ಬಿಗ್ ಬಾಸ್ ಹತ್ತನೇ ಸೀಸನ್‌ನ ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ ಎಲಿಮಿನೇಷನ್ ಮಾರ್ಗವಾಗಿ ಮನೆಯಿಂದ ಹೊರಬಿದ್ದಿದ್ದಾರೆ. ''ಬಿಗ್ ಬಾಸ್ನ ಈ ಸೀಸನ್‌ನಲ್ಲಿ ನಿಮ್ಮ ಕಾಂಟ್ರಿಬ್ಯೂಷನ್ ನಿಜಕ್ಕೂ ಮಹತ್ವದ್ದು. ನೀವು ಯಾರು ಎಂದು ನನಗೂ ತೋರಿಸಿಕೊಟ್ಟಿದ್ದೀರಿ'' ಎಂಬ ಮೆಚ್ಚುಗೆಯ ಮಾತುಗಳನ್ನು ಕಿಚ್ಚನ ಬಾಯಿಂದಲೇ ಕೇಳಿಸಿಕೊಂಡಿರುವ ನಮ್ರತಾ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ತಮ್ಮ ಪಯಣದ ಬಗ್ಗೆ ಜಿಯೋ ಸಿನಿಮಾದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಎಲಿಮಿನೇಷನ್ ಶಾಕ್! ''ನಾನು ನಿಮ್ಮ ನಮ್ರತಾ ಎಂದು ಮಾತು ಆರಂಭಿಸಿದ ಎಲಿಮಿನೇಟೆಡ್ ಕಂಟಸ್ಟೆಂಟ್, ಬಿಗ್ ಬಾಸ್ ಹತ್ತನೇ ಸೀಸನ್‌ನ ಟಾಪ್ ಸೆವೆನ್ ಸ್ಪರ್ಧಿಗಳಲ್ಲಿ ಒಬ್ಬಳು ನಾನು. ನಿಜಕ್ಕೂ ಬಹಳ ಬೇಸರವಾಗುತ್ತಿದೆ. 19 ಸ್ಪರ್ಧಿಗಳ ಪೈಕಿ, ಏಳನೇ ಸ್ಥಾನಕ್ಕೆ ತಲುಪಿದ್ದು ಖಂಡಿತ ಸುಲಭದ ಸಂಗತಿಯಲ್ಲ. ಇತ್ತೀಚೆಗೆ ಹಳೇ ಸ್ಪರ್ಧಿಗಳೆಲ್ಲ ಬಂದು ಒಂದು ಬಾಂಬ್ ಹಾಕ್ತಾರೆ. ನಿಂಗೆ ಚಾನ್ಸ್ ಇಲ್ಲ ಅಂತಾ ಹೇಳ್ತಾರೆ. ಆಗ ನನ್ನ ಆತ್ಮವಿಶ್ವಾಸ ಕುಗ್ಗಲು ಶುರುವಾಯ್ತು. ಆದರೂ ನನ್ನನ್ನು ನಾನು ಸಂಭಾಳಿಸಿಕೊಂಡು ಆಟ ಆಡಲು ಶುರುಮಾಡಿದೆ. ಇದೀಗ ಮನೆಯಿಂದ ಹೊರಗೆ ಬಂದಿದ್ದು ನಿಜಕ್ಕೂ ಶಾಕ್'' ಆಗಿದೆ ಎಂದು ತಿಳಿಸಿದರು.
'ನನ್ನದು ಏರಿಳಿತದ ಪಯಣ': ಈ 106 ದಿನಗಳ ಪಯಣವನ್ನು ಸಣ್ಣದಾಗಿ ವಿವರಿಸಲು ಸಾಧ್ಯವೇ ಇಲ್ಲ. ಅದರಲ್ಲಿಯೂ ನನ್ನ ಜರ್ನಿ ನಿಜವಾಗಿಯೂ ಏರಿಳಿತದ ಪಯಣವಾಗಿತ್ತು. ಎಲ್ಲಿಂದಲೋ ಶುರುಮಾಡಿ ಎಲ್ಲಿಗೋ ಹೋಗಿ, ಕೆಳಗೆ ಇಳಿದು ಮತ್ತೆ ಮೇಲೆ ಏರಿ ಹೋದ ಜರ್ನಿ ನನ್ನದು ಎಂದು ಹೇಳಿದರು.
ಸ್ನೇಹಿತರ ಜೊತೆ ಮಾತನಾಡುವುದು ನನಗೆ ತುಂಬಾ ಖುಷಿ ಕೊಟ್ಟಿತ್ತು. ಆದರೆ ಆ ಫ್ರೆಂಡ್ಷಿಪ್ನಲ್ಲಿ ಮಾತನಾಡುತ್ತಿದ್ದಾಗ ಬೇರೆಯವರ ಬಗ್ಗೆ ಒಂದು ಒಪಿನಿಯನ್ ಕ್ರಿಯೇಟ್ ಆಗುತ್ತದೆ. ಅವರು ಕೆಟ್ಟವರು, ಇವರು ಒಳ್ಳೆಯವರು ಎಂದೆಲ್ಲಾ ಬರುತ್ತದೆ. ಆದ್ರೆ ಹೋಗ್ತಾ ಹೋಗ್ತಾ ನಾನು ಮೈಚಳಿ ಬಿಟ್ಟು ಅವರ ಜೊತೆಗೆ ಸೇರಲು ಪ್ರಾರಂಭಿಸಿದಾಗ, ಅವರು ನಾನು ಅಂದುಕೊಂಡಷ್ಟು ಕೆಟ್ಟವರಲ್ಲ ಎನಿಸಿತು. ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಆದರೆ ಆಯಾ ಸಂದರ್ಭದಲ್ಲಿ ಎಲ್ಲರೂ ಕೆಟ್ಟವರ ಹಾಗೆ ಕಾಣಿಸುತ್ತಿರುತ್ತಾರೆ. ನಾನೂ ಅಂಥ ಕೆಲ ಸಂದರ್ಭಗಳಲ್ಲಿ ಕೆಟ್ಟವಳಾಗಿರುತ್ತೇನೆ ಎಂದರು.
ಸಣ್ಣ-ಪುಟ್ಟ ತಪ್ಪುಗಳಾಗಿರಬಹುದು: ಬಿಗ್ ಬಾಸ್ ಮನೆಯಲ್ಲಿ ನಾನು ಸಣ್ಣ-ಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ ಕೆಲವರು ಹೇಳುವಂತೆ ಶ್ಯಾಡೋ, ಇನ್‌ಪ್ಲ್ಯೂಯೆನ್ಸ್ ಎಲ್ಲಾ ಆಗಿಲ್ಲ. ನಾನು ನಿಜವಾದ ಸ್ನೇಹಿತರನ್ನು ಕಂಡುಕೊಂಡಿದ್ದೇನೆ. ಆರಂಭದಲ್ಲಿ ಗೇಮ್ ಆಡಲು, ಸ್ಟ್ರಾಟಜಿ ಮಾಡಲು ಗೊತ್ತಾಗುತ್ತಿರಲಿಲ್ಲ. ಆದರೆ ಕಲಿಯುತ್ತ ಬಂದೆ. ಕಲಿಯುವಷ್ಟರಲ್ಲಿ ಸ್ವಲ್ಪ ಸಮಯ ತಗುಲಿತು ಅಷ್ಟೇ. ನಂತರ ನಾನು ಆಟದಲ್ಲಿ ಇಳಿದೆ ಎಂದು ಹೇಳಿದರು.
ಇದೊಂದು ಸೋಲ್‌ಫುಲ್ ಜರ್ನಿ: ಬಿಗ್ ಬಾಸ್ ಮನೆಯಲ್ಲಿ ಕಳೆದ ಅಷ್ಟೂ ದಿನಗಳು ನನ್ನ ಪಾಲಿಗೆ ಸೋಲ್‌ಫುಲ್ ಜರ್ನಿ. ಇಲ್ಲಿ ಯಾರೂ ಕೆಟ್ಟವರಲ್ಲ. ಈ ಪ್ರಯಾಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ರಿಯಲ್ ಫ್ರೆಂಡ್‌ಷಿಪ್ ಮನೆ ಹೊರಗೂ ಮುಂದುರಿಯುತ್ತದೆ ಅಂದುಕೊಂಡಿದ್ದೇನೆ. ಎಲ್ಲರ ಜೊತೆಗೂ ಸಂಪರ್ಕದಲ್ಲಿ ಇರಲು ಬಯಸುತ್ತೇನೆ ಎಂದು ತಿಳಿಸಿದರು.
ಸಂಗೀತಾ ಉತ್ತಮ ಸ್ನೇಹಿತೆ: ನನ್ನ-ಸಂಗೀತ ನಡುವಿನ ಫ್ರೆಂಡ್‌ಷಿಪ್ ಅನ್ನು ಒಂದೇ ಪದದಲ್ಲಿ ಹೇಳಬೇಕು ಅಂದರೆ ಅದು 'ಸಿಸ್ಟರ್ಹುಡ್'. ನನಗೆ ಆ ರೀತಿ ಬಾಂಡಿಂಗ್ ಆಗೋದು ಕಡಿಮೆ. ಆದರೆ ಇಲ್ಲಿ ಆಯ್ತು. ಸಂಗೀತಾ ಏನೇ ಇದ್ರೂ ಮುಖದ ಮೇಲೇ ಹೇಳ್ತಾರೆ. ನೀನು ಇಲ್ಲಿ ತಪ್ಪು ಮಾಡಿದೆ. ಇದು ಸರಿ ಎಂಬುದನ್ನು ನೇರವಾಗಿ ಹೇಳ್ತಾರೆ. ಅಂಥ ಕ್ರಿಟಿಕ್ ಎಲ್ಲರ ಬದುಕಿನಲ್ಲಿಯೂ ಇರಬೇಕು ಅನಿಸುತ್ತದೆ.
'ಅಣ್ಣನ ಸ್ಥಾನ ವಿನಯ್ ತುಂಬಿದ್ದಾರೆ': ನನಗೆ ಅಣ್ಣ ಇಲ್ಲ ಎಂಬ ಕೊರಗು ಇತ್ತು. ಆ ಸ್ಥಾನವನ್ನು ವಿನಯ್ ತುಂಬಿದ್ದಾರೆ. ಹೊರಗಡೆ ಕೂಡ ಆ ಬಾಂಧವ್ಯವನ್ನು ಮುಂದುವರಿಸಲು ಬಯಸುತ್ತೇನೆ. ಇಡೀ ಮನೆಯಲ್ಲಿ ನನಗೆ ಬೇಗನೇ ಮನಸ್ಸಿಗೆ ಹತ್ತಿರವಾದವರು ಪ್ರತಾಪ್. ಆವಾಗವಾಗ ವಿಯರ್ಡ್ ಆಗಿ ಆಡ್ತಾನೆ ನಿಜ. ಆದರೆ ಅವರು ಇರೋದೇ ಹಾಗೆ. ಅವರನ್ನು ಹಾಗೇ ಒಪ್ಪಿಕೊಂಡಿದ್ದೇನೆ ನಾನು. ಮೊದಲು ಅವರು ಒಪಿನಿಯನ್ ಹೇಳುವಾಗ, ಕಮೆಂಟ್ ಮಾಡುವುದನ್ನು ಕೇಳುವಾಗ ಕೋಪ ಬರುತ್ತಿತ್ತು. ಏನಾದ್ರೂ ಹೇಳಿದ್ರೆ ಪರ್ಸನಲ್ ಆಗಿಟ್ಟುಕೊಂಡು ಬಹಳ ದಿನ ಅದನ್ನೇ ಸಾಧಿಸ್ತಿದ್ದರು. ಆದ್ರೀಗ ಬಹಳ ಬದಲಾಗಿದ್ದಾರೆಂದು ತಿಳಿಸಿದರು.
ಪ್ರತಾಪ್ ಪೋಷಕರು ಮುಗ್ಧರು: ಅಪ್ಪ-ಅಮ್ಮ ಇಬ್ಬರೂ ಸಿಕ್ಕಾಪಟ್ಟೆ ಒಳ್ಳೆ ಜನ, ಮುಗ್ಧರು. ನಾನು ನೋಡಿದ ತಕ್ಷಣ ಪಟ್ ಅಂತಾ ಕನೆಕ್ಟ್ ಆದೆ. ಅವರ ಮಾತು ಇಷ್ಟವಾಯ್ತು. ಪ್ರತಾಪ್ 'ನಾನು ನಿಮಗೆ ಸೀರೆ ಕೊಡಿಸ್ತೀನಿ, ನಿಮಗೆ ಓಲೆ ಜುಮ್ಕಿ ಕೊಡಿಸ್ತೀನಿ' ಎಂದು ಹೇಳುತ್ತಿದ್ದರು. ಆದ್ರೆ ಅವರ ತಂದೆ ತಾಯಿ ಸೀರೆ ತಂದುಕೊಟ್ಟಿದ್ದು ನೋಡಿ ಬಹಳ ಎಮೋಷನಲ್ ಆಯ್ತು. ನಮ್ಮೋರು ಅಂತ ಅನಿಸಿತು. ನಾನು ಯಾವಾಗಲೂ ಅವನ ದೀದಿ ಆಗಿಯೇ ಇರುತ್ತೇನೆ. ಅವನು ಯಾವಾಗಲೂ ನನ್ನ ಪುಟ್ಟ ತಮ್ಮನೇ ಎಂದು ತಿಳಿಸಿದರು.
ತುಕಾಲಿ ಫೇಕ್: ನನಗೆ ಅಕ್ಷರಶಃ ಫೇಕ್ ಅನಿಸಿದ್ದು ತುಕಾಲಿ ಸಂತೋಷ್ ಅವರು. ಅವರನ್ನು ಬಿಟ್ಟರೆ ಮತ್ತೆ ವಾಪಸ್ ಮನೆಯೊಳಗೆ ಬಂದಾಗ ಅನಿಸಿದ್ದು ಸ್ನೇಹಿತ್ ಕೂಡ ಫೇಕ್ ಎಂದು. ನಾನು ಅವರ ಕಡೆಯಿಂದ ಸಾಕಷ್ಟು ಬೆಂಬಲ ನಿರೀಕ್ಷಿಸಿದ್ದೆ. ಆದ್ರೆ ಅವರು ಬಂದು ನನ್ನನ್ನು ಬಹಳ ಡಿಮೋಟಿವೇಟ್ ಮಾಡಿದ್ರು. ಇಡೀ ಮನೆಯಲ್ಲಿ ನಾನು ಬಹಳ ಜೆನ್ಯೂನ್ ಆಗಿದ್ದೆ. ಹಾರ್ಟ್‌ಫುಲಿ ಜೆನ್ಯೂನ್ ಆಗಿದ್ದೆ ಎಂದು ತಿಳಿಸಿದರು. ಒಬ್ಬರನ್ನು ಬೈದರೂ, ಪ್ರೀತಿಸದರೂ ಹೃದಯಪೂರ್ವಕವಾಗಿ ಮಾಡ್ತಿದ್ದೆ.
ವಿನಯ್, ಸಂಗೀತಾ ನಿಷ್ಕಲ್ಮಷ: ವಿನಯ್ ಅವರಲ್ಲಿ ನನಗೆ ಯಾವತ್ತೂ ಕಲ್ಮಶ ಕಾಣಿಸಲಿಲ್ಲ. ಸಂಗೀತ ಕೂಡಾ. ಅವರನ್ನು ನಾನು ಬಹಳ ತಪ್ಪು ತಿಳ್ಕೊಂಡಿದ್ದೆ. ಅವರು ಏನನಿಸುತ್ತದೆಯೋ ಅದನ್ನೇ ಮಾತನಾಡ್ತಾರೆ. ಹೇಗನಿಸುತ್ತದೆಯೋ ಹಾಗೇ ಇರ್ತಾರೆ. ಅವರು ಜೆನ್ಯೂನ್ ಅನಿಸುತ್ತಾರೆ ನನಗೆ ಎಂದು ತಿಳಿಸಿದರು.
ಟಾಪ್ 3ನಲ್ಲಿರೋರ್ಯಾರು? ಟಾಪ್ 3ನಲ್ಲಿ ವಿನಯ್, ಸಂಗೀತಾ ಮತ್ತು ತುಕಾಲಿ ಇರುತ್ತಾರೆ. ನನಗೆ ವಿನಯ್ ಗೆಲ್ಲಬೇಕು. ಆದರೆ ಯಾಕೋ ಸಂಗೀತಾ ವಿನ್ ಆಗ್ತಾರೆ ಅಂತಾ ನನ್ನ ಸಿಕ್ಸ್ತ್ ಸೆನ್ಸ್ ಹೇಳ್ತಿದೆ. ನನ್ನ ಪ್ರಕಾರ, ಈ ಸೀಟ್ನಲ್ಲಿ ನನ್ನ ನಂತರ ಕಾರ್ತಿಕ್ ಮಹೇಶ್ ಕೂರುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಯೋ ಸಿನಿಮಾ ಫನ್ ಫ್ರೈಡೆಯ ಎಲ್ಲಾ ಟಾಸ್ಕ್‌ಗಳನ್ನೂ ನಾನು ಎಂಜಾಯ್ ಮಾಡಿದ್ದೇನೆ. ಅದರಲ್ಲಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಲೂನ್ ಒಡೆಯುವ ಟಾಸ್ಕ್ ಅನ್ನು ನಾನು ಸಖತ್ ಎಂಜಾಯ್ ಮಾಡಿದೆ. ಸಂತು-ಪಂತು ಆಟ ನೋಡಿ ಸಿಕ್ಕಾಪಟ್ಟೆ ನಕ್ಕಿದ್ದೇನೆ. ಮೊನ್ನೆ, ಇನ್ನೊಂದು ಫುಟ್‌ಬಾಲ್ ಇತ್ತು. ಅದನ್ನು ಸ್ಮೈಲಿ ಬಾಲ್‌ನಲ್ಲಿ ಹೊಡೆದು ತಳ್ಳಬೇಕು. ಅಲ್ಲಿಯೂ ನಾನು ಸಖತ್ ಎಂಜಾಯ್ ಮಾಡಿದ್ದು ಸಂತು-ಪಂತು ಆಟ ನೋಡಿ ಎಂದು ತಿಳಿಸಿದರು.
ಇದನ್ನೂ ಓದಿ: 'ಇವತ್ತು ನಾನ್ ಹೇಳ್ತೀನಿ, ನೀವ್ ಕೇಳ್ಬೇಕ್': ವಿನಯ್ ಏಟಿಗೆ ಪ್ರತಾಪ್ ತಿರುಗೇಟು!
ಮೈಕ್ ಮಿಸ್ ಮಾಡಿಕೊಳ್ಳುತ್ತೇನೆ: ನಾನಿನ್ನು ಬಹಳ ಮಿಸ್ ಮಾಡಿಕೊಳ್ಳೋದು ಅಂದರೆ ಅದು 'ಮೈಕ್'. ಅದು ನನ್ನ ಮಸಲ್ ಮೆಮೋರಿ ಆಗ್ಬಿಟ್ಟಿದೆ. ಈಗಲೂ ನಾನು ಮೈಕ್ ಅಂತಾ ನೋಡ್ಕೋತಿರ್ತಿನಿ. ಬಿಗ್ ಬಾಸ್ ದನಿಯನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಅವರ ಜೊತೆಗೆ ಫ್ಲರ್ಟ್ ಮಾಡಿದ್ದನ್ನು ಮಿಸ್ ಮಾಡಿಕೊಳ್ತೇನೆ. ಇನ್ನೂ ಮುಂಜಾನೆಯ ಸಾಂಗ್ಸ್ ಮಿಸ್ ಮಾಡಿಕೊಳ್ಳುತ್ತೇನೆ. ಆ ಮನೆಯ ಒಂದೊಂದು ಮೂಲೆಯಲ್ಲೂ ಒಂದೊಂದು ನೆನಪಿದೆ ಎಂದು ತಿಳಿಸಿದರು.
ಇದನ್ನೂ ಓದಿ: 'S/O ಮುತ್ತಣ್ಣ' ಪ್ರಣಂ ದೇವರಾಜ್ಗೆ ಸಿಕ್ಕಳು ಖುಷಿ ರವಿ: 'ದಿಯಾ' ನಟಿಗೆ ಸ್ಪೆಷಲ್ ಬರ್ತ್ಡೇ ಗಿಫ್ಟ್
ಕೊನೆದಾಗಿ ನಾನು ಬಿಗ್ ಬಾಸ್‌ಗೆ ಹೇಳಲಿಚ್ಛಿಸೋದೇನಂದ್ರೆ, 'ಬಿಗ್ ಬಾಸ್, ನಾನು ನಿಮ್ಮ ಧ್ವನಿಗೆ ಬಿದ್ದು ಹೋಗಿದ್ದೇನೆ. ಫಿದಾ ಆಗಿದ್ದೇನೆ. ನೀವು ಹೇಗಿದ್ದೀರ ಅನ್ನೋದನ್ನು ನೋಡಬೇಕು. ಹ್ಯಾಪಿಯೆಸ್ಟ್ ವರ್ಷನ್ ಆಫ್ ನಮ್ರತಾ ಇದು. ನನ್ನನ್ನು ನಾನು ಪ್ರೀತಿಸಲು ಶುರು ಮಾಡಿದ್ದೇನೆ. ನೀವು ಕೊಟ್ಟ ಎಲ್ಲಾ ಸನ್ನಿವೇಶಗಳು ನನಗೆ ಪಾಠಗಳು, ಅವು ನನ್ನನ್ನು ಗಟ್ಟಿಗೊಳಿಸಿವೆ. ಇಲ್ಲಿ ಇಷ್ಟೊಂದು ಸನ್ನಿವೇಶಗಳನ್ನು ಎದುರಿಸಿರುವ ನಾನು, ಹೊರಗಡೆ ಏನು ಬೇಕಾದ್ರೂ ಫೇಸ್ ಮಾಡೋಕೆ ರೆಡಿ ಇದ್ದೇನೆ. ಧನ್ಯವಾದಗಳು ಬಿಗ್ ಬಾಸ್' ಎಂದು ತಿಳಿಸಿದ್ದಾರೆ.