
''ಭೀಮ ಟ್ರೇಲರ್ ನೋಡಿ ಬಹಳ ಖುಷಿ ಆಯ್ತು. ಭೀಮನ ಪಾತ್ರ ನೋಡಿ ನನಗೆ ರಿಯಲ್ ದುನಿಯಾ ವಿಜಯ್ ಅಂತಾ ಅನಿಸಿತು. ನಾನು ದುನಿಯಾ ವಿಜಯ್ ಕೂದಲಿಗೆ ದೊಡ್ಡ ಫ್ಯಾನ್. ನೀನು ಶಾರುಖ್ ತರ ಕಾಣುತ್ತಿದ್ದೆ'' ಎಂದು ಗಣೇಶ್ ವಿಜಯ್ ಬಗ್ಗೆ ಗಣೇಶ್ ಮೆಚ್ಚುಗೆಯ ಮಾತುಗಳನ್ನಾಡಿದರು.
ಬಳಿಕ ದುನಿಯಾ ವಿಜಯ್ ಕೂಡ ಗಣೇಶ್ ಅವರನ್ನು ಹೊಗಳಿದರು. ''ನೀನು ಪಟ್ಟಿರುವ ಕಷ್ಟ, ಎಲ್ಲವನ್ನು ನೋಡಿದ್ದೇನೆ. ನಿನ್ನ ಸಿನಿಮಾ ಕೂಡ ಹಿಟ್ ಆಗಲಿ. ದೇವರು ಈಗಾಗಲೇ ಒಳ್ಳೆಯ ಹಂತದಲ್ಲಿ ಇಟ್ಟಿದ್ದಾನೆ. ನಮ್ಮಿಬ್ಬರನ್ನು ದೇವರು ಹಾಗೂ ಅಭಿಮಾನಿಗಳು ಒಳ್ಳೆಯ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತೆ ನಮ್ಮನ್ನು ತೆರೆ ಮೆಲೆ ನೋಡುವ ಸಮಯ ಬಂದಿದೆ, ನಾನು ಬಂದು ನಿನ್ನ ಸಿನಿಮಾ ನೋಡುತ್ತೇನೆ. ನೀನು ಬಂದು ನನ್ನ ಸಿನಿಮಾ ನೋಡು'' ಅಂತಾ ವಿಜಯ್ ಗಣೇಶ್ಗೆ ಹೇಳಿದರು. ಅದಕ್ಕೆ ಗಣಿ ಕೂಡ ಓಕೆ ಅಂದರು.
''ನಿನಗೆ ಗೊತ್ತಲ್ವಾ, ಸಲಗ ಸಕ್ಸಸ್ ಟೈಮ್ನಲ್ಲಿ ಸಖತ್ ಎಂಜಾಯ್ ಮಾಡಿದ್ದೆವು. ನಮ್ಮಿಬ್ಬರ ನಡುವೆ ಯಾವುದೇ ಸಿನಿಮಾ ಕ್ಲಾಶ್ ಇರಲಿಲ್ಲ. ಬೈಕೊಂಡಿಲ್ಲ. ಹಳೇಯದನ್ನು ನೆನೆಸಿಕೊಂಡು ಕಾಲು ಎಳೆದುಕೊಳ್ಳುತ್ತಿದ್ದೆವು. ನಾನು ರಾತ್ರಿ 12 ಗಂಟೆಗೆ ಫೋನ್ ಮಾಡಿ ಬಾ ಅಂದರೂ, ವಿಜಿ ಬರ್ತಾನೆ. ನಾನು ಕೂಡ ವಿಜಿ ರಾತ್ರಿ ಪೋನ್ ಮಾಡಿ, ಬಾ ಮಗಾ ಅಂದ್ರೆ ಹೋಗ್ತೇನೆ. ನಾನು ಎಲ್ಲಿಯೂ ಹೀಗೆ ಹೋಗಲ್ಲ. ನನಗೆ ವಿಜಿ ಮೇಲೆ ಅಷ್ಟು ಪ್ರೀತಿ'' ಎಂದರು ಗಣೇಶ್.
ವಿಜಯ್ ಮಾತನಾಡಿ, ''ನಾನು ಕಾರಿನಲ್ಲಿ ಬರುಬೇಕಾದರೆ ಕಷ್ಟದ ದಿನಗಳನ್ನು ನೆನೆಸಿಕೊಂಡೆ. 18 ವರ್ಷಗಳು ಆಗೋಯಿತ್ತಾ ಅಂದುಕೊಂಡೆ. ನಮ್ಮ 18 ವರ್ಷದ ಜರ್ನಿ ಇದೆಯಲ್ಲ, ಅದು ನೆನಪಿಸಿಕೊಂಡರೆ ಭಯ ಆಗುತ್ತೆ. ನೀನು ಪಟ್ಟ ಕಷ್ಟಗಳನ್ನು ಯೋಚನೆ ಮಾಡಿದರೆ, ಹೇಗಿತ್ತು ನಮ್ಮ ಜೀವನ ಅಂತ ನೆನೆಸಿಕೊಳ್ಳೋದಕ್ಕೂ ಆಗಲ್ಲ. ಆ ಟೈಮಲ್ಲಿ ಐದು ವರ್ಷ ನಾವು ಹೀರೋ ತರ ಇರಲಿಲ್ಲ'' ಎಂದರು.
ಮತ್ತೆ ಗಣೇಶ್ ಮಾತನಾಡಿ, ''ವಿಜಯ್ ನಿರ್ದೇಶನ ಮಾಡ್ತಾನೆ ಅಂದಾಕ್ಷಣ ನಾಲ್ಕು ಕಣ್ಣುಗಳನ್ನು ಇಟ್ಟಿದ್ದೆ. ಆದರೆ, ಅಷ್ಟೇ ಚೆನ್ನಾಗಿ ಸಲಗ ಸಿನಿಮಾ ಮಾಡಿದ, ಸಖತ್ ಸೂಪರ್ ಹಿಟ್ ಆಯ್ತು. ಈಗ ಭೀಮ ಮಾಡಿದ್ದಾನೆ. ಈ ಚಿತ್ರ ಕೂಡ ಅಷ್ಟೇ ಚೆನ್ನಾಗಿ ಮಾಡಿರುತ್ತಾನೆ ಎಂಬ ನಂಬಿಕೆ ಇದೆ. ನಾನು ವಿಜಯ್ ನಡುವೆ 20 ವರ್ಷದಿಂದ ಸ್ನೇಹ ಇದೆ. ಒಂದು ದಿನವೂ ನಾವಿಬ್ಬರು ಜಗಳ ಮಾಡಿಕೊಂಡಿಲ್ಲ. ನಾವು ಹೀರೋ ಆಗಬೇಕು ಅಂತಾ ಕಷ್ಟಪಡುತ್ತಿದ್ದ ದಿನಗಳಲ್ಲಿ, ನಮ್ಮ ಹತ್ತಿರ ಊಟ ಮಾಡುವುದಕ್ಕೂ ದುಡ್ಡು ಇರಲಿಲ್ಲ. ಆಗ ವಿಜಿ ಮಾರ್ಕೆಟ್ನಲ್ಲಿ ಹೋಗಬೇಕಾದರೆ, ಕ್ಯಾರೆಟ್ ಎತ್ತಿಬಿಡುತ್ತಿದ್ದ. ಅದು ನಮ್ಮ ರಾತ್ರಿ ಊಟ'' ಅಂತಾ ಹೇಳಿದರು.
''ದುನಿಯಾ ನಿರ್ದೇಶನದ ಮೇಲೆ ನನಗೆ ನಂಬಿಕೆ ಇದೆ. ಯಾಕಂದ್ರೆ ವಿಜಯ್ ಆಕ್ಷನ್ ಸಿಕ್ವೆನ್ಸ್ಗಳನ್ನು ಚೆನ್ನಾಗಿ ಮಾಡ್ತಾನೆ. ಅದು ನನಗೆ ಇಷ್ಟ. ದುನಿಯಾ ಎಷ್ಟು ಡೇಡಿಕೆಟೆಟ್ ಅಂದರೆ, ಇದು ಯಾರಿಗೂ ಗೊತ್ತಿಲ್ಲ. ಒಂದು ಸಿನಿಮಾ ತಯಾರಿಗೆ ವಿಜಯ್ ಒಂದು ಪಾರ್ಕ್ನಲ್ಲಿ ಬೆಳಗ್ಗೆ 5 ಗಂಟೆಗೆ ಎದ್ದು ಬ್ಯಾಕ್ ಪ್ಲಿಫ್, ಫ್ರಂಟ್ ಪ್ಲಿಫ್ ಹೊಡೆಯುತ್ತಿದ್ದುದು ನನಗೆ ಆಶ್ಚರ್ಯ ಆಗುತ್ತಿತ್ತು'' ಅಂದರು.
ಬಳಿಕ ವಿಜಯ್ ಮಾತನಾಡುತ್ತ, ''ಗಣೇಶ್ ನನಗೆ ಯಾಕೆ ಇಷ್ಟ ಅಂದ್ರೆ, ಅವರು ಎಲ್ಲೂ ಬದಲಾಗಲೇ ಇಲ್ಲ. ಒಂದು ದಿನ ನನ್ನ ಮಗಳನ್ನು ವಾಕಿಂಗ್ ಕರ್ಕೊಂಡು ಬಂದಾಗ ಅವಳಿಗೆ ಹೇಳಿದ್ದೆ ನಿನ್ನ ಬಗ್ಗೆ. ನಾನು ಯಾವಾಗಲೂ ಹೇಳೋದು ನೀವು ನೋಡದೇ ಇರುವ ಗಣೇಶ್ ನಾನು ನೋಡಿದ್ದೆ. ಗಣೇಶ್ ತುಂಬಾ ಕಷ್ಟದಲ್ಲಿದ್ದರೂ ನಗುತ್ತಿದ್ದ. ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯರೊಂದಿಗೆ ಮಾತನಾಡಿದೆ. ಏನು ಅರ್ಜುನ್, ಗಣೇಶ್ಗೆ ಅಷ್ಟೊಂದು ಚೆನ್ನಾಗಿರುವ ಹಾಡುಗಳನ್ನು ಮಾಡಿದಿಯಾ. ನನ್ನ ಸಿನಿಮಾಗೆ ಯಾಕೆ ನೀವು ಈ ರೀತಿ ಹಾಡುಗಳನ್ನು ಮಾಡೊಲ್ಲ ಅಂತಾ ರೇಗಿಸುತ್ತಿದ್ದೆ. ಗಣೇಶ್ ಡ್ಯಾನ್ಸ್ ನೋಡಿ ಖುಷಿ ಆಯ್ತು. ನನಗೆ ಡ್ಯಾನ್ಸ್ ಬರಲ್ಲ. ನಾವಿಬ್ಬರೂ ಯಾಕೆ ಚೆನ್ನಾಗಿದ್ದೇವೆ ಎಂದರೆ ನಾವು ತುಂಬ ಪಾತಾಳ ನೋಡಿದ್ದೇವೆ. ನನ್ನ ಡೈರಕ್ಷನ್ನಲ್ಲಿ ನಾವಿಬ್ಬರೂ ಕಾಂಬಿನೇಷನ್ ಸಿನಿಮಾ ಮಾಡಬೇಕು'' ಎಂದರು.
ಅದಕ್ಕೆ ಗಣೇಶ್ ಕೂಡ ಮಾಡುತ್ತೇನೆ ಎಂದು ಮಾತು ಕೊಟ್ಟರು. ''ನೀನು ಯಾವಾಗ ಹೇಳುತ್ತಿಯೋ ಆಗ ಬರ್ತೀನಿ. ಎಮೋಷನ್ ಚೆನ್ನಾಗಿ ಮಾಡುತ್ತೀಯಾ. ಇದು ಹಿಸ್ಟರಿ ಆಗುತ್ತೆ. ಒಂದು ಒಳ್ಳೆ ಕಥೆ ಮಾಡಿ. ನಿನ್ನ ನಿರ್ದೇಶನದಲ್ಲಿ ನಾನು ಆಕ್ಟ್ ಮಾಡುತ್ತೇನೆ'' ಅಂತಾ ಗಣೇಶ್ ಭರವಸೆ ನೀಡಿದರು.
ಕೊನೆಯದಾಗಿ ದುನಿಯಾ ವಿಜಯ್ ಹಾಗು ಗಣೇಶ್ ತಮ್ಮ ಸಿನಿಮಾಗಳಿಗೆ ಇಬ್ಬರು ಹಾರೈಸಿಕೊಂಡರು. ನಾನು 'ಭೀಮ' ಸಿನಿಮಾ ನೋಡುತ್ತೇನೆ, ನೀನು ನನ್ನ 'ಕೃಷ್ಣಂ ಪ್ರಣಯ ಸಖಿ' ನೋಡು ಅಂತಾ ವಿಜಯ್ಗೆ ಗಣೇಶ್ ಹೇಳಿದರು.