ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. ಶುಕ್ರವಾರ ಗುಜರಾತ್ನ ಜಾಮ್ನಗರದಲ್ಲಿ ಗ್ರ್ಯಾಂಡ್ ಈವೆಂಟ್ ಆರಂಭವಾಗಿದ್ದು, ಇಂದು ಪೂರ್ಣಗೊಳ್ಳಲಿದೆ. ಶನಿವಾರ, 2ನೇ ದಿನದಂದು ಬಾಲಿವುಡ್‌ನ ಖಾನ್‌ತ್ರಯರು ವೇದಿಕೆಯ ಮೆರುಗು ಹೆಚ್ಚಿಸಿದ್ದು, ಸಂಭ್ರಮದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಅಭಿನಯದ ಬ್ಲಾಕ್ಬಸ್ಟರ್ ಹಿಟ್ 'ಆರ್ಆರ್ಆರ್'ನ ನಾಟು ನಾಟು ಹಾಡಿನ ಹುಕ್ ಸ್ಟೆಪ್ ಅನ್ನು ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಮಾಡಿ ವೇದಿಕೆಯಲ್ಲಿ ಧೂಳೆಬ್ಬಿಸಿದರು. ಅಂಬಾನಿ ಕುಟುಂಬದ ವಿಶೇಷ ಕ್ಷಣವನ್ನು ಆಸ್ಕರ್ ವಿಜೇತ ಹಾಡಿನ ಮೂಲಕ ಮತ್ತಷ್ಟು ವಿಶೇಷವಾಗಿಸಲಾಯಿತು.
ಶಾರುಖ್, ಸಲ್ಮಾನ್ ಮತ್ತು ಅಮೀರ್ ವರ್ಷಗಳ ನಂತರ ವೇದಿಕೆಯೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಅದ್ಭುತ ಪ್ರದರ್ಶನದ ಮೂಲಕ ಕಾರ್ಯಕ್ರಮದಲ್ಲಿ ಸೇರಿದ್ದ ವಿವಿಧ ಕ್ಷೇತ್ರಗಳ ಖ್ಯಾತನಾಮರು, ಹೊರಗಿನ ಅಭಿಮಾನಿಗಳಿಗೂ ಭರಪೂರ ಮನರಂಜನೆಯ ರಸದೌತಣ ಉಣಬಡಿಸಿದರು. ಎಸ್‌ಆರ್‌ಕೆ ಫ್ಯಾನ್ಸ್ ಕ್ಲಬ್ ಒಂದರಿಂದ ಪೋಸ್ಟ್ ಮಾಡಲಾಗಿರುವ ವಿಡಿಯೋಗಳಲ್ಲಿ ಎಸ್‌ಆರ್‌ಕೆ, ಸಲ್ಲು ಮತ್ತು ಅಮೀರ್ ಕಾರ್ಯಕ್ರಮಕ್ಕಾಗಿ ಕುರ್ತಾ-ಪೈಜಾಮಾ ಧರಿಸಿರುವುದನ್ನು ಕಾಣಬಹುದು.
ವೈರಲ್ ವಿಡಿಯೋಗಳಲ್ಲಿ ಬಾಲಿವುಡ್‌ನ ಮೂವರು ದಿಗ್ಗಜರು ಸೂಪರ್ ಹಿಟ್ ಸಾಂಗ್ ಚೈಯ್ಯಾ ಚೈಯ್ಯಾ, ಮುಜ್ ಸೆ ಶಾದಿ ಕರೋಗಿ ಸಿನಿಮಾದ ಜೀನೆ ಕೆ ಹೈ ಚಾರ್ ದಿನ್ ಮತ್ತು ರಂಗ್ ದೇ ಬಸಂತಿ ಸಿನಿಮಾದಿಂದ ಮಸ್ತಿ ಕಿ ಪಾಠ್ ಶಾಲಾ ಸೇರಿದಂತೆ ಕೆಲವು ಹಾಡುಗಳಿಗೆ ಹೆಜ್ಜೆ ಹಾಕಿದರು. ಮತ್ತೊಂದು ವಿಡಿಯೋದಲ್ಲಿ, ಎಸ್‌ಆರ್‌ಕೆ ತಮ್ಮ ಬ್ಲಾಕ್ಬಸ್ಟರ್ ಸಿನಿಮಾ ಪಠಾಣ್ನ ಜೂಮೆ ಜೋ ಪಠಾಣ್ ಹಾಡಿಗೆ ಸಹನೃತ್ಯಗಾರರ ಜೊತೆ ಸೇರಿ ಮಸ್ತ್ ಡ್ಯಾನ್ಸ್ ಮಾಡಿದರು.
ಇದನ್ನೂ ಓದಿ: ಅನಂತ್ ಅಂಬಾನಿ ಗ್ರ್ಯಾಂಡ್ ಪ್ರೀ ವೆಡ್ಡಿಂಗ್ ಸೆಲೆಬ್ರೇಶನ್ ಫೋಟೋಗಳಿಲ್ಲಿವೆ ನೋಡಿ
ಎಸ್‌ಆರ್‌ಕೆ ಮತ್ತು 3 ಖಾನ್ಸ್ ಪರ್ಫಾಮೆನ್ಸ್ ನೆಟ್ಟಿಗರ ಹೃದಯ ಗೆದ್ದಿದ್ದು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಪಡೆದಿವೆ. ಅಲ್ಲದೇ, ಶಾರುಖ್ ಖಾನ್ ನಿರೂಪಕನಾಗಿಯೂ ಮಿಂಚು ಹರಿಸಿರುವ ವಿಡಿಯೋಗಳೂ ಹೊರಬಿದ್ದಿವೆ. ಹಲವು ವಿಡಿಯೋಗಳಲ್ಲಿ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಗಾಯಕ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಸೇರಿ ವೇದಿಕೆಯ ಆಕರ್ಷಣೆ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರ ದಂಡು: ಧೋನಿ ಲುಕ್ಗೆ ಫ್ಯಾನ್ಸ್ ಫಿದಾ
ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಈ ವರ್ಷದ ಕೊನೆಯಲ್ಲಿ ಕೈಗಾರಿಕೋದ್ಯಮಿ ವೀರೆನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಜೊತೆ ಹಸೆಮಣೆ ಏರಲಿದ್ದಾರೆ. ಸದ್ಯ ಗುಜರಾತ್ನ ಜಾಮ್ನಗರದಲ್ಲಿ ವೈಭವದ ಪ್ರೀ-ವೆಡ್ಡಿಂಗ್ ಸೆಲೆಬ್ರೇಶನ್ಗಳು ಜರುಗುತ್ತಿವೆ. ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ವರುಣ್ ಧವನ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಅನನ್ಯಾ ಪಾಂಡೆ, ಆದಿತ್ಯ ರಾಯ್ ಕಪೂರ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ರಣ್ಬೀರ್ ಕಪೂರ್, ಆಲಿಯಾ ಭಟ್, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಪಾಂಡ್ಯ ಬ್ರದರ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತನಾಮರು, ರಾಜಕಾರಣಿಗಳು, ವಿಶ್ವ ನಾಯಕರು ಮತ್ತು ಉದ್ಯಮಿಗಳು ಕಾಣಿಸಿಕೊಂಡಿದ್ದಾರೆ.