ಕನ್ನಡ ಚಿತ್ರರಂಗದಲ್ಲಿ ಯುವ ನಟ ನಟಿಯರ ಆಗಮನ ಮುಂದುವರೆದಿದೆ. ನಟನೆ ಜೊತೆ ಜೊತೆಗೆ ನಿರ್ದೇಶಕರಾಗುವ ಒಲವು ಕೂಡಾ ಹೆಚ್ಚಾಗುತ್ತಿದೆ. ಸ್ಟಾರ್ ನಟರಿಂದ ಹಿಡಿದು ಹೊಸ ಪ್ರತಿಭೆಗಳು ನಿರ್ದೇಶನಕ್ಕೆ ಕೈ ಹಾಕುತ್ತಿವೆ. ಈಗಾಗಲೇ ದುನಿಯಾ ವಿಜಯ್, ಡಾರ್ಲಿಂಗ್ ಕೃಷ್ಣ, ಸೂರಜ್ ಗೌಡ ಸೇರಿದಂತೆ ಸಾಕಷ್ಟು ನಟರು ನಿರ್ದೇಶಕರಾಗಿ ಸೈ ಎನಿಸಿಕೊಂಡಿದ್ದಾರೆ. ಈ ಸಾಲಿಗೀಗ 'ಕೆಂಡ ಸಂಪಿಗೆ' ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದು ಕಾಲೇಜು ಕುಮಾರನಾಗಿ ಮಿಂಚಿರುವ ವಿಕ್ಕಿ ವರುಣ್ ಅವರು ನಟನೆ ಜೊತೆಗೆ 'ಕಾಲಾಪತ್ಥರ್' ಸಿನಿಮಾ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ.
![Kaalapatthar film team](https://etvbharatimages.akamaized.net/etvbharat/prod-images/26-08-2024/kn-bng-01-actinig-jothie-directionalli-sucess-agalu-vikkivarun-reday-7204735_26082024111907_2608f_1724651347_535.jpg)
ಹೌದು, 'ಕಾಲಾಪತ್ಥರ್' ಸಿನಿಮಾದಲ್ಲಿ ವಿಕ್ಕಿ ವರಣ್ ಅಭಿನಯದ ಜೊತೆಗೆ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶಕನಾಗಿ ಚೊಚ್ಚಲ ಚಿತ್ರದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಕಾರ್ಯಕ್ರಮದಲ್ಲಿ ಚಿತ್ರತಂದ ತಮ್ಮ ಸಿನಿಮಾ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದೆ.
![Kaalapatthar film team](https://etvbharatimages.akamaized.net/etvbharat/prod-images/26-08-2024/kn-bng-01-actinig-jothie-directionalli-sucess-agalu-vikkivarun-reday-7204735_26082024111907_2608f_1724651347_51.jpg)
ಮೊದಲು ಮಾತು ಶುರು ಮಾಡಿದ ನಟ ಹಾಗೂ ನಿರ್ದೇಶಕ ವಿಕ್ಕಿ ವರುಣ್, ''ನಾನು ಕನ್ನಡ ಚಿತ್ರರಂಗಕ್ಕೆ ಬಂದು ಹದಿನೈದು ವರ್ಷಗಳಾಯಿತು. ಸೆಪ್ಟೆಂಬರ್ಗೆ ಸೂರಿ ಅವರ ನಿರ್ದೇಶನದಲ್ಲಿ ನಾನು ನಾಯಕನಾಗಿ ನಟಿಸಿದ್ದ ಕೆಂಡಸಂಪಿಗೆ ಚಿತ್ರ ತೆರೆಕಂಡು ಒಂಬತ್ತು ವರ್ಷಗಳಾಗಲಿದೆ. ನಾನು ನಿರ್ದೇಶಿಸಿ, ನಾಯಕನಾಗಿಯೂ ನಟಿಸಿರುವ "ಕಾಲಾಪತ್ಥರ್" ಚಿತ್ರ ಕೂಡ ಸೆಪ್ಟೆಂಬರ್ನಲ್ಲೇ ಬಿಡುಗಡೆಯಾಗುತ್ತಿರುವುದು ಖುಷಿ ಕೊಟ್ಟಿದೆ. ಕಾಲಾಪತ್ಥರ್ - ಕಪ್ಪುಕಲ್ಲಿಗೆ ಸಂಬಂಧಿಸಿದ ಕಥೆ. ಸತ್ಯಪ್ರಕಾಶ್ ಅವರು ಕಥೆ ಬರೆದಿದ್ದಾರೆ. ವಿಜಾಪುರದ ಬಳಿ ಹೆಚ್ಚು ಚಿತ್ರೀಕರಣ ನಡೆದಿದೆ. ಆಲಮಟ್ಟಿಯ ಹಿನ್ನೀರಿನ ಜೈನಾಪುರ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದ್ದು, ನಮ್ಮ ಚಿತ್ರದ ಚಿತ್ರೀಕರಣವಾಗಿ ಕೆಲವೇ ತಿಂಗಳಲ್ಲೇ ಈ ಹಳ್ಳಿ ನೀರಿನಲ್ಲಿ ಮುಳುಗಡೆಯಾಗಿದೆ. ನಮ್ಮ ಚಿತ್ರವನ್ನು ಮಾರ್ಟಿನ್ ಚಿತ್ರದ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಅವರು ವಿತರಣೆ ಮಾಡುತ್ತಿದ್ದಾರೆ'' ಎಂದು ತಿಳಿಸಿದರು.
ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಶಿವಣ್ಣನಿಂದ ಬಿಗ್ ಅನೌನ್ಸ್ಮೆಂಟ್: ಅಭಿಮಾನಿಗಳಲ್ಲಿ ಕುತೂಹಲ - Shiva Rajkumar
ಸದ್ಯ ತಮ್ಮ 'ಪೌಡರ್' ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಟಿ ಧನ್ಯಾ ರಾಮ್ಕುಮಾರ್ ಮಾತನಾಡಿ, ನನ್ನದು ಈ ಚಿತ್ರದಲ್ಲಿ ಶಿಕ್ಷಕಿಯ ಪಾತ್ರ. ಗಂಗಾ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಚಿತ್ರ ಎರಡೂ ಚೆನ್ನಾಗಿದೆ. ನನಗೆ ಈಗಷ್ಟೇ ವಿಕ್ಕಿ ಅವರು ಚಿತ್ರದ ತುಣುಕು ತೋರಿಸಿದರು. ಅದನ್ನು ವೀಕ್ಷಿಸಿದ ಮೇಲೆ ನಾನಂತೂ ನಮ್ಮ ಈ ಸಿನಿಮಾ ನೋಡಲು ಕಾತರಳಾಗಿದ್ದೇನೆ ಎಂದು ತಿಳಿಸಿದರು.
![Kaalapatthar film team](https://etvbharatimages.akamaized.net/etvbharat/prod-images/26-08-2024/22297765_grsywehgfy.jpg)
ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲನಕೋಟೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಸಂದೀಪ್ ಅವರ ಕ್ಯಾಮರಾ ವರ್ಕ್ ಇದೆ. ಶೀರ್ಷಿಕೆಯಿಂದಲೇ ಸಿನಿಪ್ರೇಕ್ಷಕರಲ್ಲಿ ಕುತೂಹಲ, ನಿರೀಕ್ಷೆ ಹುಟ್ಟಿಸಿರೋ 'ಕಾಲಾಪತ್ಥರ್' ಸೆಪ್ಟೆಂಬರ್ 13 ರಂದು ಚಿತ್ರಮಂದಿರ ಪ್ರವೇಶಿಸಲಿದೆ.