''ಕೆ.ಡಿ'', ಟೈಟಲ್ನಿಂದಲೇ ಕನ್ನಡ ಚಿತ್ರರಂಗವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ ''ಕೆ.ಡಿ'' ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದ್ದು, ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಕನ್ನಡದ ಬಹುಬೇಡಿಕೆ ನಟ ಧ್ರುವ ಸರ್ಜಾ 70ರ ದಶಕದ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ 'ಕೆ.ಡಿ' ಚಿತ್ರದ ತಂಡ ಗಣೇಶನನ್ನು ಕೂರಿಸಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದೆ.
ಅದ್ಧೂರಿ ಗಣೇಶ ಚತುರ್ಥಿ: ಹೌದು, ಬೆಂಗಳೂರಿನ ಹೊರವಲಯದಲ್ಲಿರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಿರ್ದೇಶಕ ಪ್ರೇಮ್, ನಟರಾದ ಧ್ರುವ ಸರ್ಜಾ, ರಮೇಶ್ ಅರವಿಂದ್, ನಟಿ ರೀಷ್ಮಾ ನಾಣಯ್ಯ, ಕೆವಿಎನ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಸೇರಿದಂತೆ ಇಡೀ 'ಕೆ.ಡಿ' ಚಿತ್ರತಂಡ ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದೆ.
ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ ಕೆ.ಡಿ ಚಿತ್ರತಂಡ: ಗಣೇಶನನ್ನು ಕೂರಿಸಿ ಅಲ್ಲಿ ಎರಡು ಸ್ಟೆಪ್ ಹಾಕಿಲ್ಲ ಅಂದ್ರೆ ಹೆಂಗೇ?. ಅದರಂತೆ ಚಿತ್ರತಂಡ ಬೊಂಬಾಟ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಇಡೀ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಈ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಹಲವು ಬಿಗ್ ಸ್ಟಾರ್ಸ್ ಬಣ್ಣ ಹಚ್ಚಿದ್ದಾರೆ. ಕಾಸ್ಟಿಂಗ್ ವಿಚಾರವಾಗಿಯೂ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಆನಂದ್ ಆಡಿಯೋ ಬರೋಬ್ಬರಿ 7 ಕೋಟಿ ರೂಪಾಯಿಗೆ ಕೆ.ಡಿ ಚಿತ್ರದ ಆಡಿಯೋವನ್ನು ಖರೀದಿಸಿದೆ.
ಇನ್ನೂ ನಿರ್ದೇಶಕ ಪ್ರೇಮ್ 1968 ರಿಂದ 1978ರ ಕಾಲಘಟ್ಟದ ಕಥೆ ಹೇಳಲಿದ್ದಾರೆ. ಆದ್ರೆ ಯಾವ ಡಾನ್ ಕಥೆಯನ್ನು ಹೇಳಲೊರಟಿದ್ದಾರೆ ಅನ್ನೋದು ಮಾತ್ರ ರಿವೀಲ್ ಆಗಿಲ್ಲ. ಚಿತ್ರದ ಟೀಸರ್ ಮಾತ್ರ ಭರ್ಜರಿಯಾಗಿ ಮೂಡಿ ಬಂದಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ವಿಲಿಯಂ ಡೇವಿಡ್ ಅವರ ಕ್ಯಾಮರಾ ವರ್ಕ್ ಇದೆ. ಕೆ.ವಿ.ಎನ್ ಪ್ರೊಡಕ್ಷನ್ ಸಂಸ್ಥೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ನಿರ್ಮಿಸುತ್ತಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ನ ಸಿನಿಮಾ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ರಂಜಿಸುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.