ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಕಳೆದ ದಿನಗಳಿಂದ ಜೈಲುವಾಸ ಅನುಭವಿಸುತ್ತಿದ್ದು, ಅವರನ್ನು ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ. ನಟಿ ಸೋನಾಲ್ ಮಂಟೋರ್ ಜೊತೆ ವಿವಾಹವಾಗುತ್ತಿರುವ ತರುಣ್ ಸುಧೀರ್, ತಮ್ಮ ಮದುವೆಗೆ ಬರುವಂತೆ ಆಮಂತ್ರಣ ನೀಡಿದ್ದಾರೆ.
ಸದ್ಯ ದರ್ಶನ್ ನೋಡಲು ಈಗಾಗಲೇ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಹಾಗೂ ನಟ ವಿನೋದ್ ಪ್ರಭಾಕರ್, ನಟಿ ರಕ್ಷಿತಾ ಪ್ರೇಮ್ ಜೈಲಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಈಗ ರಾಬರ್ಟ್ ಹಾಗೂ ಕಾಟೇರ ಚಿತ್ರದ ನಿರ್ದೇಶಕ ತರುಣ್ ಸುಧೀರ್, ನಟ ಯಶಸ್ ಸೂರ್ಯ, ಶಾಸಕ ದರ್ಶನ್ ಪುಟ್ಟಣಯ್ಯ ಅವರು ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಜೊತೆ ಮಾತುಕತೆ ನಡೆಸಿದರು.
ಭೇಟಿ ಬಳಿಕ ಪ್ರತಿಕ್ರಿಯಿಸಿದ ನಿರ್ದೇಶಕ ತರುಣ್ ಸುಧೀರ್, ದರ್ಶನ್ಗೆ ಹುಷಾರು ಇರಲಿಲ್ಲ. ಈಗ ಚೆನ್ನಾಗಿದ್ದಾರೆ. ಸಂಜೆ ವೇಳೆಗೆ ಜ್ವರ ಕಾಣಿಸಿಕೊಳ್ಳುತ್ತಿತ್ತು. ವಾತಾವರಣದಿಂದಾಗಿ ಜ್ವರ ಇತ್ತು. ಈಗ ಹುಷಾರ್ ಆಗ್ತಿದ್ದಾರೆ. ಯಾವಾಗಲೂ ನನ್ನನ್ನು ಯಾವ ಸ್ಮೈಲ್ನಲ್ಲಿ ನೋಡಿ ರಿಯಾಕ್ಟ್ ಮಾಡ್ತಾ ಇದ್ರೋ.. ಅದೇ ರೀತಿ ರಿಯಾಕ್ಟ್ ಮಾಡಿದ್ರು ಎಂದರು.
ಅವರಿಗಿಂತ ನಾವು ಮೆಂಟಲಿ ವೀಕ್ ಆಗಿದ್ದಿವಿ.. ನಟ ದರ್ಶನ್ ಹೆಲ್ತ್ ಬಗ್ಗೆ ಹೆಚ್ಚು ಚರ್ಚೆ ಆಯ್ತು. ‘ಏನಿಲ್ಲ, ಮಗನೇ ಆರಾಮವಾಗಿ ಇದ್ದಿನಿ. ಸ್ವಲ್ಪ ಜ್ವರ ಇತ್ತು ಅಷ್ಟೇ’ ಅಂತಾ ದರ್ಶನ್ ಹೇಳಿದ್ರು. ಇನ್ನು ನನ್ನ ಮದುವೆ ವಿಚಾರ ಮೊದಲೇ ಅವ್ರಿಗೆ ಗೊತ್ತಿತ್ತು. ಆದ್ರು ನಟ ದರ್ಶನ್ ಇಲ್ಲದೆ ಮದುವೆ ಆಗುವ ಬಗ್ಗೆ ಕೊರಗು ನನಗೆ ಇದೆ. ಆದ್ರೆ ನಿಗದಿತ ದಿನಾಂಕದಂದೇ ಮದುವೆ ಆಗು ಅಂದ್ರು. ಅಷ್ಟೊತ್ತಿಗೆ ನಾನು ಬರ್ತಿನಿ ಅಂದ್ರು ಅಂತಾ ಹೇಳಿದರು.
ಅವ್ರು ಏನೂ ತಪ್ಪು ಮಾಡಿಲ್ಲ ಅನ್ನೋ ನಂಬಿಕೆಯಲ್ಲಿ ಇದ್ದಿವಿ. ಹಾಗೇ ಆಗಲಿ ಅಂತಾ ದೇವರಲ್ಲಿ ಕೇಳಿಕೊಳ್ಳುತ್ತಿವೆ. ಅಷ್ಟೊತ್ತಿಗೆ ನಟ ದರ್ಶನ್ ಜೈಲಿನಿಂದ ರಿಲೀಸ್ ಆಗುವ ನಂಬಿಕೆ ಇದೆ. ಇನ್ವಿಟೇಷನ್ಗೆ ಅವಕಾಶ ಇಲ್ಲ. ಅದಕ್ಕೆ ಆಶೀರ್ವಾದ ಮಾತ್ರ ಪಡೆದುಕೊಂಡೆ. ಜನರಲ್ ಆಗಿ ಸಿನಿಮಾ ಇಂಡಸ್ಟ್ರಿ ಬಗ್ಗೆ ಚರ್ಚೆ ಆಯ್ತು. ಯಾವಾಗಲೂ ಅವರಿಗೆ ಸಿನಿಮಾ ಇಂಡಸ್ಟ್ರಿ ಬಗ್ಗೆ ಕಾಳಜಿ ಇದ್ದೆ ಇದೆ. ಇನ್ನು ಜೈಲು ಊಟ ಅಡ್ಜಸ್ಟ್ ಆಗ್ತಿಲ್ಲ ಎಂದು ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ. ಮೇಲ್ನೋಟಕ್ಕೆ ಸ್ವಲ್ಪ ತೂಕ ಕಳೆದುಕೊಂಡು, ಸಣ್ಣಗಾಗಿದ್ದಾರೆ ಅಂತಾ ತರುಣ್ ಸುಧೀರ್ ಹೇಳಿದರು.
ಇನ್ನು ಆಗಸ್ಟ್ 10, 11ರಂದು ನಿರ್ದೇಶಕ ತರುಣ್ ಸುಧೀರ್ ಅವರು ನಟಿ ಸೋನಾಲ್ ಜೊತೆ ಮದುವೆ ಆಗುತ್ತಿದ್ದು ಅದಕ್ಕೆ ತಯಾರಿ ಕೂಡ ನಡೆದಿದೆ.