ಬೆಂಗಳೂರು: ಊಟಕ್ಕೆ ಎಂದು ಫ್ರೇಜರ್ ಟೌನ್ ಸಮೀಪದ ಹೋಟೆಲ್ವೊಂದಕ್ಕೆ ಹೋದಾಗ ತಮಗೆ ಆದ ಅನುಭವವನ್ನು ನಟಿ ಹರ್ಷಿಕಾ ಪೂಣಚ್ಚ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಿಡಿಗೇಡಿಗಳು ಹಲ್ಲೆ ಮಾಡುವ ಪ್ರಯತ್ನಕ್ಕೆ ಮುಂದಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು 'ನಾವು ಬೆಂಗಳೂರಿಲ್ಲಿ ಇದ್ದೀವಾ ಅಥವಾ ಅಫ್ಘಾನಿಸ್ತಾನದಲ್ಲಿ ಇದ್ದೀವಾ' ಎಂದು ಪ್ರಶ್ನಿಸಿದ್ದಾರೆ.
ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರ್ಷಿಕಾ ಪೂಣಚ್ಚ ಹಂಚಿಕೊಂಡಿರುವ ಅನಿಸಿಕೆ ಹೀಗಿದೆ: 'ನಮಸ್ಕಾರ, ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದೆ. ಆದರೆ ನನ್ನ ಅನುಭವದಿಂದ ಮತ್ತಿತರರಿಗೆ ಸಹಾಯವಾಗ ಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದೆ".
"ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಕರಾಮಾ ಎಂಬ ರೆಸ್ಟೊರೆಂಟ್‌ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನದಲ್ಲಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು , ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ. ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು ಎಂದು ವಾದಿಸಲು ಪ್ರಾರಂಭಿಸಿದರು".
"ನನ್ನ ಪತಿ 'ಇನ್ನು ವಾಹನ ಮೂವ್ ಮಾಡಿಲ್ಲ ಅಲ್ವಾ ಸೈಡು ಬಿಡಿ' ಎಂದು ಹೇಳಿದರು. ಏಕೆಂದರೆ ಅವರು ಸಂಭವನೀಯ ಘಟನೆ ಬಗ್ಗೆ ಮಾತನಾಡುತ್ತಿದ್ದರು ಮತ್ತು ಅದರಲ್ಲಿ ಅರ್ಥವಿರಲಿಲ್ಲ. ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು. ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು. ಅವರಲ್ಲಿ ಹೆಚ್ಚಿನವರು ಹಿಂದಿ, ಉರ್ದು ಅಥವಾ ಇಂಗ್ಲಿಷ್ ಮತ್ತು ಕೆಲವರು ಮುರಿದ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾನು ಇನ್ಸ್‌ಪೆಕ್ಟರ್‌ಗೆ ತುರ್ತು ಕರೆ ಮಾಡಿದಾಗ ಅವರೆಲ್ಲರೂ ಏನೂ ಆಗಿಲ್ಲ ಎಂಬಂತೆ ಕೆಲವೇ ಸೆಕೆಂಡುಗಳಲ್ಲಿ ಚದುರಿಹೋದರು. ಇದೇ ಮೊದಲು. ಇದನ್ನು ಪೊಲೀಸ್ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಗಮನಕ್ಕೆ ತರಲು ಮತ್ತು ಭವಿಷ್ಯದಲ್ಲಿ ಯಾವುದೇ ಮಹಿಳೆ ಅಥವಾ ಕುಟುಂಬವು ಬೆಂಗಳೂರಿನಲ್ಲಿ ಇಂತಹ ಅನುಭವಕ್ಕೆ ಒಳಗಾಗಬಾರದು ಎಂದು ನಾನು ಇದನ್ನು ಪೋಸ್ಟ್ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಜನರೊಂದಿಗೆ ಇಂತಹ ಗಲಾಟೆ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ! ಇದನ್ನು ಕಣ್ಣೆದುರು ನೋಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಒಂದೆರಡು ಪ್ರಶ್ನೆಗಳು ಮೂಡಿದವು".
1. ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ?
2. ನಮ್ಮ ಊರು ಬೆಂಗಳೂರಿನಲ್ಲಿ ನನ್ನ ಭಾಷೆ ಕನ್ನಡವನ್ನು ಬಳಸುವುದು ತಪ್ಪಾ???
3. ನಮ್ಮ ಸ್ವಂತ ನಗರದಲ್ಲಿ ನಾವು ಎಷ್ಟು ಸುರಕ್ಷಿತವಾಗಿರುತ್ತೇವೆ?
4. ಇಲ್ಲಿಯೇ ನಮ್ಮ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಇಂತಹ ದೀರ್ಘಾವಧಿಯ ಮಾನಸಿಕ ಆಘಾತಕ್ಕೆ ಕಾರಣವಾಗುವ ಇಂತಹ ಘಟನೆಗಳನ್ನು ಮುಚ್ಚಿ ಹಾಕಬೇಕೆ?
ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಪೊಲೀಸ್ ಇಲಾಖೆಯವರು ಈ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ" ಎಂದು ಬರೆದು ಹಾಕಿದ್ದಾರೆ.