ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ಸರ್ಫಿರಾ ಟ್ರೇಲರ್ ಇಂದು ಅನಾವರಣಗೊಂಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೊಂಗರ ಆ್ಯಕ್ಷನ್ ಕಟ್ ಹೇಳಿರುವ ಸರ್ಫಿರಾ ತಮಿಳಿನ ಸೂರರೈ ಪೊಟ್ರು ಚಿತ್ರದ ಹಿಂದಿ ರೀಮೇಕ್. ತಮಿಳು ಚಿತ್ರದಲ್ಲಿ ಸೂರ್ಯ ಮುಖ್ಯಭೂಮಿಕೆ ವಹಿಸಿದ್ದು, ಹಿಂದಿಯಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಸೂರ್ಯ ಅವರ ತಮಿಳು ಚಿತ್ರಕ್ಕೂ ಸುಧಾ ಕೊಂಗರ ಅವರೇ ಆ್ಯಕ್ಷನ್ ಕಟ್ ಹೇಳಿದ್ದರು.
ಸರ್ಫಿರಾ ಟ್ರೇಲರ್, ತಮ್ಮ ಬ್ಲಾಕ್‌ಬಸ್ಟರ್ ತಮಿಳು ಚಿತ್ರದ ಹಿಂದಿ ವರ್ಷನ್ಗಾಗಿ ಸುಧಾ ಮರುಸೃಷ್ಟಿಸಿರುವ ಪ್ರಪಂಚದ ಒಂದು ನೋಟವನ್ನೊಳಗೊಂಡಿದೆ. ಅಕ್ಷಯ್ ಕುಮಾರ್ ದೊಡ್ಡ ಕನಸು ಕಾಣುವ ಹಳ್ಳಿಯಿಂದ ಬಂದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸ್ವಂತ ವಿಮಾನಯಾನವನ್ನು ಪ್ರಾರಂಭಿಸುವ ಕನಸನ್ನು ನನಸಾಗಿಸಲು ಪ್ರಬಲ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಶಾಹಿಗಳನ್ನು ಎದುರಿಸುತ್ತಾರೆ.
ಜಿ.ಆರ್ ಗೋಪಿನಾಥ್ ಬರೆದಿರುವ 'ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ' ಎಂಬ ಆಟೋಬಯೋಗ್ರಾಫಿಯನ್ನು ಆಧರಿಸಿದೆ. ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಗೋಪಿನಾಥ್ ಎದುರಿಸಿದ ಸವಾಲುಗಳನ್ನು ಈ ಪುಸ್ತಕ ವಿವರಿಸುತ್ತದೆ. ಸುಧಾ ಅವರು ಗೋಪಿನಾಥ್ ಅವರ ಜೀವನವನ್ನು ಕಾಲ್ಪನಿಕವಾಗಿ ಅಳವಡಿಸಿದ್ದು, ಮುಖ್ಯ ಪಾತ್ರವನ್ನು ಸದ್ಯದ ಸಂದರ್ಭಕ್ಕೆ ಹೊಂದಿಸಿದ್ದಾರೆ.
ಸರ್ಫಿರಾ ಟ್ರೇಲರ್ ಅನಾವರಣಕ್ಕೂ ಮುನ್ನ ಅಕ್ಷಯ್ ಕುಮಾರ್ ತಮ್ಮ ಚಿತ್ರದಿಂದ ಆಕರ್ಷಕ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದರು. ಪೋಸ್ಟರ್, ಅಕ್ಷಯ್ ಕುಮಾರ್ ಬೈಕ್ನಲ್ಲಿದ್ದು, ಹಿನ್ನೆಲೆಯಲ್ಲಿ ವಿಮಾನವಿದೆ. ಜೊತೆಗೆ "ದೊಡ್ಡ ಕನಸು ಕಾಣಿ, ಅವರು ನಿಮ್ಮನ್ನು ಕ್ರೇಜಿ ಎಂದು ಕರೆಯುತ್ತಾರೆ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಪುಷ್ಪ 2 vs ಛಾವಾ: ರಶ್ಮಿಕಾರ ಎರಡೂ ಸಿನಿಮಾಗಳು ಒಂದೇ ದಿನ ತೆರೆಗೆ; ಬಾಕ್ಸ್ ಆಫೀಸ್ ಫೈಟ್ ಪಕ್ಕಾ - Pushpa 2 Vs Chhava
'ಸರ್ಫಿರಾ' ತನ್ನ ತಮಿಳು ವರ್ಷನ್ನ ಯಶಸ್ಸಿನಿಂದ ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಕ್ಷಯ್ ಅವರ ಕೊನೆಯ ಕೆಲ ಸಿನಿಮಾಗಳ ಯಶಸ್ಸಿನ ವಿಚಾರದಲ್ಲಿ ಏರಿಳಿತವಾಗಿದ್ದು, ಈ ಚಿತ್ರದ ಯಶಸ್ಸು ಬಹಳ ಮುಖ್ಯವಾಗಿದೆ. ಚಿತ್ರದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್ ಮತ್ತು ಸೀಮಾ ಬಿಸ್ವಾಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರಚಾರದಿಂದ ಸಾಕಷ್ಟು ಗಮನ ಸೆಳೆಯುತ್ತಿರುವ ಈ ಸಿನಿಮಾ ಮುಂದಿನ ತಿಂಗಳು ಜುಲೈ 12 ರಂದು ಬಿಡುಗಡೆ ಆಗಲಿದೆ. ಚಿತ್ರ ಅಕ್ಷಯ್ಗೆ ಯಶಸ್ಸು ತಂದುಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 'ಇಂತಹ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರೆಂಬುದನ್ನು ನಂಬಲು ಕಷ್ಟ': ರಚಿತಾ ರಾಮ್ - Rachita Ram on Darshan case