ಕನ್ನಡ ಚಿತ್ರರಂಗದ ಖ್ಯಾತ ನಟಿ ಮಿಲನಾ ನಾಗರಾಜ್ ಅವರೀಗ ತುಂಬು ಗರ್ಭಿಣಿ. ಈಗಾಗಲೇ ಬೇಬಿ ಬಂಪ್ ಫೋಟೋಶೂಟ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸೀಮಂತ ಶಾಸ್ತ್ರ ನೆರವೇರಿದ್ದು, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸುಂದರ ಚಿತ್ರಗಳನ್ನು ಶೇರ್ ಮಾಡಿ ಗಮನ ಸೆಳೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ತಾರೆಯರ ಪೈಕಿ ಹಲವರು ಇದೇ ಕ್ಷೇತ್ರದಲ್ಲಿ ತಮ್ಮ ಪ್ರೀತಿ ಕಂಡುಕೊಂಡಿದ್ದಾರೆ. ಸಿನಿಮಾಗಳಲ್ಲಿ ತೆರೆ ಹಂಚಿಕೊಂಡವರು ಅಥವಾ ಒಂದೇ ಚಿತ್ರದಲ್ಲಿ ಕೆಲಸ ಮಾಡಿದವರು ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸಿದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೆಲವರಂತೂ ಮಾದರಿ ದಂಪತಿಯಾಗಿ ಜನಪ್ರಿಯರಾಗಿದ್ದಾರೆ. ಅದರಂತೆ ನಟಿ ಮಿಲನಾ ನಾಗರಾಜ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಪ್ರೀತಿಸಿ ಮದುವೆಯಾದವರು.
2021ರಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇನ್ನೇನು ಕೆಲವೇ ದಿನಗಳಲ್ಲಿ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಇದೇ ಸಾಲಿನ ಮಾರ್ಚ್ನಲ್ಲಿ ಈ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದರು. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಬೇಬಿಡ್ರೆಸ್ ಫೋಟೋ ಹಂಚಿಕೊಂಡ ದಂಪತಿ ಆಶೀರ್ವದಿಸಿ ಎಂದು ಬರೆದುಕೊಂಡಿದ್ದರು. ಶರ್ಟ್ ಮೇಲಿನ ಬರಹ, ಸೆಪ್ಟೆಂಬರ್ಗೆ ಮಗು ಜನಿಸಲಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿತ್ತು.
ಇವರಿಬ್ಬರು ಲವ್ ಮಾಕ್ಟೇಲ್ ಜೋಡಿ ಎಂದೇ ಫೇಮಸ್. ಲವ್ ಮಾಕ್ಟೇಲ್ 1 ಮತ್ತು 2 ಚಿತ್ರಗಳಲ್ಲಿ ತೆರೆಹಂಚಿಕೊಂಡಿದ್ದರು. ಸಿನಿಮಾ ಸೂಪರ್ ಡೂಪರ್ ಹಿಟ್ ಕೂಡಾ ಆಗಿತ್ತು. ಈ ಚಿತ್ರದಲ್ಲಿ ಮಿಲನಾ ನಾಯಕಿ ಪಾತ್ರ ವಹಿಸಿದ್ದಲ್ಲದೇ, ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಪ್ರೀತಿಯಲ್ಲಿದ್ದ ಜೋಡಿ 2021ರ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಹಸೆಮಣೆ ಏರಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಆಗಿ ಗಮನ ಸೆಳೆದಿದ್ದರು.
ಬಹಳ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕೆಲ ಕಾಲದವರೆಗೆ ಏನನ್ನೂ ಹೇಳಿಕೊಂಡಿರಲಿಲ್ಲ. ನಂತರ, 2021ರ ಹೊತ್ತಿಗೆ ಮದುವೆ ಆಗಲು ನಿರ್ಧರಿಸಿದರು. ತಮ್ಮ ಈ ವಿಶೇಷ ಘೋಷಣೆಗೆ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದರು. ಈ ಮೂಲಕ ತಮ್ಮ ಮದುವೆ ದಿನಾಂಕವನ್ನು ಅನೌನ್ಸ್ ಮಾಡಿದ್ದರು.
ಸದ್ಯ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಬ್ಯೂಟಿಫುಲ್, ಲವ್ಲಿ, ಕ್ಯೂಟೀಸ್ ಎಂದೆಲ್ಲಾ ಕಾಮೆಂಟ್ಗಳು ಹರಿದುಬಂದಿದೆ. ಉಳಿದಂತೆ ರೆಡ್ ಹಾರ್ಟ್ ಸಿಂಬಲ್ ಮೂಲಕ ತಮ್ಮ ಪ್ರೀತಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೀಮಂತ ಶಾಸ್ತ್ರದ ಫೋಟೋಗಳೀಗ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.