ಬೆಂಗಳೂರು: ಪರಸ್ಪರ ಹೊಂದಾಣಿಕೆಯ ಕೊರತೆಯಿಂದ ವಿಚ್ಛೇದನ ಪಡೆದಿರುವುದಾಗಿ ನಟ, ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಹೇಳಿದ್ದಾರೆ. ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಇಬ್ಬರು ಮುಕ್ತವಾಗಿ ಮಾತನಾಡಿದರು.
ಮೊದಲು ಮಾತನಾಡಿದ ಚಂದನ್ ಶೆಟ್ಟಿ, "ಜೂನ್ 7ರಂದು ನ್ಯಾಯಾಲಯ ನಮಗೆ ವಿಚ್ಛೇದನ ನೀಡಿದೆ. ಕಾನೂನಿನ ಪ್ರಕಾರ ವಿಚ್ಛೇದನ ಪಡೆದುಕೊಂಡಿದ್ದೇವೆ. ನಮ್ಮ ಸ್ನೇಹಿತರು, ಕುಟುಂಬಸ್ಥರು ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ದಾರೆ. ನಾವು ಯಾರ ಜೊತೆಗೂ ಮಾತನಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಆದರೆ, ನಮ್ಮ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಬರುತ್ತಿವೆ. ಬೇಡದಿರುವ ವದಂತಿಗಳನ್ನು ಸೃಷ್ಟಿಸಿ ಹರಿಬಿಡುತ್ತಿದ್ದಾರೆ. ಕೆಲವರು ಚೆನ್ನಾಗಿದ್ದೂ ಡಿವೋರ್ಸ್ ಏಕೆ ಅಂತೆಲ್ಲಾ ಕೇಳುತ್ತಿದ್ದಾರೆ. ಹಾಗಾಗಿ ಇವುಗಳಿಗೆಲ್ಲ ಸ್ಪಷ್ಟನೆ ನೀಡುತ್ತಿದ್ದೇವೆ" ಎಂದು ಹೇಳಿದರು.
"ನನ್ನ ಜೀವನಶೈಲಿಯೇ ಬೇರೆ, ಇವರ ಜೀವನಶೈಲಿಯೇ ಬೇರೆ. ನಮ್ಮಿಬ್ಬರ ಆಲೋಚನೆಗಳೂ ಸಹ ಬೇರೆ ಬೇರೆ ಇವೆ. ಇಬ್ಬರೂ ಅರ್ಥ ಮಾಡಿಕೊಂಡು ಜೀವನ ನಡೆಸಬೇಕೆಂದು ಅಂದುಕೊಂಡೆವು. ಆದರೆ, ಅದು ಆಗುತ್ತಿರಲಿಲ್ಲ. ಏನಾದರೊಂದು ವಿಷಯಕ್ಕೆ ಮನಸ್ತಾಪ ಆಗುತ್ತಿತ್ತು. ಸಾಕಷ್ಟು ಬಾರಿ ಸರಿಪಡಿಸಿಕೊಳ್ಳೋಣ ಎಂದು ಅಂದುಕೊಂಡೆವು. ಅದೂ ಸರಿ ಬರಲಿಲ್ಲ. ಆದರೆ, ಹಲವರು ಮಗು ವಿಚಾರಕ್ಕೆ ಡಿವೋರ್ಸ್ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅದು ನಿಜವಲ್ಲ. ಅಂತಿಮವಾಗಿ ಒಂದು ದಿನ ಇಬ್ಬರೂ ಪರಸ್ಪರ ಮಾತಾಡಿಕೊಂಡು ಡಿವೋರ್ಸ್ ಆಗೋಣ ಅಂದುಕೊಂಡು ತೀರ್ಮಾಣ ಮಾಡಿದೆವು. ಅಂದುಕೊಂಡಂತೆ ಈಗ ವಿಚ್ಛೇದನ ಪಡೆದಿದ್ದೇವೆ" ಎಂದು ಚಂದನ್ ಶೆಟ್ಟಿ ತಿಳಿಸಿದರು.
ನಿವೇದಿತಾ ಗೌಡ ಮಾತನಾಡಿ, "ಬೆಳವಣಿಗೆ ಉದ್ದೇಶದಿಂದ ಪರಸ್ಪರ ಮಾತನಾಡಿಕೊಂಡೇ ಈ ಡಿವೋರ್ಸ್ ತೆಗೆದುಕೊಂಡಿದ್ದೇವೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಮ್ಮಿಬ್ಬರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಮೂಲಕ ಮತ್ತಷ್ಟು ನೋವುಂಟು ಮಾಡುತ್ತಿದ್ದಾರೆ. ಆ ರೀತಿಯ ಕಮೆಂಟ್ ಮಾಡುವುದನ್ನು ನಿಲ್ಲಿಸಬೇಕು" ಮನವಿ ಮಾಡಿಕೊಂಡರು.
ಬಿಗ್ ಬಾಸ್ ಸೀಸನ್ 5ರ ಮನೆಯಲ್ಲಿ ಪರಿಚಯವಾಗಿದ್ದ ಇವರು ಮದುವೆಯಾಗಲು ನಿರ್ಧರಿಸಿದ್ದರು. 2019ರಲ್ಲಿ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದರು. 2020ರಲ್ಲಿ ಮದುವೆ ಆಗಿದ್ದರು. ಇದಾದ ಬಳಿಕ ಖಾಸಗಿ ವಾಹಿನಿ ರಿಯಾಲಿಟಿ ಶೋ 'ರಾಜ-ರಾಣಿ' ಸೇರಿದಂತೆ ಹಲವು ಶೋಗಳಲ್ಲಿ ಭಾಗಿಯಾಗಿದ್ದರು. ನಿವೇದಿತಾ ಗೌಡ ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಖ್ಯಾತಿ ಹೊಂದಿದ್ದರು.
ಇದನ್ನೂ ಓದಿ: ಯುವ ವಿಚ್ಛೇದನ ವಿಚಾರ ನಮಗೆ ಗೂತ್ತಿಲ್ಲ: ಶಿವಣ್ಣ ದಂಪತಿ - Yuva Rajkumar Divorce Case