ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಸಿನಿಮಾ ಖ್ಯಾತಿಯ ನಟ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡುತ್ತಿರುವ 'ಫುಲ್ ಮೀಲ್ಸ್' ಚಿತ್ರದ ನಿರ್ದೇಶಕ ಎನ್ ವಿನಾಯಕ ಅವರಿಗೆ ಜನ್ಮದಿನದ ಸಂಭ್ರಮ. ನಿರ್ದೇಶಕರ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ನಿರ್ದೇಶಕರಿಗೆ ಶುಭಾಶಯ ಕೋರಿದೆ. ಚಿತ್ರತಂಡ ಕೊನೆಯ ಹಂತದ ಡಬ್ಬಿಂಗ್ ಕೆಲಸ ನಡೆಸುತ್ತಿದ್ದು, ಶೀಘ್ರದಲ್ಲೇ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.
ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಎನ್. ವಿನಾಯಕ ಅವರು ಈ ಹಿಂದೆ ಹಲವು ಕಿರುಚಿತ್ರ ಮತ್ತು ಮ್ಯೂಸಿಕ್ ವಿಡಿಯೋಗಳ ಮೂಲಕ ಗುರುತಿಸಿಕೊಂಡಿದ್ದರು. ಹಾಗೆಯೇ ತಮ್ಮ ಕಿರುಚಿತ್ರ ಮತ್ತು ಮ್ಯೂಸಿಕ್ ವಿಡಿಯೋಗಳಿಗಾಗಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ವಿನಾಯಕ್ ಅವರ ಪ್ರತಿಭೆ ಮೇಲೆ ನಂಬಿಕೆ ಇಟ್ಟು ನಿರ್ದೇಶನದ ಜವಾಬ್ದಾರಿ ಕೊಟ್ಟಿರುವ ನಾಯಕ ನಟ ಹಾಗೂ ನಿರ್ಮಾಪಕ ಲಿಖಿತ್ ಶೆಟ್ಟಿ ಅವರು ವಿನಾಯಕ್ ಅವರ ಕಾರ್ಯ ವೈಖರಿಯಿಂದ ಖುಷಿಯಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಭರವಸೆಯ ನಿರ್ದೇಶಕ ಸಿಗುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಉಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ವಿಭಿನ್ನ ಕಥಾ ಹಂದರದ ಫುಲ್ ಮೀಲ್ಸ್ ಸಿನಿಮಾ, ಮನರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನಿಮಾ ಇಷ್ಟಪಡುತ್ತಾರೆ ಎಂಬ ವಿಶ್ವಾಸ ಚಿತ್ರ ತಂಡಕ್ಕಿದೆ. ಸಿನಿಮಾಗೆ ಹರೀಶ್ ಗೌಡ ಸಂಭಾಷಣೆ ಬರೆದಿದ್ದರೆ, ಮನೋಹರ್ ಜೋಷಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಗುರು ಕಿರಣ್ ಸಂಗೀತ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಪ್ರೇಕ್ಷಕರ ಮನಗೆದ್ದ 'ಧೀರ ಸಾಮ್ರಾಟ್': 25 ದಿನಗಳ ಯಶಸ್ವಿ ಪ್ರದರ್ಶನದ ಸಂತಸದಲ್ಲಿ ಚಿತ್ರತಂಡ
ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆ. ಸಿನಿಮಾದಲ್ಲಿ ಖುಷಿ ರವಿ 'ಪೂಜಾ' ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಈವರೆಗಿನ ಚಿತ್ರಗಳ ಪೈಕಿ ವಿಭಿನ್ನ ಪಾತ್ರ ಅನ್ನೋದು ನಟಿಯ ಅಭಿಪ್ರಾಯ. ಚಿತ್ರದಲ್ಲಿ ಖುಷಿ ರವಿ ಜೊತೆ ತೇಜಸ್ವಿನಿ ಶರ್ಮಾ ಕೂಡ ಮತ್ತೋರ್ವ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲಿ 'ಫುಲ್ ಮೀಲ್ಸ್' ಕೂಡಾ ಒಂದಾಗಿದ್ದು, ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಪುಲ್ಕಿತ್ ಕೈ ಹಿಡಿಯಲಿರುವ 'ಗೂಗ್ಲಿ' ಬೆಡಗಿ: ಮದುವೆ ಸ್ಥಳಕ್ಕೆ ತೆರಳಿದ ಕೃತಿ ಖರಬಂದ - ವಿಡಿಯೋ