ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ನಟ-ನಿರ್ಮಾಪಕ ಡಾಲಿ ಧನಂಜಯ್ ಅವರ ಅಜ್ಜಿ ನಿಧನರಾಗಿದ್ದಾರೆ. ಸದ್ಯ 'ಉತ್ತರಕಾಂಡ' ಚಿತ್ರದ ಕೆಲಸದಲ್ಲಿ ಬ್ಯುಸಿಯಿದ್ದ ನಟನಿಗಿದು ಆಘಾತಕಾರಿ ಸುದ್ದಿಯಾಗಿದೆ. ಸದಾ ನನ್ನೂರು, ನನ್ನ ಕುಟುಂಬ ಅಂತಿದ್ದ ಧನಂಜಯ್ ತಮ್ಮ ಅಚ್ಚುಮೆಚ್ಚಿನ ಅಜ್ಜಿ ಮಲ್ಲಮ್ಮ ಅವರನ್ನು ಕಳೆದುಕೊಂಡಿದ್ದಾರೆ.
ವಯೋಸಹಜ ಕಾಯಿಲೆಯಿಂದ ಮಲ್ಲಮ್ಮ ಅವರಿಂದು ಇಹಲೋಕ ತ್ಯಜಿಸಿದ್ದಾರೆ. ಲಿಂಗದೇವರಾಜೇಗೌಡರ ಪತ್ನಿ ಮಲ್ಲಮ್ಮಗೆ 95 ವರ್ಷ ವಯಸ್ಸಾಗಿತ್ತು. ಹಾಸನ ಜಿಲ್ಲೆಯ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಅವರು ಕೊನೆಯುಸಿಳೆದಿದ್ದಾರೆ.
ಮಲ್ಲಮ್ಮ ಅವರಿಗೆ 5 ಮಕ್ಕಳು. ಎರಡನೇ ಮಗ ಅಡವಿಸ್ವಾಮಿ ಅವರ ಪುತ್ರ ಧನಂಜಯ್. ಪ್ರತೀ ಬಾರಿ ಚುನಾವಣಾ ಸಂದರ್ಭ ಮೊಮ್ಮಗ ಧನಂಜಯ್ ಜೊತೆ ಮತಗಟ್ಟೆಗೆ ತೆರಳಿ ಮಲ್ಲಮ್ಮ ಮತದಾನ ಮಾಡುತ್ತಿದ್ದರು. ಡಾಲಿಗೆ ಮಲ್ಲಮ್ಮ ಅಜ್ಜಿ ಅಂದ್ರೆ ಪಂಚಪ್ರಾಣ. ಈ ಮಾತನ್ನು ಧನಂಜಯ್, 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಹೇಳಿಕೊಂಡಿದ್ದರು.
ನನಗೆ ದೊಡ್ಡ ಸಾಧನೆ ಮಾಡಿದವ್ರು ಅಂದ್ರೆ ಅದು ನಮ್ಮ ಅಜ್ಜಿ. ಅವರು ಮೊಮ್ಮಕ್ಕಳು, ಮರಿ ಮಕ್ಕಳನ್ನು ನೋಡಿದ್ದಾರೆ. ಎಲ್ಲರನ್ನೂ ಒಳ್ಳೆ ದಾರಿಯಲ್ಲಿ ಬೆಳೆಸಿದ್ದಾರೆ. ಎಲ್ಲರನ್ನೂ ಶಿಕ್ಷಕರು, ರೈತರನ್ನಾಗಿ ಬೆಳೆಸಿದ್ದಾರೆ. ನಮಗೂ ಒಳ್ಳೆಯ ಶಿಕ್ಷಣ ಕೊಟ್ಟಿದ್ದಾರೆ. ನಮಗೆಲ್ಲಾ ಸ್ಟ್ರಾಂಗ್ ಬೇರು ಅಂದ್ರೆ ಅದು ಮಲ್ಲಮ್ಮಜ್ಜಿ ಎಂದು ತಿಳಿಸಿದ್ದರು.
ಇದನ್ನೂ ಓದಿ: ದರ್ಶನ್ 'ಡೆವಿಲ್' ರಿಲೀಸ್ ಮುಂದೂಡಿಕೆ ಸಾಧ್ಯತೆ: ಆತಂಕದಲ್ಲಿ ನಿರ್ದೇಶಕ ಪ್ರಕಾಶ್ - Darshan Devil Movie
ಇನ್ನು ಧನಂಜಯ್ ಅವರ ಅಜ್ಜಿ ಮಲ್ಲಮ್ಮ ಅವರಿಗೆ ಮೊಮ್ಮಗ ಧನಂಜಯ್ ಅವರ ಮದುವೆ ನೋಡಬೇಕು ಅನ್ನೋದು ಅವರ ಕನಸಾಗಿತ್ತು. ಅದರಂತೆ ಡಾಲಿ ಕೂಡ ಮದುವೆ ಆಗುತ್ತೇನೆಂದು ಹೇಳಿದ್ದರು. ಆದ್ರೆ ವಿಧಿಯಾಟದ ಮುಂದೆ ಮಲ್ಲಮ್ಮ ಅಜ್ಜಿ, ಮೊಮ್ಮಗನ ಮದುವೆ ನೋಡದೇ ಇಹಲೋಕ ತ್ಯಜಿಸಿರೋದು ಅವರ ಕುಟುಂಬಕ್ಕೆ ಬಹಳ ನೋವುಂಟು ಮಾಡಿದೆ.