ಮನೆಯಲ್ಲಿ ಶೌಚಾಲಯ ಇಲ್ಲದಿದ್ದರೆ ಎಷ್ಟು ಕಷ್ಟ ಎಂಬುದನ್ನು ಹೇಳಬೇಕಾಗಿಲ್ಲ. ಪ್ರಸ್ತುತ ತೀರಾ ಹಿಂದುಳಿದ ಹಳ್ಳಿ ಪ್ರದೇಶಗಳಲ್ಲೂ ಮನೆಗಳಲ್ಲಿ ಶೌಚಾಲಯದ ವ್ಯವಸ್ಥೆಯಿರುತ್ತದೆ. ಆದರೆ ಹಲವು ವರ್ಷಗಳ ಹಿಂದೆ ಹಲವೆಡೆ ಜನರು ಬಯಲನ್ನೇ ಆಶ್ರಯಿಸಿದ್ದರು. ಸದ್ಯದ ಪರಿಸ್ಥಿತಿಗೆ ಹೋಲಿಸಿದರೆ, ಹಿಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಟಾಯ್ಲೆಟ್ ಇಲ್ಲದೇ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. 7 ವರ್ಷಗಳ ಹಿಂದೆ ಇದೇ ವಿಷಯವನ್ನಾಧರಿಸಿ ಚಿತ್ರವೊಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಪ್ರೇಕ್ಷಕರು, ವಿಮರ್ಷಕರಿಂದ ಮೆಚ್ಚುಗೆ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಯಶ ಕಂಡಿತ್ತು.
2017ರ ಆಗಸ್ಟ್ 11ರಂದು ತೆರೆಕಂಡ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಭಾರಿ ಪ್ರಶಂಸೆ ಸ್ವೀಕರಿಸಿತ್ತು. ಸಿನಿಪ್ರಿಯರು, ಜನಸಾಮಾನ್ಯರಿಂದ ಹಿಡಿದು ದೊಡ್ಡ ಸೆಲೆಬ್ರಿಟಿಗಳವರೆಗೆ ಅನೇಕರು ಈ ಚಿತ್ರದ ಕಥೆಯನ್ನು ಶ್ಲಾಘಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಚಿತ್ರ ಬಹುತೇಕರ ಮನಮುಟ್ಟಿದೆ.
ಚಿತ್ರಕ್ಕೆ ಕೇವಲ ಭಾರತೀಯರಿಂದ ಮಾತ್ರ ಮೆಚ್ಚುಗೆ ವ್ಯಕ್ತವಾಗಿಲ್ಲ. ವಿದೇಶದ ಬಿಲಿಯನೇರ್ ಬಿಲ್ ಗೇಟ್ಸ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು. ಅವರು, "ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರ, ಭಾರತದ ನೈರ್ಮಲ್ಯ ಸವಾಲಿನ ಬಗ್ಗೆ ಪ್ರೇಕ್ಷಕರಿಗೆ ಅರಿವು ಮೂಡಿಸಿದೆ" ಎಂದು ಈ ಹಿಂದೆ ಟ್ವೀಟ್ ಮೂಲಕ ತಿಳಿಸಿದ್ದರು.
ಈ ಯಶಸ್ವಿ ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ನಾಯಕ ನಟ ಅಕ್ಷಯ್ ಕುಮಾರ್ ರಾತ್ರಿ ಶೂಟಿಂಗ್ ಎಷ್ಟೇ ತಡವಾಗಿದ್ದರೂ, ಬೆಳಗ್ಗೆ ಬೇಗ ಎದ್ದು ಬರುತ್ತಿದ್ದರು. ಅವರಿಗೂ ಮುನ್ನ ಹಲವು ಟಾಪ್ ಹೀರೋಗಳು ಟಾಯ್ಲೆಟ್ ಸ್ಟೋರಿ ಎಂದು ತಿರಸ್ಕರಿಸಿದ್ದರು. ಆದರೆ, ಕಥೆ ಕೇಳಿದ ತಕ್ಷಣ ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದರು. ಅಕ್ಷಯ್ ಸೆಟ್‌ಗೆ ಬಂದಾಗ ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಅವರಿಲ್ಲದಿದ್ದರೆ ನಾನು ಈ ಚಿತ್ರೀಕರಣವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಬಿಲ್ ಗೇಟ್ಸ್ ಕೂಡ ನಮ್ಮ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ನನಗೆ ಮಾತೇ ಬರುತ್ತಿಲ್ಲ. ಸಣ್ಣ ಬಜೆಟ್‌ನ ಚಿತ್ರಕ್ಕೆ ಬಿಲ್ ಗೇಟ್ಸ್ ಅವರ ಮೆಚ್ಚುಗೆ ಒಂದು ಅತ್ಯುತ್ತಮ ವಿಚಾರ ಎಂದು ನಿರ್ದೇಶಕ ನಾರಾಯಣ್ ಸಿಂಗ್ ಒಂದು ಸಂದರ್ಭದಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ 'ಗೋಟ್' ಚಿತ್ರೀಕರಣ: ಎಸ್ಎಸ್ಎಲ್ಸಿ, ಪಿಯುಸಿ ಟಾಪರ್ಸ್ ಭೇಟಿಯಾಗಲಿದ್ದಾರೆ ವಿಜಯ್ - Vijay