ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಜನಪ್ರಿಯ 'ಬಾಹುಬಲಿ' ಚಿತ್ರದ 'ಕಟ್ಟಪ್ಪ' ಖ್ಯಾತಿಯ ದಕ್ಷಿಣ ಭಾರತದ ಹಿರಿಯ ನಟ ಸತ್ಯರಾಜ್ ಹೇಳಿದ್ದಾರೆ. ಮೋದಿ ಬಯೋಪಿಕ್‌ನಲ್ಲಿ ಸತ್ಯರಾಜ್ ಅಭಿನಯಿಸಲಿದ್ದಾರೆ ಎಂಬ ಊಹಾಪೋಹಗಳ ಬಗ್ಗೆ ಈ ಮೂಲಕ ಖುದ್ದಾಗಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಮೋದಿ ಅವರ ಮತ್ತೊಂದು ಜೀವನಚಿತ್ರ ಬರಲಿದೆ. ಇದರಲ್ಲಿ ಮೋದಿ ಪಾತ್ರದಲ್ಲಿ ಸತ್ಯರಾಜ್ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರರಂಗದ ವಿಶ್ಲೇಷಕ ರಮೇಶ್ ಬಾಲಾ ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಈ ವಿಷಯದ ಬಗ್ಗೆ ಸತ್ಯರಾಜ್ ಪ್ರತಿಕ್ರಿಯೆ ನೀಡಿ, ಇವೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಬಯೋಪಿಕ್‌ನಲ್ಲಿ ನಟಿಸುತ್ತಿದ್ದೇನೆ ಎಂಬ ಸುದ್ದಿ ನನಗೂ ಒಂದು ಸುದ್ದಿಯೇ ಆಗಿದೆ. ಯಾವುದೇ ಸಿನಿಮಾದಲ್ಲಿ ಪ್ರಧಾನಿ ಮೋದಿ ಪಾತ್ರ ಮಾಡಲು ನನ್ನನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹಿರಿಯ ನಟ ಸ್ಪಷ್ಟವಾಗಿ ಹೇಳಿದ್ದಾರೆ. ಇದೇ ವೇಳೆ, ಸೋಷಿಯಲ್ ಮೀಡಿಯಾದ ಮಾಹಿತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮಾಹಿತಿಯಿಲ್ಲದ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಯಾದೃಚ್ಛಿಕ ಸುದ್ದಿಗಳನ್ನು ಹರಡುತ್ತಾರೆ ಎಂದು ಟೀಕಿಸಿದ್ದಾರೆ.
ಅಲ್ಲದೇ, ಯುವತಿ ಹತ್ಯೆ, ರಹಸ್ಯ ಸಂಬಂಧದ ಫಲವೇ? ಎಂಬಂತಹ ಸುದ್ದಿಗಳನ್ನು ಈ ಹಿಂದೆ ಪತ್ರಿಕೆಗಳು ಪ್ರಕಟಿಸುತ್ತಿದ್ದವು. ಅಂತೆಯೇ, ಸಾಮಾಜಿಕ ಮಾಧ್ಯಮವು ಈ ಆಧಾರರಹಿತ ವದಂತಿಗಳಿಗೆ ವೇದಿಕೆಯಾಗಿ ಬೆಳೆದಿದೆ ಎಂದೂ ಸತ್ಯರಾಜ್ ಬೇಸರ ಹೊರಹಾಕಿದ್ದಾರೆ. ಇನ್ನು, ಸತ್ಯರಾಜ್ ತಾವು ಪೆರಿಯಾರ್ ವಾದಿ ಎಂದು ಹೇಳಿಕೊಂಡಿದ್ದು, ಈ ಹಿಂದೆ ಪೆರಿಯಾರಿಸ್ಟ್ ವಿರೋಧಿ ವಿಷಯಗಳ ಪ್ರಚಾರ ಮಾಡುವ ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಪದೇ ಪದೇ ಹೇಳಿದ್ದರು. ಹೀಗಾಗಿ, ಮೋದಿ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿದಾಗ, ಸತ್ಯರಾಜ್ ಅವರು ಪ್ರಧಾನಿ ಮೋದಿ ಅವರ ಜೀವನಚರಿತ್ರೆಯಲ್ಲಿ ನಟಿಸಲು ಹೇಗೆ ಒಪ್ಪುತ್ತಾರೆ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕಣ್ಣಪ್ಪ ಚಿತ್ರಕ್ಕೆ ಎಂಟ್ರಿಕೊಟ್ಟ ಕಾಜಲ್ ಅಗರ್ವಾಲ್