ಮಂಗಳೂರು (ದಕ್ಷಿಣ ಕನ್ನಡ): ಪೌರಾಣಿಕ ಆಶಯದಲ್ಲಿ ನೋಡಿದಾಗ 'ಕಾಲಮಿತಿ' ಯಕ್ಷಗಾನದ ಆಶಯಕ್ಕೆ ಧಕ್ಕೆ ಎಂದೇ ಹೇಳಬಹುದು. ಆದರೆ ಕಾಲವನ್ನು ಹೊಂದಿಕೊಂಡು ನೋಡಿದಾಗ ಕಾಲಮಿತಿ ಧಕ್ಕೆ ಎಂದೆನಿಸದೇ, ಜನರಿಗೆ ಯಾವುದು ಬೇಕೋ ಅದನ್ನು ಬಯಸುತ್ತಿದ್ದಾರೆ. ಅದನ್ನು ಪ್ರಸ್ತುತ ಸಂದರ್ಭದಲ್ಲಿ ಕಾಲಮಿತಿಯ ಮೂಲಕ ಕೊಡಲಾಗುತ್ತಿದೆ ಎಂದು ಪ್ರಸಿದ್ಧ ಭಾಗವತ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ನಗರದಲ್ಲಿ ಕಾಲಮಿತಿ ಯಕ್ಷಗಾನದ ಬಗ್ಗೆ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ಅವರು, ಕಾಲಮಿತಿ ಯಕ್ಷಗಾನದಿಂದ ಕಲಾವಿದರಿಗೆ ಪರ್ಯಾಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೊದಲು ಪರ್ಯಾಯ ಉದ್ಯೋಗ ಕಷ್ಟಸಾಧ್ಯ ಎನಿಸುತ್ತಿತ್ತು. ಅಲ್ಲದೇ ಈಗ ಯಕ್ಷಗಾನಕ್ಕೆ ಬೇಕಾದಷ್ಟು ಕಲಾವಿದರೂ ಸಿಗುತ್ತಿದ್ದಾರೆ. ಅದೇ ಯಕ್ಷಗಾನವನ್ನು ವೃತ್ತಿಯಾಗಿ ತೆಗೆದುಕೊಂಡವರಿಗೆ ಹಗಲು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಗೀತ, ಭರತನಾಟ್ಯದ ರೀತಿ ಯಕ್ಷಶಿಕ್ಷಣಕ್ಕೂ ಯೋಜನೆ ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ. ಯಕ್ಷಧ್ರುವ ಪಟ್ಲ ಫೌಂಡೇಶನ್ನಲ್ಲಿನ ಯಕ್ಷಗುರುಗಳಿಗೆ ನಿಯಮಿತ ಸಿಲೆಬಸ್ನಲ್ಲಿ ಯಕ್ಷಶಿಕ್ಷಣ ನೀಡಬೇಕೆಂದು ಆದೇಶವಿದೆ. ಆದ್ದರಿಂದ ಒಬ್ಬೊಬ್ಬರು ಒಂದೊಂದು ಸಿಲೆಬಸ್ನಲ್ಲಿ ಕಲಿಸಲು ಸಾಧ್ಯವಿಲ್ಲ. ಶೈಲಿ ಯಾವುದೇ ಇರಲಿ. ಆದರೆ ನಿಯಮಿತ ಪಠ್ಯವನ್ನು ಮಾಡಿ ಅದರ ಅನ್ವಯದಂತೆ ಶಿಕ್ಷಣ ನೀಡುವುದು ಉತ್ತಮ ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಕಾಲಮಿತಿ ಯಕ್ಷಗಾನ ಎಂದರೇನು? ಹಿಂದೆ ರಾತ್ರಿ ಪೂರ್ತಿ ಯಕ್ಷಗಾನ ನಡೆಯುತ್ತಿತ್ತು. ಆದರೆ ಕಾಲಕ್ರಮೇಣ ಕಾರ್ಯ ಒತ್ತಡದಿಂದಲೋ, ರಾತ್ರಿಪೂರ್ತಿ ನಿದ್ದೆಗೆಟ್ಟು ಯಕ್ಷಗಾನ ನೋಡುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಾ ಹೋಯಿತು. ಆದ್ದರಿಂದ ಯಕ್ಷಗಾನ ಮೇಳವು ಪರ್ಯಾಯ ವ್ಯವಸ್ಥೆಯತ್ತ ಮುಖಮಾಡಿತು. ಅದಕ್ಕಾಗಿ ಹೊಸ ತಲೆಮಾರಿನ ಪ್ರೇಕ್ಷಕರನ್ನು ಮತ್ತೆ ತನ್ನತ್ತ ಆಕರ್ಷಿಸುವ ಉದ್ದೇಶದಿಂದ ಕಾಲಮಿತಿ ಯಕ್ಷಗಾನ ಎಂಬ ಹೊಸ ಮಾದರಿ ಅಳವಡಿಕೆಯಾಯಿತು. ಈ ಮೂಲಕ ರಾತ್ರಿ 9.30ಕ್ಕೆ ಆರಂಭಗೊಂಡು ಬೆಳಗ್ಗೆ 6ರವರೆಗೆ ನಡೆಯುತ್ತಿದ್ದ ಯಕ್ಷಗಾನ ಕಾಲಮಿತಿಯಿಂದ ಸಂಜೆ 6.30ಕ್ಕೆ ಆರಂಭವಾಗಿ ರಾತ್ರಿ 1 ಗಂಟೆಗೆ ಮುಗಿಸುವ ಹಂತಕ್ಕೆ ಬೆಳೆದು ಬಂದಿದೆ.
ಇದನ್ನೂ ಓದಿ: 'ಕನ್ನಡಕ್ಕೆ ದೈವಿಕ ಶಕ್ತಿಯಿದೆ, ನಾನು ರಾಜ್ ಅಭಿಮಾನಿ': ಮಲಯಾಳಂನ ಖ್ಯಾತ ನಟ - Manoj K Jayan
ಕಾಲಮಿತಿಯಿಂದ ಯಕ್ಷಗಾನ ಪರಂಪರೆಗೆ ಪೆಟ್ಟು ಬೀಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದರೂ, ಪ್ರೇಕ್ಷಕರು ಈ ಹೊಸ ಪದ್ಧತಿಗೆ ಒಗ್ಗಿದ್ದಾರೆ. ಕಾಲಮಿತಿ ಯಕ್ಷಗಾನದಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದ್ದು ಮಾತ್ರ ಸತ್ಯ. ಕಲಾವಿದರಿಗೆ ಪರ್ಯಾಯ ವೃತ್ತಿಯನ್ನು ಅನುಸರಿಸಲು ಕಾಲಮಿತಿ ಯಕ್ಷಗಾನ ಸಹಕಾರಿ ಎಂಬುದು ಅಷ್ಟೇ ಸತ್ಯ.
ಇದನ್ನೂ ಓದಿ: 'ಕನ್ನಡ ಮಾಧ್ಯಮ'ಕ್ಕೆ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸಾಥ್ - Kannada Madhyama