ಮುಂಬೈ: ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ನಡೆಯುತ್ತಿದ್ದು, ಬಾಲಿವುಡ್ ನಟ ಪರೇಶ್ ರಾವಲ್ ತಮ್ಮ ಪತ್ನಿಯೊಂದಿಗೆ ಮುಂಬೈನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಬಳಿಕ ಮಾತನಾಡಿ, "ಯಾರೂ ಮತದಾನ ಮಾಡುವುದಿಲ್ಲವೋ ಅವರಿಗೆ ತೆರಿಗೆ ಹೆಚ್ಚಳ ಅಥವಾ ಇತರ ಶಿಕ್ಷೆಯಂತಹ ಕೆಲವು ನಿಯಮಗಳು ಇರಬೇಕು" ಎಂದರು.
ಮಹಾರಾಷ್ಟ್ರದಲ್ಲಿ ಒಟ್ಟು 13 ಕ್ಷೇತ್ರಗಳಲ್ಲಿ ಐದನೇ ಮತ್ತು ಅಂತಿಮ ಸುತ್ತಿನ ಮತದಾನ ನಡೆಯುತ್ತಿದೆ. ಮುಂಬೈ ಉತ್ತರ, ಮುಂಬೈ ನಾರ್ತ್ ಸೆಂಟ್ರಲ್, ಮುಂಬೈ ನಾರ್ತ್ ವೆಸ್ಟ್, ಮುಂಬೈ ಈಶಾನ್ಯ, ಮುಂಬೈ ಸೌತ್ ಸೆಂಟ್ರಲ್, ಮುಂಬೈ ಸೌತ್, ಥಾಣೆ, ಕಲ್ಯಾಣ್, ಭಿವಂಡಿ, ಪಾಲ್ಘರ್, ನಾಸಿಕ್, ಡಿಂಡೋರಿ ಮತ್ತು ಧುಲೆನಲ್ಲಿ 264 ಅಭ್ಯರ್ಥಿಗಳ ಭವಿಷ್ಯವನ್ನು ಒಟ್ಟು 2.46 ಕೋಟಿ ಜನರು ನಿರ್ಧರಿಸಲು ಅರ್ಹರಾಗಿದ್ದಾರೆ.
ಸರದಿ ಸಾಲಿನಲ್ಲಿ ನಿಂತು ಪರೇಶ್ ರಾವಲ್ ಮತದಾನ: ಮುಂಬೈ 6 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು ಬಾಲಿವುಡ್ ನಟ-ನಟಿಯರು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಪರೇಶ್ ರಾವಲ್ ಕೂಡ ಮತದಾನ ಮಾಡುವ ಮೂಲಕ ತಮ್ಮ ನಾಗರಿಕ ಜವಾಬ್ದಾರಿಯನ್ನು ಪೂರೈಸಿದ್ದಾರೆ. ಇಂದು ಮುಂಜಾನೆಯೇ ಮತ ಚಲಾಯಿಸಿದ ನಟ ಸುದ್ದಿಗಾರರೊಂದಿಗೆ ಮಾತನಾಡುತ್ತ, ತಮ್ಮ ಶಾಯಿ ಬೆರಳನ್ನು ಪ್ರದರ್ಶಿಸಿದರು. ಮತದಾನ ಮಾಡದೇ ಸರ್ಕಾರವು ಇದನ್ನು ಮಾಡುವುದಿಲ್ಲ ಅಥವಾ ಅದನ್ನು ಮಾಡುವುದಿಲ್ಲ ಎಂದು ಹೇಳುವ ಹಾಗಿಲ್ಲ. ನೀವು ಇಂದು ಮತದಾನ ಮಾಡದಿರಲು ನಿರ್ಧರಿಸಿದರೆ, ಅದು ನಿಮ್ಮ ವೈಫಲ್ಯವೇ ಹೊರತು ಸರ್ಕಾರದದ್ದಲ್ಲ. ಹಾಗಾಗಿ ಎಲ್ಲರೂ ಮತದಾನ ಮಾಡಿ" ಎಂದು ಕರೆ ನೀಡಿದರು.
ತಂದೆಯೊಂದಿಗೆ ಪೂಜಾ ಭಟ್ ಮತದಾನ: ನಟಿ-ನಿರ್ದೇಶಕಿ ಪೂಜಾ ಭಟ್ ಅವರು ತಮ್ಮ ತಂದೆ, ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಭಟ್ ಅವರೊಂದಿಗೆ ಮತದಾನ ಮಾಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಇಂದು ಬೆಳಗ್ಗೆ 7 ಗಂಟೆಗೆ ಮತಗಟ್ಟೆಗಳಲ್ಲಿ ಉದ್ದನೆಯ ಸರದಿ ಸಾಲು ನೋಡಿ ನನಗೆ ರೋಮಾಂಚನವಾಯಿತು. ದಯವಿಟ್ಟು ಎಲ್ಲರೂ ಮತದಾನ ಮಾಡಿ ಎಂದು ಟ್ವೀಟ್ ಮಾಡಿದ್ದು, ತಮ್ಮ ರಾಜಕೀಯ ದೃಷ್ಟಿಕೋನಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಹಾಗೆ, ನಟಿ ಟಬು ಕೂಡ ಮತಗಟ್ಟೆಯಲ್ಲಿ ಕಾಣಿಸಿಕೊಂಡರು.
ಕುಟುಂಬ ಸಹಿತ ಮತದಾನ ಮಾಡಿದ ಸೆಲೆಬ್ರಿಟಿಗಳು: ಹಿರಿಯ ನಟರಾದ ನಟ ಅನುಪಮ್ ಖೇರ್, ನಾನಾ ಪಾಟೇಕರ್, ಆರ್ ಮಾಧವನ್ ಹಾಗೂ ಇವರ ಪತ್ನಿ ಸರಿತಾ, ರಣವೀರ್ ಸಿಂಗ್, ನಿರ್ಮಾಪಕ ಕಬೀರ್ ಖಾನ್ ಹಾಗೂ ಅವರ ಪತ್ನಿ ಮಿನಿ ಮಥುರ್, ಹೃತಿಕ್ ರೋಷನ್, ಅವರ ಸಹೋದರಿ ಸುನೈನಾ ರೋಷನ್ ಮತ್ತು ಅವರ ಪೋಷಕರಾದ ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್, ನಿರ್ದೇಶಕರಾದ ಬೋನಿ ಕಪೂರ್ ಮತ್ತು ಪುತ್ರಿ, ನಟಿ ಖುಷಿ ಕಪೂರ್, ಸಲೀಂ ಖಾನ್ ಮತ್ತು ಅವರ ಪತ್ನಿ ಸಲ್ಮಾ ಖಾನ್, ಸಾಜಿದ್ ಖಾನ್, ನಟ ವರುಣ್ ಧವನ್ ಮತ್ತು ಅವರ ತಂದೆ ಡೇವಿಡ್ ಧವನ್, ಅನಿಲ್ ಕಪೂರ್, ಇಮ್ರಾನ್ ಹಶ್ಮಿ, ಮನೋಜ್ ಬಾಜಪೇಯಿ, ಸುರೇಶ್ ಒಬೆರಾಯ್, ನಿರ್ಮಾಪಕ ಕಂ ನಿರ್ದೇಶಕ ಸುಭಾಷ್ ಘಾಯ್, ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ, ನಟಿಯರಾದ ವಿದ್ಯಾ ಬಾಲನ್, ಊರ್ಮಿಳಾ ಮಾತೋಂಡ್ಕರ್ ಸೇರಿದಂತೆ ಅನೇಕರು ಆಯಾ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಇಂದು ಪ್ರಜಾಪ್ರಭುತ್ವದ ಹಬ್ಬ. ಹಾಗಾಗಿ ಮುಂದಿನ 5 ವರ್ಷಗಳ ಕಾಲ ನಮ್ಮ ಸರ್ಕಾರವನ್ನು ಆಯ್ಕೆ ಮಾಡಲು ನಾವು ಮನೆಯಿಂದ ಹೊರಗೆ ಬಂದು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು. ಇವರಷ್ಟೇ ಅಲ್ಲದೇ ಕ್ರಿಕೆಟ್ ಪಟುಗಳಾದ ಸೂರ್ಯಕುಮಾ, ಅಜಿಂಕ್ಯ ರಹಾನೆ ಮತ್ತು ಇವರ ಪತ್ನಿ ರಾಧಿಕಾ ಕೂಡ ತಮ್ಮ ಹಕ್ಕು ಚಲಾಯಿಸಿದರು.