ಬೆಂಗಳೂರು: ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಹೆಚ್ಚು ಮೆಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಬೆಳ್ಳಿ ತೆರೆಮೇಲೆ ಮಿಂಚಬೇಕೆಂಬ ಕನಸು ಹೊತ್ತು ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ. ಈ ಸಾಲಿಗೆ 'ಅಣ್ಣಯ್ಯ' ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ಸೇರಿದ್ದಾರೆ.
'ಅಪಾಯವಿದೆ ಎಚ್ಚರಿಕೆ' ಚಿತ್ರದ ಮೂಲಕ ವಿಕಾಶ್ ಬೆಳ್ಳಿತೆರೆ ನಾಯಕ ನಟನಾಗುತ್ತಿದ್ದಾರೆ. ಇತ್ತೀಚಿಗೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಮಾತನಾಡಿ, "ನನಗೂ ಚಿತ್ರರಂಗಕ್ಕೂ ಹತ್ತು ವರ್ಷಗಳ ನಂಟು. ಕೆಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿದ್ದೆ. ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಪಂಚಭೂತಗಳ ಆಧಾರದ ಮೇಲೆ ಕಥೆ ಹೆಣೆಯಲಾಗಿದೆ. ಒಂದೊಂದು ಪಾತ್ರ ಒಂದೊಂದು ತತ್ವವನ್ನು ಪ್ರತಿನಿಧಿಸುತ್ತದೆ. ವಿಕಾಶ್ ಉತ್ತಯ್ಯ ಸೂರಿ ಪಾತ್ರದಲ್ಲಿ, ರಾಘವ್ ಕೊಡಚಾದ್ರಿ ಹಾಗೂ ಮಿಥುನ್ ತೀರ್ಥಹಳ್ಳಿ ವಿಕಾಶ್ ಅವರ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ಭಗವತಿ ರಾಧಾ ಎಂಬ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ. ಸಾಹಸ, ಕುತೂಹಲ, ಹಾರರ್ ಚಿತ್ರ ಇದಾಗಿದೆ. ಸುನಾದ್ ಗೌತಮ್ ಛಾಯಾಗ್ರಹಣದೊಂದಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಮೂರು ಹಾಡುಗಳಿವೆ. ಆನಂದ್ ಆಡಿಯೋದವರು ಆಡಿಯೋ ಹಕ್ಕು ಪಡೆದುಕೊಂಡಿದ್ದಾರೆ. ಹರ್ಷಿತ್ ಪ್ರಭು ಸಂಕಲನವಿದೆ" ಎಂದರು.
ನಟ ವಿಕಾಶ್ ಉತ್ತಯ್ಯ ಮಾತನಾಡಿ, "ಸಿನಿಮಾ ಅನ್ನುವುದು ಕೃತಿ, ಹಾಗೆಯೇ ಕೃಷಿ. ಅದನ್ನು ರಚಿಸಿ, ರುಚಿಸಿ ನಿರ್ದೇಶಿಸುವುದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಅವರ ಬಹು ದಿನಗಳ ಕನಸು. ಆ ಕನಸು ಇಂದು ನನಸಾಗಿದೆ. ಚಿತ್ರಕ್ಕೆ ಅವರ ಶ್ರಮ ಹೆಚ್ಚಿದೆ. ನಮ್ಮನ್ನೆಲ್ಲಾ ಅವರು ಆಡಿಷನ್ ಮಾಡಿದ ರೀತಿಯೇ ವಿಭಿನ್ನ. ಸೂರಿ ಎಲ್ಲರಿಗೂ ಇಷ್ಟವಾಗುವ ಪಾತ್ರ" ಎಂದು ಹೇಳಿದರು.
ನಟ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.
'ಕದ್ದು ಮಚ್ಚಿ' ಸಿನಿಮಾದ ನಂತರ ನಿರ್ಮಾಪಕ ಮಂಜುನಾಥ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಇವರ ಸಹೋದರಿ ಪೂರ್ಣಿಮಾ ಕೂಡ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ. ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ಬಿಳಿಚುಕ್ಕಿ ಹಳ್ಳಿಹಕ್ಕಿ'ಯಲ್ಲಿ ಕಾಜಲ್ ಕುಂದರ್ ನಾಯಕಿ: ಪೋಸ್ಟರ್ ರಿವೀಲ್