'ದಿಯಾ' ಸಿನಿಮಾ ಮೂಲಕ ಜನಪ್ರಿಯತೆ, ಬೇಡಿಕೆ ಹೆಚ್ಚಿಸಿಕೊಂಡ ನಟ ದೀಕ್ಷಿತ್ ಶೆಟ್ಟಿ. ಕನ್ನಡ ಅಲ್ಲದೇ ಬಹುಭಾಷೆಗಳಲ್ಲಿ ಕಮಾಲ್ ಮಾಡುತ್ತಿರುವ ದೀಕ್ಷಿತ್ ಶೆಟ್ಟಿ ಅವರೀಗ ''ಕೆಟಿಎಂ'' ಸಿನಿಮಾ ಮೂಲಕ ತೆರೆಮೇಲೆ ಬರಲು ರೆಡಿ ಆಗಿದ್ದಾರೆ. ಈ ಸಿನಿಮಾದಲ್ಲೂ ಪ್ರೀತಿ, ಪ್ರೇಮ ಹಾಗೂ ಪ್ರೇಮ ವೈಫಲ್ಯದ ಅಂಶಗಳಿವೆ. ಒಂದು ಕಥೆಯಲ್ಲಿ ಎರಡು ಲವ್ ಸ್ಟೋರಿಗಳನ್ನು ಬೆರೆಸಲಾಗಿದೆ. ಪೋಸ್ಟರ್ ಹಾಗೂ ಟೀಸರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಹುಟ್ಟಿಸಿರೋ ಕೆಟಿಎಂ ಸಿನಿಮಾದ ವಿಶೇಷತೆ ಬಗ್ಗೆ ಚಿತ್ರತಂಡ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.
ನಾಯಕ ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, 3 ಹಾಡುಗಳು ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಟ್ರೇಲರ್ಗೆ ಒಂದು ನೆಗೆಟಿವ್ ಕಮೆಂಟ್ಸ್ ಕೂಡ ಬಂದಿಲ್ಲ. ಎಲ್ಲರೂ ಬಹಳ ಇಷ್ಟಪಟ್ಟಿದ್ದಾರೆ. ದಿಯಾ, ದಸರಾ ಹೀಗೆ ಪ್ರತಿ ಸಿನಿಮಾದಲ್ಲೂ ರಂಜಿಸುತ್ತಾ ಬರುತ್ತಿದ್ದೇನೆ. ಈ ಸಿನಿಮಾಗೆ ಜೀವ ಕೊಟ್ಟು ಮಾಡಿದ್ದೇನೆ. ಬೆವರಿನ ಜೊತೆ ರಕ್ತವನ್ನೂ ಸುರಿಸಿದ್ದೇನೆ. ಇದೊಂದು ಬಹಳ ಪ್ರಾಮಾಣಿಕ ಪ್ರಯತ್ನ. ಟ್ರೇಲರ್ ಮೂಲಕ ಭರವಸೆ ಮೂಡಿಸಿದ್ದೇವೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾದರೂ ಬಂದು ಸಿನಿಮಾ ವೀಕ್ಷಿಸಿದರೆ ನಿಮಗೆ ನಿರಾಸೆಯಾಗುವುದಿಲ್ಲ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಎಂದು ಕೇಳಿಕೊಂಡರು.
ನಟಿ ಸಂಜನಾ ದಾಸ್ ಮಾತನಾಡಿ, ನನ್ನ ಮೊದಲ ಕಮರ್ಷಿಯಲ್ ಸಿನಿಮಾ 'ಕೆಟಿಎಂ'. ರೊಮ್ಯಾಂಟಿಕ್ ಸೀನ್ಸ್ ಮಾಡಬೇಕಿತ್ತು. ಹೇಗೆ? ಎಂಬ ಭಯವಿತ್ತು. ನಿರ್ದೇಶಕರಾದ ಅರುಣ್ ಸರ್ ರಿಹರ್ಸಲ್ ಮಾಡಿಸಿದ ಬಳಿಕ ನಾನು ಕಂಫರ್ಟ್ ಆದೆ. ನನ್ನದು ವಿಭಿನ್ನ ಪಾತ್ರ. ಟ್ರೇಲರ್ ನೋಡಿದರೆ ಅಷ್ಟು ಗೊತ್ತಾಗುವುದಿಲ್ಲ. ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಈ ಪಾತ್ರಕ್ಕೆ ಬಹಳ ಶೇಡ್ಸ್ ಇದೆ ಎಂದು ತಿಳಿಸಿದರು.
ಚಿತ್ರದ ಮತ್ತೋರ್ವ ನಾಯಕ ನಟಿ ಕಾಜಲ್ ಕುಂದರ್ ಮಾತನಾಡಿ, ನನ್ನದು ಸಿಂಪಲ್ ಕಾಲೇಜ್ ಹುಡುಗಿ ಪಾತ್ರ. ಅವಳಿಗೆ ಜೀವನದಲ್ಲೊಂದು ಗುರಿ ಇರುತ್ತದೆ. ಆ ಗುರಿ ಮುಟ್ಟಲು ಆಕೆ ಶ್ರಮಿಸುತ್ತಿರುತ್ತಾಳೆ. ದೀಕ್ಷಿತ್ ಅವರ ಜಿವನದಲ್ಲಿ ನನ್ನ ಪಾತ್ರ ಎಂಟ್ರಿಯಾದಾಗ ಕೆಲ ಬದಲಾವಣೆಗಳಾಗುತ್ತದೆ. ಕೆಟಿಎಂ ಒಂದು ಬ್ಯೂಟಿಫುಲ್ ಲವ್ ಸ್ಟೋರಿ. ಪ್ರೀತಿ ಅನ್ನೋದು ಕೇವಲ ಹುಡುಗ ಹುಡುಗಿ ನಡುವೆ ನಡೆಯುವುದಲ್ಲ. ತಂದೆ ತಾಯಿ ನಡುವೆಯೂ ಆಗುತ್ತದೆ. ಸಿನಿಮಾದಲ್ಲಿ ಈ ರೀತಿಯ ಸಾಕಷ್ಟು ವಿಷಯಗಳಿವೆ ಎಂದು ತಿಳಿಸಿದರು.
ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ಒಂದೊಳ್ಳೆ ಕಥೆಗೆ ಒಂದೊಳ್ಳೆ ನಾಯಕ ಬೇಕು. ನಾವೇನು ಕನಸು ಕಂಡಿದ್ದೆವೋ ಅದಕ್ಕಿಂತ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ. ಅದಕ್ಕೆ ಕಾರಣ ದೀಕ್ಷಿತ್. ಪಾತ್ರಗಳನ್ನು ಬರೆಯುವುದು ಸುಲಭ. ಆದರೆ, ತೆರೆಮೇಲೆ ತರಬೇಕು ಎಂದರೆ ಅದಕ್ಕೆ ಡೆಡಿಕೇಷನ್ ಅತ್ಯಗತ್ಯ. ತಾರಾಬಳಗ ಹಾಗೂ ತಾಂತ್ರಿಕ ಬಳಗ ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ಎಲ್ಲರ ಬೆಂಬಲದಿಂದ ಕೆಟಿಎಂ ಸಿನಿಮಾವಾಗಿದೆ. ಒಂದೊಳ್ಳೆ ಚಿತ್ರ ಮಾಡಿದ್ದೇವೆ. ಇದು ನೋಡುವ ಸಿನಿಮಾವಲ್ಲ. ಕಾಡುವ ಸಿನಿಮಾ ಎಂದು ತಿಳಿಸಿದರು.
ಇದನ್ನೂ ಓದಿ: ಅಬುಧಾಬಿಯಲ್ಲಿ ಬೊಂಬಾಟ್ ಸ್ಟೆಪ್ ಹಾಕಿದ ಶಿವಣ್ಣ-ಪ್ರಭುದೇವ: 'ಕರಟಕ ದಮನಕ' ಮೇಲೆ ಕುತೂಹಲ
ದೀಕ್ಷಿತ್ ಶೆಟ್ಟಿ, ಸಂಜನಾ ದಾಸ್ ಹಾಗೂ ಕಾಜಲ್ ಕುಂದರ್ ಅಲ್ಲದೇ ಉಷಾ ಭಂಡಾರಿ, ರಘು ರಮಣಕೊಪ್ಪ, ಪ್ರಕಾಶ್ ತುಮ್ಮಿನಾಡು, ಬಾಬು ಹಿರಣ್ಣಯ್ಯ, ಶಾನಿಲ್ ಗುರು, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ತಾರಾ ಬಳಗದಲ್ಲಿದ್ದಾರೆ. ಅರುಣ್ ನಿರ್ದೇಶನದ ಎರಡನೇ ಚಿತ್ರವಿದು. ಈ ಮೊದಲು ಅಥರ್ವ ಶೀರ್ಷಿಕೆಯ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ನಿರ್ಮಾಣ ಮಾಡಿದ್ದಾರೆ. ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ನವೀನ್ ಛಾಯಾಗ್ರಹಣ, ಚೇತನ್ ಅವರ ಸಂಗೀತ ಸಂಯೋಜನೆ, ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ. ಅಭಿನಂದನ್ ದೇಶಪ್ರಿಯ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಟೈಟಲ್ ಹಾಗೂ ಕಥೆಯಿಂದ ಗಮನ ಸೆಳೆಯುತ್ತಿರೋ ಕೆಟಿಎಂ ಚಿತ್ರ ಫೆಬ್ರವರಿ 16ರಂದು ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ್ರಾ ಕೃತಿ ಖರಬಂದ - ಪುಲ್ಕಿತ್ ಸಾಮ್ರಾಟ್?!