ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಜೊತೆಗೆ ಹೊಸ ಆಲೋಚನೆಗಳುಳ್ಳ ಪ್ರತಿಭೆಗಳ ಆಗಮನ ಮುಂದುವರೆದಿದೆ. ಸಿಎಂ ನಂದಕುಮಾರ್ ನಿರ್ದೇಶಿಸಿರುವ ಹಾಗೂ ಅರುಣ್ - ರಾಣಿ ವರದ್ ಅಭಿನಯಿಸಿರುವ "1990s" ಎಂಬ ಚಿತ್ರ ಮೂಡಿ ಬರುತ್ತಿದೆ. ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಲಹರಿ ವೇಲು ಅವರು ಟೀಸರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ನಿರ್ದೇಶಕ ನಂದಕುಮಾರ್, ನಾನು 20 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಚೊಚ್ಚಲ ಚಿತ್ರ. ಈ ಚಿತ್ರ ಆಗಲು ಪ್ರಮುಖ ಕಾರಣ ಚಿತ್ರದ ಛಾಯಾಗ್ರಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲನಕಾರ ಕೃಷ್ಣ ಹಾಗೂ ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಹಾಗೂ ಚಿತ್ರದ ನಾಯಕ ಅರುಣ್. ಇವರೆಲ್ಲರೂ ನನ್ನ ಜೊತೆಗೆ ಕೈಜೋಡಿಸಿದ್ದರಿಂದ ನಾನು ಈ ಚಿತ್ರ ನಿರ್ದೇಶನ ಮಾಡಲು ಸಾಧ್ಯವಯಿತು. ಇವರೆಲ್ಲರಿಗೂ ಹಾಗೂ ನಿರ್ಮಾಣ ಸಂಸ್ಥೆ ಮನಸ್ಸು ಮಲ್ಲಿಗೆ ಕಂಬೈನ್ಸ್ಗೆ ನಾನು ಆಭಾರಿ. ಇನ್ನು "1990s" ತೊಂಬತ್ತರ ದಶಕದಲ್ಲಿ ನಡೆಯುವ ಪ್ರೇಮಕಥೆ. ಅರುಣ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ಅಭಿನಯಿಸಿದ್ದಾರೆ. ಇವರೊಂದಿಗೆ ಸಾಕಷ್ಟು ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಈ ಚಿತ್ರ ನಿಜಕ್ಕೂ ಸಿನಿಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂದು ತಿಳಿಸಿದರು.
ಹಿರಿಯ ಸಂಕಲನಕಾರ ಜನಾರ್ದನ್ ಅವರ ಪುತ್ರರಾಗಿರುವ ಅರುಣ್ ಮಾತನಾಡಿ, ರಂಗಭೂಮಿ ಕಲಾವಿದನಾಗಿ ಹತ್ತು ವರ್ಷಗಳ ಅನುಭವವಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ನಂದಕುಮಾರ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಚಿತ್ರ ಹಿಡಿಸುವ ನಂಬಿಕೆ ಇದೆ. ಈ ಚಿತ್ರದಲ್ಲಿ ನನ್ನದು ಮುಗ್ಧ ಪ್ರೇಮಿಯ ಪಾತ್ರ ಎಂದು ತಿಳಿಸಿದರು.
ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ '1990s' ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರಕ್ಕೆ ಹಾಲೇಶ್ ಅವರ ಕ್ಯಾಮರಾ ವರ್ಕ್ ಹಾಗೂ ಮಹಾರಾಜ ಸಂಗೀತವಿದ್ದು, ಕೃಷ್ಣ ಅವರ ಸಂಕಲನ, ಸಾದಿಕ್ ಸರ್ದಾರ್ ನೃತ್ಯ ಸಂಯೋಜನೆ ಇದೆ. ಟೀಸರ್ನಿಂದ ಗಮನ ಸೆಳೆಯುತ್ತಿರೋ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಶೀಘ್ರದಲ್ಲೇ ತೆರೆಕಾಣಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024: ವಿಜೇತರ ಪಟ್ಟಿ ಇಲ್ಲಿದೆ - Miss and Mrs India Karnataka