ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಆಪ್ತ ಸ್ನೇಹಿತ, ವೈಎಸ್‌ಆರ್‌ಸಿಪಿ ಶಾಸಕ ಶಿಲ್ಪಾ ರವಿ (ಸಿಂಗಾರೆಡ್ಡಿ ರವಿಚಂದ್ರ ಕಿಶೋರ್ ರೆಡ್ಡಿ) ಅವರ ಮನೆಗೆ ಶನಿವಾರ ಭೇಟಿ ನೀಡಿದ್ದರು. ಆಂಧ್ರಪ್ರದೇಶದ ನಂದ್ಯಾಲ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಸೇರಿದ್ದ ಫೊಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ನಂದ್ಯಾಲ್ ಪೊಲೀಸರು ಈ ಕುರಿತು ಎಫ್‌ಐಆರ್ ದಾಖಲಿಸಿದ್ದಾರೆ.
ಆಂಧ್ರಪ್ರದೇಶದ ವಿಧಾನಸಭೆ ಸೇರಿದಂತೆ, 25 ಲೋಕಸಭಾ ಸ್ಥಾನಗಳಿಗೆ ಮೇ 13ರಂದು ಅಂದರೆ ನಾಳೆ (ಸೋಮವಾರ) ಮತದಾನ ನಡೆಯಲಿದೆ. ಶಿಲ್ಪಾ ರವಿ ನಂದ್ಯಾಲ್‌ನಿಂದ ಮತ್ತೊಮ್ಮೆ ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಈ ಮಧ್ಯೆ ಶನಿವಾರ ಶಾಸಕರ ಮನೆಗೆ ನಟ ಮತ್ತು ಕುಟುಂಬಸ್ಥರು ಭೇಟಿ ನೀಡಿದ್ದರು. ಅವರನ್ನು ನೋಡಲು ದೊಡ್ಡ ಸಂಖ್ಯೆಯ ಜನಸಮೂಹ ಬಂದು ಸೇರಿತ್ತು. ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಲಭ್ಯವಿದೆ. ಕ್ಷೇತ್ರದ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯದಿರುವ ಹಿನ್ನೆಲೆಯಲ್ಲಿ 'ಪುಷ್ಪ' ಸಿನಿಮಾ ನಟ ಮತ್ತು ವೈಎಸ್‌ಆರ್‌ಸಿಪಿ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ಲು ಅರ್ಜುನ್ ಶಾಸಕರ ಮನೆಗೆ ಭೇಟಿ ನೀಡಿ ತಮ್ಮ ಬೆಂಬಲ ಸೂಚಿಸಿದ್ದಾರೆ. ನಟ ಆಗಮಿಸಿದ ಸುದ್ದಿ ತಿಳಿದ ಜನರು ಶಾಸಕರ ನಿವಾಸದೆದುರು ಬಂದು ಜಮಾಯಿಸಿದ್ದರು. ಅಲ್ಲು ಅರ್ಜುನ್ ಅವರು ಪತ್ನಿ ಸ್ನೇಹಾ ರೆಡ್ಡಿ, ಶಿಲ್ಪಾ ರವಿ ಮತ್ತು ಕುಟುಂಬ ಸದಸ್ಯರೊಂದಿಗೆ ಬಾಲ್ಕನಿಯಲ್ಲಿ ನಿಂತು ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ್ದಾರೆ. 'ಪುಷ್ಪ' 'ಪುಷ್ಪ' ಎಂಬ ಘೋಷಣೆಗೆ ಅವರು ಸ್ಪಂದಿಸಿದ್ದಾರೆ.
ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚುನಾವಣಾ ಸಂಹಿತೆಯ ಸೆಕ್ಷನ್ 144 ಮತ್ತು ಎಪಿ ಪೊಲೀಸ್ ಕಾಯ್ದೆಯ ಸೆಕ್ಷನ್ 31 ಜಾರಿಯಲ್ಲಿದ್ದು, ನಿಯಮ ಉಲ್ಲಂಘನೆ ಆರೋಪದಡಿ ನಟ ಮತ್ತು ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ರಾಮ್ ಚರಣ್, ಅಲ್ಲು ಅರ್ಜುನ್ ಸುತ್ತುವರಿದ ಸಾವಿರಾರು ಅಭಿಮಾನಿಗಳು: ವಿಡಿಯೋ ನೋಡಿ - Ram Charan Allu Arjun
ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, ನಂದ್ಯಾಲ್ ಜನರ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. ಶಿಲ್ಪಾ ರವಿ ಅವರ ಆತಿಥ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಚುನಾವಣೆ ಸೇರಿದಂತೆ ನಿಮ್ಮ ಜೀವನಕ್ಕೆ ನನ್ನ ಶುಭ ಹಾರೈಕೆಗಳು. ನನ್ನ ಪ್ರೀತಿ ಮತ್ತು ಬೆಂಬಲ ನಿಮ್ಮೊಂದಿಗೆ ಸದಾ ಇರಲಿದೆ" ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಶಿಲ್ಪಾ ರವಿ ಕೂಡ ಎಕ್ಸ್ನಲ್ಲಿ ಅಲ್ಲು ಅರ್ಜುನ್ ಜನಸಮೂಹದತ್ತ ಕೈ ಬೀಸುವ ವಿಡಿಯೋ ಹಂಚಿಕೊಂಡಿದ್ದಾರೆ. ನಟ ನಂದ್ಯಾಲಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. "ನಿಮ್ಮ ಸ್ನೇಹ, ಬೆಂಬಲಕ್ಕೆ ಕೃತಜ್ಞ" ಎಂದು ಬರೆದುಕೊಂಡಿದ್ದಾರೆ.