ಅಕ್ಷಯ್ ಕುಮಾರ್, ಬಾಲಿವುಡ್ನ ಖ್ಯಾತ ನಟರಲ್ಲೋರ್ವರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ವಿಚಾರವಾಗಿ ಏರಿಳಿತ ಕಂಡರೂ ಅಭಿಮಾನಿಗಳ ಮನದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಸರಣಿ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಕೆಲಸ ಮುಂದುವರಿಸಿದ್ದಾರೆ.
ಬಾಲಿವುಡ್ ಕಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ್ ಅವರ 'ಸರ್ಫಿರಾ' ಚಿತ್ರ ಇತ್ತೀಚೆಗಷ್ಟೇ ಚಿತ್ರಮಂದಿರ ಪ್ರವೇಶಿಸಿದೆ. ಜುಲೈ 12ರಂದು ತೆರೆಕಂಡಿರುವ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಪ್ರದರ್ಶನ ಮುಂದುವರಿಸಿದೆ. ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಬಹುನಿರೀಕ್ಷಿತ 'ಇಂಡಿಯನ್ 2' ಚಿತ್ರ ಕೂಡ ಕಳೆದ ಶುಕ್ರವಾರವೇ 'ಸರ್ಫಿರಾ' ಜೊತೆ ತೆರೆಕಂಡಿದೆ. ಕಳೆದ ಆರು ದಿನಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಈ ಎರಡು ಚಿತ್ರಗಳ ನಡುವೆ ಪೈಪೋಟಿ ನಡೆಯುತ್ತಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಅವರ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಹಾಸ್ಯನಟನೊಬ್ಬನ ಜೀವ ಉಳಿಸುತ್ತಿರುವುದನ್ನು ಕಾಣಬಹುದು. ಅಕ್ಷಯ್ ಸಾಹಸವನ್ನು ಕಂಡ ಅಭಿಮಾನಿಗಳು ಅವರ ಧೈರ್ಯಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ವಿಡಿಯೋ ಅಭಿಮಾನಿಗಳು ಸೇರಿದಂತೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
Akshay kumar literally saved a Guy from any injury during shooting of Kapil Sharma Show
— Ghar Ke Kalesh (@gharkekalesh) July 16, 2024
pic.twitter.com/0DRlcnY8i8
ಇದನ್ನೂ ಓದಿ: ಪ್ರತಿಷ್ಠಿತ ಸೈಮಾ ಪ್ರಶಸ್ತಿಗೆ 'ಕಾಟೇರ', 'ಕ್ರಾಂತಿ' ಸೇರಿ ಕನ್ನಡ 5 ಸಿನಿಮಾಗಳು ನಾಮನಿರ್ದೇಶನ - SIIMA 2024
ಶೋ ಒಂದರಲ್ಲಿ ಕಾಮಿಡಿಯನ್, ನಟ ಅಲಿ ಅಸ್ಗರ್ ಅವರ ಜೊತೆಗೆ ಇನ್ನೋರ್ವ ಹಾಸ್ಯನಟ ಹಗ್ಗದ ಸಹಾಯದಿಂದ ಗಾಳಿಯಲ್ಲಿ ನೇತಾಡುತ್ತಿದ್ದಾರೆ. ಇದೊಂದು ಸ್ಟಂಟ್ ಸೀನ್ನಂತೆ ತೋರುತ್ತಿದೆ. ಇದ್ದಕ್ಕಿದ್ದಂತೆ ಅಲಿಯೊಂದಿಗೆ ಇದ್ದ ವ್ಯಕ್ತಿ ಪ್ರಜ್ಞಾಹೀನರಾಗುತ್ತಾರೆ. ಆ ಹಗ್ಗದಲ್ಲೇ ನೇತಾಡುತ್ತಾರೆ. ಮೂರ್ಛೆ ಹೋದಂತೆ ತೋರುತ್ತದೆ. ಆ ಸಂದರ್ಭ ಅಕ್ಷಯ್ ಕುಮಾರ್ ಸಿಬ್ಬಂದಿಯೊಂದಿಗೆ ಆತನ ಜೀವ ಉಳಿಸಲು ಧಾವಿಸುತ್ತಾರೆ. ಆ ಕಠಿಣ ಪರಿಸ್ಥಿತಿಯಲ್ಲಿ ತಾವೂ ಮೇಲೇರಿ, ಮೊದಲು ಆ ವ್ಯಕ್ತಿಯ ತಲೆಯನ್ನು ಹಿಡಿಯುತ್ತಾರೆ. ಅವರನ್ನು ಪ್ರಜ್ಞೆಗೆ ತರುವ ಪ್ರಯತ್ನ ನಡೆಯುತ್ತದೆ. ನಂತರ ಅವರನ್ನು ನಿಧಾನವಾಗಿ ಕೆಳಕ್ಕೆ ಇಳಿಸಲಾಗುತ್ತದೆ. ಅಕ್ಷಯ್ ಕುಮಾರ್ ಸಹಾಯಕ್ಕೆ ಸಿಬ್ಬಂದಿ ಮುಂದಾಗುತ್ತಾರೆ. ನಂತರ ಅಕ್ಷಯ್ ನಿಧಾನವಾಗಿ ಕೆಳಗಿಳಿದು ಬರುತ್ತಾರೆ.
ಅಕ್ಷಯ್ ಕುಮಾರ್ ಅವರ ಈ ಧೈರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವ ನಟನೂ ಈ ರೀತಿ ಜೀವ ಉಳಿಸಲು ಸಾಧ್ಯವಿಲ್ಲ ಎಂದು ಅಭಿಮಾನಿಯೋರ್ವರು ಗುಣಗಾನ ಮಾಡಿದ್ದಾರೆ. ಕಿಲಾಡಿ ಎಂದು ಉಲ್ಲೇಖಿಸಿದ್ದಾರೆ. ಈ ವಿಡಿಯೋ ಸರಿ ಸುಮಾರು ಐದು ವರ್ಷಗಳಷ್ಟು ಹಳೆಯದ್ದು ಎನ್ನಲಾಗಿದೆ. ಇದೀಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅಕ್ಷಯ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟಂಟ್ನಲ್ಲಿ ಅಕ್ಕಿ ಎತ್ತಿದ ಕೈ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ತಮ್ಮ ಸ್ಟಂಟ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.