ರಂಗಿ ತರಂಗ, ಅವನೇ ಶ್ರೀಮನ್ನಾರಾಯಣ ಸಿನಿಮಾ ಖ್ಯಾತಿಯ ನಿರ್ಮಾಪಕ ಹೆಚ್.ಕೆ ಪ್ರಕಾಶ್ ತಮ್ಮ ನಿರ್ಮಾಣದ 5ನೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ದಿಯಾ , ದಸರಾ, ಕೆಟಿಎಂ ಹಾಗೂ ಬ್ಲಿಂಕ್ ಮುಂತಾದ ಸಿನಿಮಾಗಳಿಂದ ಜನ ಮೆಚ್ಚುಗೆ ಗಳಿಸಿ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ದೀಕ್ಷಿತ್ ಶೆಟ್ಟಿ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾದಲ್ಲಿ ಭಿನ್ನ ಪಾತ್ರ ಮಾಡಲಿದ್ದಾರೆ. ಪ್ರೇಮಂ ಪೂಜ್ಯಂ ಹಾಗೂ ಕೌಸಲ್ಯ ಸುಪ್ರಜಾ ಯಶಸ್ಸಿನ ಬಳಿಕ ನಟಿ ಬೃಂದಾ ಆಚಾರ್ಯ, ದೀಕ್ಷಿತ್ಗೆ ಜೋಡಿಯಾಗುತ್ತಿದ್ದಾರೆ.
ಹೊಸ ನಿರ್ದೇಶಕ ಅಭಿಷೇಕ್ ಎಂ. ಅವರು ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಮೊದಲು ಸಿಂಪಲ್ ಸುನಿ ಜೊತೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’, ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ - ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಅಭಿಷೇಕ್ ಅವರಿಗೆ ಇದೆ. ಅಲ್ಲದೇ ಕೆಲವು ಸಿನಿಮಾಗಳಿಗೆ ಅವರು ಸಂಕಲನ ಕೂಡ ಮಾಡಿದ್ದಾರೆ. ತಮ್ಮದೇ VFX ಸ್ಟುಡಿಯೋ ಸಹ ಹೊಂದಿರುವ ಅವರು ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗುತ್ತಿದ್ದಾರೆ.
ಬ್ಯಾಂಕ್ ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಸಹ ಕಲಾವಿದರಾಗಿ ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್,ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಮುಂತಾದ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.
ಬೆಂಗಳೂರು, ತುಮಕೂರು ಮತ್ತು ಚಿತ್ರದುರ್ಗ ಸುತ್ತಮುತ್ತ ಶೇಕಡ 80 ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಅವರು ಸಂಗೀತ ನೀಡುತ್ತಿದ್ದಾರೆ. ಅಭಿಷೇಕ್ ಜಿ. ಕಾಸರಗೋಡು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ರಘು ಮೈಸೂರು ಅವರ ಕಲಾ ನಿರ್ದೇಶನ, ಭೂಷಣ್ ಅವರ ನೃತ್ಯ ನಿರ್ದೇಶನ ಈ ಸಿನಿಮಾಗಿದೆ.