ಮುಂಬೈ (ಮಹಾರಾಷ್ಟ್ರ): ಜನವರಿ 16ರ ಮುಂಜಾನೆ ಮುಂಬೈನ ಬಾಂದ್ರಾ ಪ್ರದೇಶದ ಸತ್ಗುರು ಶರಣ್ ಕಟ್ಟಡದಲ್ಲಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿ, ಸೈಫ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾನೆ. ನಟನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಬೆನ್ನೆಲುಬಿನಿಂದ 2.5 ಇಂಚು ಉದ್ದದ ಬ್ಲೇಡ್ ಅನ್ನು ಹೊರ ತೆಗೆಯಲಾಗಿದೆ. ಈ ಘಟನೆ ಬಾಲಿವುಡ್ ಮಾತ್ರವಲ್ಲದೇ ಭಾರತವನ್ನೇ ಬೆಚ್ಚಿಬೀಳಿಸಿದೆ. ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಘಟನೆ ನಡೆದು 30 ಗಂಟೆಗಳ ನಂತರವೂ, ಸೈಫ್ ಮತ್ತು ಅವರ ಮನೆಕೆಲಸದಾಕೆಯನ್ನು ಗಾಯಗೊಳಿಸಿರೋ ದಾಳಿಕೋರ ಪರಾರಿಯಾಗಿದ್ದಾನೆ. ಪತ್ತೆಗೆ ತನಿಖೆ ಮುಂದುವರಿದಿದೆ.
ಸೈಫ್ ಅಲಿ ಖಾನ್ ಹೆಲ್ತ್ ಅಪ್ಡೇಟ್ಸ್: ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ನಟನನ್ನು ಐಸಿಯುನಿಂದ ಹೊರಗೆ ಸ್ಥಳಾಂತರಿಸಲಾಗಿದೆ ಎಂದು ಲೀಲಾವತಿ ಆಸ್ಪತ್ರೆಯ ಡಾ.ನಿತಿನ್ ಡಾಂಗೆ ಇಂದು ದೃಢಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯರ ತಂಡ, ಸೈಫ್ ಅವರು ಅಪಾಯದಿಂದ ಪಾರಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿದರು.
"ಅವರು ಸಿಂಹದಂತೆ ಒಳಗೆ ಬಂದರು": ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲೀಲಾವತಿ ಆಸ್ಪತ್ರೆಯ ಡಾ.ನೀರಜ್ ಉತ್ತಮಣಿ, ಸೈಫ್ ಅಲಿ ಖಾನ್ ಆಸ್ಪತ್ರೆಗೆ ಆಗಮಿಸಿದ ಬಗ್ಗೆ ವಿವರಗಳನ್ನು ಹಂಚಿಕೊಂಡರು. ಗಾಯಗೊಂಡ ಒಂದು ಗಂಟೆಯೊಳಗೆ ಅವರನ್ನು ಭೇಟಿಯಾದ ಮೊದಲ ವೈದ್ಯರು ತಾವೆಂಬುದನ್ನು ಈ ಸಂದರ್ಭದಲ್ಲಿ ವಿವರಿಸಿದರು. "ಅವರ ಮೈಯೆಲ್ಲಾ ರಕ್ತವಾಗಿತ್ತು. ಆದರೆ, ಅವರು ತಮ್ಮ ಚಿಕ್ಕ ಮಗುವಿನೊಂದಿಗೆ ಸಿಂಹದಂತೆ ಒಳಗೆ ಬಂದರು. ಅವರು ರಿಯಲ್ ಹೀರೋ. ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಪ್ಯಾರಾಮೀಟರ್ಸ್ ಸುಧಾರಿಸಿವೆ. ಅವರನ್ನು ಐಸಿಯುನಿಂದ ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಅವರು ವಿಶ್ರಾಂತಿ ಪಡೆಯಬೇಕು" ಎಂದು ತಿಳಿಸಿದರು.
20 ಪೊಲೀಸ್ ತಂಡಗಳ ರಚನೆ: ಸೈಫ್ ಅಲಿ ಖಾನ್ಗೆ ಹಲವು ಬಾರಿ ಇರಿದು ಪರಾರಿಯಾಗಿರುವ ದುಷ್ಕರ್ಮಿಯನ್ನು ಹಿಡಿಯಲು ಮುಂಬೈ ಪೊಲೀಸರು 20 ತಂಡಗಳನ್ನು ರಚಿಸಿದ್ದಾರೆ.
#WATCH | Saif Ali Khan Attack Case | Mumbai Police bring one person to Bandra Police station for questioning.
— ANI (@ANI) January 17, 2025
Latest Visuals pic.twitter.com/fuJX9WY7W0
ಓರ್ವ ವಶಕ್ಕೆ? ಬಾಲಿವುಡ್ ನಟನ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು (ಶುಕ್ರವಾರ) ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಶಂಕಿತನನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ವರದಿಗಳಾಗಿತ್ತು. ಸಿಸಿಟಿವಿ ದೃಶ್ಯ ಕೂಡಾ ಹೊರಬಿದ್ದಿದೆ. ಆದ್ರೆ ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ, ಅರೆಸ್ಟ್ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಂದ್ರಾ ರೈಲು ನಿಲ್ದಾಣದ ಬಳಿ ಕೊನೆಯದಾಗಿ ಕಾಣಿಸಿಕೊಂಡ ಆರೋಪಿ: ದಾಳಿಯಲ್ಲಿ ಭಾಗಿಯಾಗಿರುವ ಆರೋಪಿ ಬಾಂದ್ರಾ ರೈಲು ನಿಲ್ದಾಣದ ಬಳಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು, ಆತನನ್ನು ಬಂಧಿಸಲು ಶೋಧ ಕಾರ್ಯ ಮುಂದುವರೆದಿದೆ ಎಂದು ಮುಂಬೈ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಘಟನೆ ನಂತರ, ಶಂಕಿತ ಬೆಳಗ್ಗೆ ಮೊದಲ ಲೋಕಲ್ ಟ್ರೇನ್ ಹಿಡಿದು ವಸಾಯಿ ವಿರಾರ್ ಕಡೆಗೆ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
VIDEO | Attack on Saif Ali Khan: CCTV footage shows the alleged attacker fleeing the building through staircase.
— Press Trust of India (@PTI_News) January 16, 2025
(Source: Third Party)#SaifAliKhanInjured pic.twitter.com/VHpAenxFdu
ಎಲ್ಲೆಲ್ಲಿ ಪೊಲೀಸ್ ಶೋಧ ಕಾರ್ಯ? ಮಾಧ್ಯಮದೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರ ಪ್ರಕಾರ, ಮುಂಬೈ ಪೊಲೀಸ್ ತಂಡಗಳು ವಸಾಯಿ, ನಲಸೋಪರ ಮತ್ತು ವಿರಾರ್ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿವೆ.
ಟೆಕ್ನಿಕಲ್ ಡಾಟಾ: ಅಪರಾಧ ವಿಭಾಗ ಮತ್ತು ಸ್ಥಳೀಯ ಪೊಲೀಸರು "ಕಳ್ಳತನಕ್ಕೆ ಯತ್ನಿಸಿದ" ಸಮಯದಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಸಕ್ರಿಯಗೊಂಡಿದ್ದ ಮೊಬೈಲ್ ಫೋನ್‌ಗಳ ಡಾಟಾ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದಾರೆ.
ಶೋಧ ಕಾರ್ಯಾಚರಣೆ: ಪ್ರಕರಣಕ್ಕೆ ಸಂಬಂಧಿಸಿದ ಶೋಧ ಕಾರ್ಯಾಚರಣೆಗೆ ವಿಧಿವಿಜ್ಞಾನ ತಂಡಗಳು ಮತ್ತು ಶ್ವಾನ ದಳವನ್ನು ಸೇರಿಸಲಾಗಿದೆ. ಸೈಫ್ ನಿವಾಸ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ದಾಳಿಕೋರನ ಪತ್ತೆಗಾಗಿ ಮುಂಬೈನಾದ್ಯಂತ ವಿವಿಧ ಶೋಧಗಳನ್ನು ನಡೆಸಲಾಗುತ್ತಿದೆ.
ದಾಳಿಯ ವಿವರ: ಗುರುವಾರ ಮುಂಜಾನೆ (ಬುಧವಾರ ತಡರಾತ್ರಿ) 54ರ ಹರೆಯದ ನಟನ ಮೇಲೆ ಹಲ್ಲೆ ನಡೆಸಲಾಗಿದ್ದು, ಮೈಮೇಲೆ ಆರು ಇರಿತದ ಗಂಭೀರ ಗಾಯಗಳಾಗಿವೆ. ಆ ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ: ಪೊಲೀಸರು ಕಟ್ಟಡದ ಸಿಸಿಟಿವಿ ಫುಟೇಜ್ ಕೂಡಾ ವಿಶ್ಲೇಷಿಸುತ್ತಿದ್ದಾರೆ. ಮರದ ಕೋಲು ಮತ್ತು ಹೆಕ್ಸಾ ಬ್ಲೇಡ್‌ನೊಂದಿಗೆ ದುಷ್ಕರ್ಮಿ ಓಡಿಹೋಗುತ್ತಿರುವ ದೃಶ್ಯ ಆನ್ಲೈನ್ನಲ್ಲಿ ವೈರಲ್ ಆಗಿದೆ. ಆರನೇ ಮಹಡಿಯಿಂದ ಮೆಟ್ಟಿಲುಗಳ ಮೂಲಕ ಕೆಳಗೆ ಓಡಿಹೋಗುತ್ತಿದ್ದ ಆತ ಬ್ರೌನ್ ಟಿ-ಶರ್ಟ್ ಮತ್ತು ರೆಡ್ ಸ್ಕಾರ್ಫ್ ಧರಿಸಿದ್ದ. ಸೈಫ್ ನಿವಾಸ ಅಪಾರ್ಟ್ಮೆಂಟ್ನ 12ನೇ ಮಹಡಿಯಲ್ಲಿದೆ.
ಕುಟುಂಬಸ್ಥರು ಮನೆಯಲ್ಲಿದ್ದರು: 12ನೇ ಮಹಡಿಯ ನಿವಾಸದಲ್ಲಿ ಸೈಫ್, ಅವರ ಪತ್ನಿ- ನಟಿ ಕರೀನಾ ಕಪೂರ್ ಮತ್ತು ಅವರ ಇಬ್ಬರು ಗಂಡು ಮಕ್ಕಳಾದ ಜೆಹ್ (4 ವರ್ಷ) ಮತ್ತು ತೈಮೂರ್ (8 ವರ್ಷ) ಹಾಗೂ ಐವರು ಕೆಲಸಗಾರರು ಇದ್ದರು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಬೆನ್ನಿನಿಂದ 2.5 ಇಂಚು ಉದ್ದದ ಚಾಕು ಹೊರಕ್ಕೆ; ಐಸಿಯುನಲ್ಲಿ ನಟ, ವೈದ್ಯರು ಹೇಳಿದ್ದಿಷ್ಟು
1 ಕೋಟಿ ರೂಪಾಯಿಗೆ ಬೇಡಿಕೆ: ಪೊಲೀಸರಿಗೆ ನೀಡಿರೋ ದೂರಿನ ಪ್ರಕಾರ, ಜೆಹ್ ಅವರ ದಾದಿ ಫಿಲಿಪ್ ಅವರು ದಾಳಿಕೋರರನ್ನು ಎದುರಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಆತ 1 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಎಂದು ಹೇಳಿದ್ದಾರೆ.
ದುಷ್ಕರ್ಮಿ ಪ್ರವೇಶ ಹೇಗಿತ್ತು? ದಾಳಿ ನಡೆಸಿದಾತ ಸೀದಾ ಸೀದಾ ಫ್ಲಾಟ್‌ಗೆ ನುಗ್ಗಿಲ್ಲ. ದರೋಡೆ ಪ್ಲ್ಯಾನ್ನೊಂದಿಗೆ ಒಳನುಗ್ಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆ ವ್ಯಕ್ತಿ ತನ್ನತ್ತ ಬೆರಳು ತೋರಿಸಿ "ಕೋಯಿ ಆವಾಜ್ ನಹೀಂ" (ಸದ್ದು ಮಾಡಬೇಡ) ಎಂದು ಹೇಳಿದನೆಂದು ಫಿಲಿಪ್ ಹೇಳಿದ್ದಾರೆ. ಅವರು ಕಿರುಚಿಕೊಂಡಿದ್ದು, ಕರೀನಾ ಜೊತೆ ಸೈಫ್ ಕೋಣೆಯಿಂದ ಹೊರಬಂದರು. ನಂತರ ಪರಿಸ್ಥಿತಿ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ಸೈಫ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು.
ಇದನ್ನೂ ಓದಿ: 100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್
ಸೈಫ್ ಪತ್ನಿ ಕರೀನಾ ಹೇಳಿಕೆ: ಗುರುವಾರ ರಾತ್ರಿ, ಕರೀನಾ ತಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ಕೋರಿ ಹೇಳಿಕೆ ಬಿಡುಗಡೆ ಮಾಡಿದ್ದರು. "ಇದು ನಮ್ಮ ಕುಟುಂಬಕ್ಕೆ ಅತ್ಯಂತ ಸವಾಲಿನ ಕ್ಷಣ. ಈ ಕಠಿಣ ಸಂದರ್ಭ, ಮಾಧ್ಯಮ ಮತ್ತು ಪಾಪರಾಜಿಗಳು ಊಹಾಪೋಹಗಳಿಂದ ದೂರವಿರಬೇಕೆಂದು ವಿನಂತಿಸುತ್ತೇನೆ" ಎಂದು ಕರೀನಾ ಮನವಿ ಮಾಡಿದ್ದರು. "ನಾವು ನಿಮ್ಮ ಕಾಳಜಿ ಮತ್ತು ಬೆಂಬಲವನ್ನು ಪ್ರಶಂಸಿಸುತ್ತೇವೆ, ಆದರೆ ನಿಮ್ಮ ನಿರಂತರ ಗಮನ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇತಿಮಿತಿಗಳನ್ನು ಗೌರವಿಸುವಂತೆ ಕೋರಿದ್ದಾರೆ. (With agency inputs),