ಡಾಲಿ ಧನಂಜಯ್ ಅಭಿನಯಿಸಿದ ಸಿನಿಮಾ ಬಡವ ರಾಸ್ಕಲ್. ಈ ಚಿತ್ರದಲ್ಲಿ ಧನಂಜಯ್ ಅವರ 'ಬಡವ್ರ ಮಕ್ಳೂ ಬೆಳೀಬೇಕು ಕಣ್ರಯ್ಯಾ' ಎನ್ನುವ ಡೈಲಾಗ್ ಸಾಕಷ್ಟು ವೈರಲ್ ಆಗಿತ್ತು. ಆ ಮಾತೇ ಇದೀಗ ಸಿನಿಮಾ ಶೀರ್ಷಿಕೆಯಾಗಿದೆ.
ಇತ್ತೀಚಿಗೆ ಚಿತ್ರದ ಮುಹೂರ್ತ ಸಮಾರಂಭ ರೇಣುಕಾಂಬ ಥಿಯೇಟರ್ನಲ್ಲಿ ನೆರವೇರಿದೆ. ಬೆಂಗಳೂರು ಪೂರ್ವ ವಲಯದ ಡಿಸಿಪಿ ದೇವರಾಜ್ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಚಿತ್ರತಂಡ ಕೆಲವು ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಮಂಜುಕವಿ ಮಾತನಾಡಿ, "ಡಾಲಿ ಅವರು ಹೇಳಿದ ಮಾತನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಚಿತ್ರದ ಕಥೆ ಬರೆದಿದ್ದೇನೆ. ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳಿಗೆ ಎಷ್ಟೇ ಕಲೆ ಇದ್ದರೂ, ಚೆನ್ನಾಗಿ ಓದುವ ಹಂಬಲವಿದ್ದರೂ ಅವರನ್ನು ಬೆಳೆಸಲು ಯಾರೂ ಮುಂದೆ ಬರುವುದಿಲ್ಲ. ಅವರಲ್ಲಿರುವ ಪ್ರತಿಭೆ ಹಾಗೇ ನಶಿಸಿ ಹೋಗುತ್ತದೆ, ಹಾಗಾಗಬಾರದು. ಪ್ರತಿಭೆಯುಳ್ಳ ಬಡಮಕ್ಕಳ ಕೀರ್ತಿ ಬೆಳಗಬೇಕು. ಇದೇ ಚಿತ್ರದ ಕಥಾಹಂದರ. ಈ ಕಥೆ ಇಷ್ಟವಾಗಿ ಸಿ.ಎಸ್.ವೆಂಕಟೇಶ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ." ಎಂದರು.
ನಿರ್ಮಾಪಕ ಸಿ.ಎಸ್.ವೆಂಕಟೇಶ್ ಮಾತನಾಡಿ, "ನಾನು ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ಚಿತ್ರರಂಗದ ಸಾಕಷ್ಟು ಗಣ್ಯರು ನನಗೆ ಪರಿಚಯ. ಎಷ್ಟೋ ಸ್ನೇಹಿತರು ಚಿತ್ರ ನಿರ್ಮಾಣ ಮಾಡುವಂತೆ ಹೇಳುತ್ತಿದ್ದರು. ಈಗ ಕಾಲ ಕೂಡಿ ಬಂದಿದೆ. ಡಾಲಿ ಅವರು ಹೇಳಿದ ಮಾತೇ ಈ ಚಿತ್ರ ನಿರ್ಮಾಣಕ್ಕೆ ಸ್ಫೂರ್ತಿ. ಮಂಜುಕವಿ ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ನಾನು ಕೂಡ ಬಡತನದಿಂದಲೇ ಬಂದಿರುವವನು. ಹಾಗಾಗಿ ಈ ಕಥೆ ತುಂಬಾ ಇಷ್ಟವಾಯಿತು. ನನ್ನ ಸಹೋದರ ಸಮಾನರಾದ ಡಿಸಿಪಿ ದೇವರಾಜ್ ಚಿತ್ರಕ್ಕೆ ಚಾಲನೆ ನೀಡಿದ್ದಾರೆ" ಎಂದು ಹೇಳಿದರು.
ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ಲಾವಣ್ಯ ವೈಭವಿ ಅಭಿನಯಿಸುತ್ತಿದ್ದಾರೆ. ಫ್ರೆಂಡ್ಸ್ ವಾಸು, ಮೂಗೂರು ಸುರೇಶ್, ಚಂದ್ರಪ್ರಭ, ಚೈತ್ರಾ ಕೊಟ್ಟೂರು, ಮಂಜು ಪಾವಗಡ, ಚಿದಾನಂದ್, ಜಗದೀಶ್ ಕೊಪ್ಪ ಶಿವಾರೆಡ್ಡಿ ಸನತ್, ವಿನೋದ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಿರ್ದೇಶಕ ಮಂಜುಕವಿ ಸಂಗೀತ ನೀಡುತ್ತಿದ್ದಾರೆ. ತಂದೆ ಮಗಳ ಬಾಂಧವ್ಯದ ಹಾಡೊಂದನ್ನು ಅನುರಾಧ ಭಟ್ ಹಾಡಿದ್ದಾರೆ. ಹಿನ್ನೆಲೆ ಸಂಗೀತ ನೀಡುವುದರೊಂದಿಗೆ ವಿನು ಮನಸು ಪ್ರಮುಖಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ ಹಾಗೂ ಗಿರೀಶ್ ಸಾಕಿ, ಸಂಗೀತ ಶೆಟ್ಟಿ, ವಿಕ್ಟರ್ ದಯಾಳ್ ನಿರ್ದೇಶನದ ತಂಡದಲ್ಲಿದ್ದಾರೆ. ಶ್ರೀರಾಮ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ.ಎಸ್.ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಸುಚೇಂದ್ರ ಪ್ರಸಾದ್, ಸಂಗೀತ ಶೆಟ್ಟಿ, ಫ್ರೆಂಡ್ಸ್ ವಾಸು, ಮೂಗೂರು ಸುರೇಶ್, ಜಗದೀಶ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಅವಕಾಶ ಕಡಿಮೆಯಾಗಿವೆಯೇ? - fewer Opportunities for Heroines