ಹೈದರಾಬಾದ್: ತೆಲುಗು ರಾಜ್ಯಗಳಲ್ಲಿ ವರುಣಾರ್ಭಟ ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರು ದೊಡ್ಡ ಮೊತ್ತದ ದೇಣಿಗೆ ಘೋಷಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಹದ ಪರಿಹಾರ ಕಾರ್ಯಕ್ಕಾಗಿ ವೈಯಕ್ತಿಕವಾಗಿ 6 ಕೋಟಿ ರೂ. ನೀಡುತ್ತಿದ್ದೇನೆ. ಇದರಲ್ಲಿ ಆಂಧ್ರ ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಲಾ 1 ಕೋಟಿ ರೂಪಾಯಿ ಮತ್ತು ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿಗಳಿಗೆ 4 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಆಂಧ್ರಪ್ರದೇಶದಲ್ಲಿ ಅದರಲ್ಲೂ ವಿಜಯವಾಡ ಜಿಲ್ಲೆಯಲ್ಲಿ ಪ್ರವಾಹ ಅವಾಂತರ ಸೃಷ್ಟಿಸಿದೆ. ರಾಜ್ಯ ಸರ್ಕಾರ ಗಮನಾರ್ಹ ಪರಿಹಾರ ಕಾರ್ಯಗಳೊಂದಿಗೆ ಹೆಜ್ಜೆ ಹಾಕುತ್ತಿದೆ. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಪ್ರವಾಹ ಪರಿಹಾರ ಕಾರ್ಯಾಚರಣೆಗಳನ್ನು ಬೆಂಬಲಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಬೇಕೆಂದು ಸಹ ಕರೆ ನೀಡಿದ್ದಾರೆ.
ರಾಜ್ಯದ ಯೋಗಕ್ಷೇಮ ಬಯಸುವ ಪ್ರತೀ ವ್ಯಕ್ತಿಯೂ ಇಂಥ ಪರಿಸ್ಥಿತಿಯಲ್ಲಿ ನೆರವಾಗಬೇಕು. ಹಾನಿಗೊಳಗಾದ ಜಿಲ್ಲೆಗಳಿಗೆ ಸರ್ಕಾರ 80 ಕೋಟಿ ರೂ. ವ್ಯಯಿಸುತ್ತಿದೆ. ಮುಂದೆ ಇಂಥ ಅನಾಹುತಗಳು ಸಂಭವಿಸದಂತೆ ಪ್ರತೀ ನಗರಕ್ಕೂ ಮಾಸ್ಟರ್ ಪ್ಲಾನ್ ರೂಪಿಸಬೇಕಿದೆ ಎಂದು ತಿಳಿಸಿದರು.
ಭಾರತೀಯ ವಾಯುಪಡೆಯು (IAF) ಪರಿಹಾರ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಪೂರೈಸಲು 6 Mi-17 ಚಾಪರ್‌ಗಳು ಮತ್ತು 2 ಚೇತಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಎನ್‌ಟಿಆರ್ ಜಿಲ್ಲೆಯಲ್ಲಿ ಈವರೆಗೆ 50,000 ಕೆ.ಜಿಯ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗಿದೆ.
ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಶ್ಲಾಘಿಸಿದ್ದಾರೆ. "ಸಿಎಂ ಚಂದ್ರಬಾಬು ನಾಯ್ಡು ಅವರು ಈ ವಿಪತ್ತಿನ ಸಮಯದಲ್ಲಿ ದಣಿವರಿಯದೆ ಹೇಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಹೆಲಿಕಾಪ್ಟರ್ ಮತ್ತು ಡ್ರೋನ್‌ಗಳನ್ನು ಬಳಸಿ ಹೇಗೆ ಸಂತ್ರಸ್ತರಿಗೆ ಆಹಾರ ತಲುಪಿಸುತ್ತಿದ್ದಾರೆಂಬುದನ್ನು ನಾವು ನೋಡುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸುವುದು ಪ್ರತಿಯೊಬ್ಬರ ಜವಾಬ್ದಾರಿ" ಎಂದು ತಿಳಿಸಿದ ಪವನ್ ಕಲ್ಯಾಣ್ ಏಕತೆ ಮತ್ತು ಸಹಕಾರಕ್ಕೆ ಸರ್ವಪಕ್ಷಗಳಿಗೂ ಕರೆ ನೀಡಿದರು.
ಪವನ್ ಕಲ್ಯಾಣ್ ಅವರಲ್ಲದೇ ತೆಲುಗು ಚಿತ್ರರಂಗದ ಮಹೇಶ್ ಬಾಬು 1 ಕೋಟಿ ರೂ., ಚಿರಂಜೀವಿ 1 ಕೋಟಿ ರೂ., ಅಲ್ಲು ಅರ್ಜುನ್ 1 ಕೋಟಿ ರೂ., ಪ್ರಭಾಸ್ 2 ಕೋಟಿ ರೂಪಾಯಿ, ಜೂನಿಯರ್ ಎನ್‌ಟಿಆರ್ 1 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ.