'ಕಾಂತಾರ' ಎಂಬ ಅದ್ಭುತ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಕನ್ನಡದ ಜನಪ್ರಿಯ ನಟ ರಿಷಬ್ ಶೆಟ್ಟಿ. ಈ ಚಿತ್ರದಲ್ಲಿನ ತಮ್ಮ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿ ನಟನ ಜವಾಬ್ದಾರಿ ಹೆಚ್ಚಿಸಿದೆ. ಅವಾರ್ಡ್ ಅನೌನ್ಸ್ಮೆಂಟ್ ಬೆನ್ನಲ್ಲೇ, 'ಜವಾಬ್ದಾರಿ ಹೆಚ್ಚಾಗಿದೆ. ಇನ್ನೂ ಹೆಚ್ಚಿನ ಅತ್ಯುತ್ತಮ ಸಿನಿಮಾ ಕೊಡಲು ಸಂಪೂರ್ಣ ಶ್ರಮ ಹಾಕುತ್ತೇನೆ' ಎಂದು ಡಿವೈನ್ ಸ್ಟಾರ್ ತಿಳಿಸಿದ್ದರು. ಹಾಗಾಗಿ ಕಾಂತಾರ ಅಧ್ಯಾಯ 1 ಚಿತ್ರದ ಮೇಲಿನ ನಿರೀಕ್ಷೆಗಳು ದ್ವಿಗುಣಗೊಂಡಿವೆ.
ರಾಷ್ಟ್ರಪ್ರಶಸ್ತಿ ಘೋಷಣೆಯಾದ ಬಳಿಕ ಮಾತನಾಡಿದ್ದ ಹೆಸರಾಂತ ನಟ, ಕಾಂತಾರ ಅಧ್ಯಾಯ 1ನ್ನು ಅಷ್ಟೇ ಮನರಂಜನೆ ಜೊತೆಗೆ ಜವಾಬ್ದಾರಿಯುತವಾಗಿ ಮಾಡುವುದಾಗಿ ಹೇಳಿದ್ದರು. ಆ ಮಾತಿಗೆ ಪೂರಕವಾಗಿ ಇಂದು ಸ್ಪೆಷಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಎಲ್ಲರ ಗಮನ ಸೆಳೆಯುವಲ್ಲಿ ಯಶ ಕಂಡಿದೆ. ಹೌದು, ರಿಷಬ್ ಕೇರಳದ ಪ್ರಸಿದ್ಧ ಕಲೆಯೊಂದನ್ನು ಕಲಿಯುತ್ತಿದ್ದಾರೆ.
ಡಿವೈನ್ ಸ್ಟಾರ್ ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಕುತೂಹಲಕಾರಿ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ನಟನನ್ನು ಕೇರಳದ ಪ್ರಸಿದ್ಧ 'ಕಳರಿಪಯಟ್ಟು' ಭಂಗಿಯಲ್ಲಿ ಕಾಣಬಹುದು. ಪೋಸ್ಟ್ನ ಕ್ಯಾಪ್ಷನ್ಗೆ ರೆಡ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ನಟನನ್ನು ಈ ಭಂಗಿಯಲ್ಲಿ ಕಂಡ ಅಭಿಮಾನಿಗಳು ಹುಬ್ಬೇರಿಸಿ, ಮೆಚ್ಚುಗೆಯ ಮಳೆ ಸುರಿಸಿದ್ದಾರೆ.
ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ನಾಯಕ ನಟ, ಕೆಲ ಸಮಯದ ಹಿಂದೆ ಕಾಂತಾರ ಅಧ್ಯಾಯ 1ರ ಗ್ಲಿಂಪ್ಸ್ ಒಂದನ್ನು ಅನಾವರಣಗೊಳಿಸಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದರು. ಇದಕ್ಕಾಗಿ ರಿಷಬ್ ಸುಮಾರು ಆರು ತಿಂಗಳ ಸಮಯ ತೆಗೆದುಕೊಂಡು ಕಥೆ ರೆಡಿ ಮಾಡಿದ್ರು. ನಂತರ ಸರಳವಾಗಿ ಮುಹೂರ್ತ ಸಮಾರಂಭ ಆಯೋಜಿಸಿ, ಶೂಟಿಂಗ್ ಆರಂಭಿಸಿದ್ರು.
ಅಭಿಮಾನಿಗಳು, ಸಿನಿಪ್ರಿಯರೂ ಮಾತ್ರವಲ್ಲದೇ ಭಾರತೀಯ ಸಿನಿಕ್ಷೇತ್ರದ ಗಣ್ಯರೂ ಕೂಡಾ ಸಾಕಷ್ಟು ಕುತೂಹಲ ವ್ಯಕ್ತಪಡಿಸಿರುವ ಈ ಚಿತ್ರದ ಚಿತ್ರೀಕರಣಕ್ಕಾಗಿ ರಿಷಬ್ ಶೆಟ್ಟಿ ಕುಟುಂಬ ಬೆಂಗಳೂರಿನಿಂದ ಕುಂದಾಪುರಕ್ಕೆ ಶಿಫ್ಟ್ ಆಗಿದೆ. ಕ್ಲೈಮಾಕ್ಸ್ ಫೈಟ್ಗಾಗಿ 10 ಕೆ.ಜಿ ತೂಕ ಹೆಚ್ಚಿಸಿ, ಆ ನಂತರ 8 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಕನ್ನಡದಲ್ಲಿ ಚಿತ್ರೀಕರಣ ನಡೆಸಿ, ಆ ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡುವ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ.
'ಕಾಂತಾರ'ದಲ್ಲಿ ಕಂಬಳ ಪ್ರದರ್ಶಿಸಿದ್ದ ರಿಷಬ್ ಶೆಟ್ಟಿ, ಕಾಂತಾರ ಪ್ರೀಕ್ವೆಲ್ನಲ್ಲಿ ಕಳರಿಪಯಟ್ಟು ಕಲಿತುಕೊಂಡು ಭರ್ಜರಿ ಆ್ಯಕ್ಷನ್ಗೆ ರೆಡಿಯಾಗಿದ್ದಾರೆ. ಕಳರಿಪಯಟ್ಟು ಕಲಿಕೆಯ ಫೋಟೋವೊಂದನ್ನು ಅಭಿಮಾನಿಗಳಿಗಾಗಿ ರಿವೀಲ್ ಮಾಡಿದ್ದಾರೆ. ಈಗಾಗಲೇ ಕೇರಳದ ಪರಿಣಿತರಿಂದ ಕಲಾರಿ ಫೈಟ್ ಅಥವಾ ಕಳರಿಪಯಟ್ಟು ಕಲಿತಿದ್ದಾರಂತೆ ರಿಷಬ್ ಶೆಟ್ಟಿ.
ಇದನ್ನೂ ಓದಿ: ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಡಾಲಿ ಧನಂಜಯ್ - Daali Dhananjay Apology
ಸಿನಿಮಾ ಆರಂಭ ಸಮಯದಲ್ಲಿ, ಚಿತ್ರತಂಡ 100ಕ್ಕೂ ಹೆಚ್ಚು ದಿನಗಳ ಚಿತ್ರೀಕರಣದ ಪ್ಲಾನ್ ಹಾಕಿಕೊಂಡಿತ್ತು. ರಿಷಬ್ ಆಪ್ತರೊಬ್ಬರ ಪ್ರಕಾರ, 'ಕಾಂತಾರ ಅಧ್ಯಾಯ 1'ರ ಶೇ.40ರಷ್ಟು ಶೂಟಿಂಗ್ ಆಗಿದೆ. ಇಲ್ಲಿ ವಿಭಿನ್ನ ಕಥೆ ಇದೆ. ಅದನ್ನು ಬರೆದು ಮುಗಿಸುವುದಕ್ಕೆ 1 ವರ್ಷ ಆಗಬಹುದು. ಬಹುಶಃ ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಕಾರಣವೆಂಬ ಸಿನಿಮಾದಲ್ಲಿ ಯಾರು ಹೀರೋ, ಯಾರು ವಿಲನ್, ಯಾರು ನಿರ್ದೇಶಕ ಎಂಬುದು ಗೊತ್ತಾಗೋಲ್ಲ: ಯು.ಟಿ.ಖಾದರ್ - U T Khader
ಕಾಂತಾರ ಚಿತ್ರವನ್ನು 16 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣ ಮಾಡಿದ್ದ ದಕ್ಷಿಣ ಚಿತ್ರರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್' ಈಗ ಪ್ರೀಕ್ವೆಲ್ಗಾಗಿ 50 ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ಹೂಡುತ್ತಿದೆ. ರಿಷಬ್ ಶೆಟ್ಟಿ ಸೇರಿದಂತೆ ಕೆಲ ಪಾತ್ರಗಳು ಈ ಪ್ರೀಕ್ವೆಲ್ನಲ್ಲಿ ಮುಂದುವರಿಯಲಿವೆ. ಕಳರಿಪಯಟ್ಟು ಕಲಿತಿರುವ ರಿಷಬ್ ಎಷ್ಟು ಮಹತ್ವದ ಆ್ಯಕ್ಷನ್ ಸಿಕ್ವೇನ್ಸ್ ಕೊಡಲಿದ್ದಾರೆಂಬುದನ್ನು ಕಾದ ನೋಡಬೇಕಿದೆ.