ಲೆಜೆಂಡ್ ನಂದಮೂರಿ ತಾರಕ ರಾಮರಾವ್ ಅವರ 101ನೇ ಜನ್ಮದಿನ ಹಿನ್ನೆಲೆ, ಮೆಗಾಸ್ಟಾರ್ ಚಿರಂಜೀವಿ ಸೋಷಿಯಲ್ ಮೀಡಿಯಾದಲ್ಲಿ ನಮನ ಸಲ್ಲಿಸಿದ್ದಾರೆ. ದಂತಕಥೆಯೊಂದಿಗಿನ ಹಳೇ ಚಿತ್ರವನ್ನು ಹಂಚಿಕೊಂಡ ಮೆಗಾಸ್ಟಾರ್, ತೆಲುಗು ಜನರ ಮನದಲ್ಲಿ ಅಚಲವಾಗಿ ಉಳಿದಿರುವ ಎನ್‌ಟಿಆರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚಿರಂಜೀವಿ ಟ್ವೀಟ್: ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಚಿರಂಜೀವಿ, "ಕೆಲವರ ಕೀರ್ತಿ ಅಮರ. ಭವಿಷ್ಯದ ಪೀಳಿಗೆಗೆ ಶಾಶ್ವತ ಉದಾಹರಣೆ. ಇಂದು ನಂದಮೂರಿ ತಾರಕ ರಾಮರಾವ್ ಅವರನ್ನು ಸ್ಮರಿಸುತ್ತ, ಭಾರತ ರತ್ನ ಪ್ರಶಸ್ತಿಯು ಅವರ ಸೇವೆಗೆ ಸೂಕ್ತ ಗೌರವ ಎಂದು ನಾನು ಭಾವಿಸುತ್ತೇನೆ. ತೆಲುಗು ಜನರ ಈ ಬಹುಕಾಲದ ಆಶಯವನ್ನು ಕೇಂದ್ರ ಸರ್ಕಾರ ಈಡೇರಿಸಲಿದೆ ಎಂಬ ಭರವಸೆ ಇದೆ'' ಎಂದು ಬರೆದುಕೊಂಡಿದ್ದಾರೆ.
ತೆಲುಗು ಚಿತ್ರರಂಗದ 'ಐಕಾನ್': ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು, ಎನ್‌ಟಿಆರ್ ಅವರನ್ನು ಸ್ಮರಿಸಿ ಎಕ್ಸ್ ಪೋಸ್ಟ್ ಶೇರ್ ಮಾಡಿದ್ದಾರೆ. ತೆಲುಗು ಚಿತ್ರರಂಗದ 'ಐಕಾನ್' ಎಂದು ಉಲ್ಲೇಖಿಸಿದ ಪ್ರಧಾನಿ ರಾಜಕೀಯದಲ್ಲಿ ಮರೆಯಲಾಗದ ಛಾಪು ಮೂಡಿಸಿದ 'ವಿಷನರಿ ಲೀಡರ್' ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. 'ಉತ್ತಮ ಸಮಾಜಕ್ಕಾಗಿ ಎನ್‌ಟಿಆರ್ ಅವರ ದೂರದೃಷ್ಟಿ'ಯನ್ನು ಈಡೇರಿಸಲು ನಾನು ಮತ್ತು ದೇಶ ಶ್ರಮಿಸುತ್ತದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್: ಲೆಜೆಂಡರಿ ನಟನ 101ನೇ ಜನ್ಮದಿನದಂದು ಎನ್‌ಟಿಆರ್ ಅವರನ್ನು ಸ್ಮರಿಸುತ್ತಿದ್ದೇವೆ. ಅವರು ತೆಲುಗು ಚಿತ್ರರಂಗದ ಐಕಾನ್ ಮತ್ತು ದೂರದೃಷ್ಟಿಯ ನಾಯಕರಾಗಿದ್ದರು. ಸಿನಿಮಾ ಮತ್ತು ರಾಜಕೀಯಕ್ಕೆ ಅವರ ಕೊಡುಗೆಗಳು ಯುವ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ತೆರೆ ಮೇಲಿನ ಅವಿಸ್ಮರಣೀಯ ಪಾತ್ರಗಳಿಂದ ಹಿಡಿದು ಅವರ ಅತ್ಯುತ್ತಮ ನಾಯಕತ್ವದವರೆಗೆ, ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳಲಾಗುತ್ತದೆ. ನಮ್ಮ ಸಮಾಜಕ್ಕಾಗಿ ಅವರ ದೃಷ್ಟಿಕೋನಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಎನ್‌ಟಿಆರ್ ಜನಪ್ರಿಯ ವೃತ್ತಿಜೀವನ ನಡೆಸಿದ್ದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಹಿಂದೂ ದೇವರುಗಳ, ವಿಶೇಷವಾಗಿ ಕೃಷ್ಣನ ಪಾತ್ರದಲ್ಲಿ ಅವರ ಚಿತ್ರಣವು ವ್ಯಾಪಕವಾಗಿ ಗಮನ ಸೆಳೆದಿತ್ತು. ಅಂತಿಮವಾಗಿ ಯಶಸ್ವಿ ರಾಜಕೀಯ ಜೀವನವನ್ನೂ ನಡೆಸಿದರು. 1996ರಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರು ನಿಧನರಾದರು.