ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2022 ವಿಜೇತರ ಹೆಸರನ್ನು ಇಂದು ಪ್ರಕಟಿಸಿತು. ರಿಷಬ್ ಶೆಟ್ಟಿ ಅತ್ಯುತ್ತಮ ನಟರಾಗಿ ಹೊರಹೊಮ್ಮಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರವೆಂಬ ಹೆಗ್ಗಳಿಕೆಗೆ 'ಕಾಂತಾರ' ಪಾತ್ರವಾಗಿದೆ.
ಕನ್ನಡ ಚಿತ್ರರಂಗದ ವಿಜೇತರ ಪಟ್ಟಿ:
- ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ ಸಿನಿಮಾ)
- ಅತ್ಯುತ್ತಮ ಸಂಪೂರ್ಣ ಮನರಂಜನಾ ಸಿನಿಮಾ: ಕಾಂತಾರ
- ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್: ಕೆಜಿಎಫ್ 2
- ಚೊಚ್ಚಲ ಚಿತ್ರದಲ್ಲಿ ಅತ್ಯುತ್ತಮ ನಿರ್ದೇಶಕ: ಮಧ್ಯಂತರ (ಕನ್ನಡ)
- ಅತ್ಯುತ್ತಮ ಸಂಕಲನ: ಮಧ್ಯಂತರ (ಕನ್ನಡ)
ಕಾಂತಾರ ಮೊದಲ ಭಾಗ 2022ರ ಸೆಪ್ಟೆಂಬರ್ 30ರಂದು ತೆರೆಕಂಡಿತ್ತು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ನಿರೀಕ್ಷೆ ಮೀರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಅಂದಾಜು 16 ಕೋಟಿ ರೂ. ಬಜೆಟ್ನಲ್ಲಿ ತಯಾರಾದ ಚಿತ್ರ ವರದಿಗಳ ಪ್ರಕಾರ, 450 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
70th National Film Awards for the Year 2022 Announced!📽️
— PIB India (@PIB_India) August 16, 2024
Best Actress in a Leading Role (Feature Films) goes to:
1. Nithya Menen for film Thiruchitrambalam (Tamil) &
2. Manasi Parekh for the film Kutch Express (Gujarati)
Best Actor in a Leading Role (Feature Films) goes to:… pic.twitter.com/r6L1lQczjh
ಈ ಚಿತ್ರದ ಯಶಸ್ಸಿನ ಮೂಲಕ ಡಿವೈನ್ ಸ್ಟಾರ್ ಆಗಿ ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಾದ್ಯಂತ ಜನಪ್ರಿಯರಾದರು. ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್ ಕಿರಗಂದೂರ್ ಚಿತ್ರ ನಿರ್ಮಿಸಿದ್ದು, ಭಾರತೀಯ ಚಿತ್ರರಂಗದಲ್ಲೇ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿತು. ಚಿತ್ರದಲ್ಲಿ ರಿಷಬ್ ಜೊತೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡ ನಟರು: ರಿಷಬ್ ಶೆಟ್ಟಿ ಅವರಿಗಿಂತ ಮೊದಲು ಹಲವು ಕನ್ನಡದ ನಟ/ನಟಿಯರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 1975ರಲ್ಲಿ ಎಂ.ವಿ.ವಾಸುದೇವ ರಾವ್ ಅವರು 23ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. 1928ರಲ್ಲಿ ಬಾಲನಟರಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಅವರು, ಶಿವರಾಮ ಕಾರಂತರ ಕಾದಂಬರಿ ಆಧರಿತ ಚೋಮನ ದುಡಿ (1975) ಚಿತ್ರದಲ್ಲಿನ ಚೋಮನ ಪಾತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡರು.
1986ರಲ್ಲಿ ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಮತ್ತು ನಿವೃತ್ತ ವಕೀಲರೂ ಆದ ಚಾರುಹಾಸನ್ ಶ್ರೀನಿವಾಸನ್ ಅವರು ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಹಾಗೂ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಕೂಡ ಪಡೆದಿದ್ದರು. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ ಇವರು, ಕನ್ನಡ ಚಲನಚಿತ್ರ ತಬರನ ಕಥೆ (1987)ಗಾಗಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮೀಂದುಂ ಒರು ಕಾತಲ್ ಕಥೈ, ಡಿಯರ್ ಕಾಮ್ರೇಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಶ್ರೀನಿವಾಸನ್, ಪುದಿಯ ಸಂಗಮಮ್ (1982) ಮತ್ತು ಐಪಿಸಿ 215 (2003) ಎಂಬೆರಡು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇನ್ನು 2005ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಸೀನಾ (ಚಲನಚಿತ್ರ) ಚಿತ್ರದಲ್ಲಿನ ಪಾತ್ರಕ್ಕಾಗಿ ನಟಿ ತಾರಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
2014ರಲ್ಲಿ ಲಿಂಗದೇವರು ನಿರ್ದೇಶಿಸಿದ 'ನಾನು ಅವನಲ್ಲ ಅವಳು' ಎಂಬ ಚಿತ್ರದಲ್ಲಿ ಮಂಗಳಮುಖಿ ಪಾತ್ರದಲ್ಲಿ ತೆರೆ ಮೇಲೆ ನಟಿಸಿದ ಸಂಚಾರಿ ವಿಜಯ್ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಇದರ ಜೊತೆಗೆ, ತನ್ನ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಗೆ ಭಾಜನರಾಗಿದ್ದರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರಾದ ಇವರು ರಂಗಭೂಮಿ ಕಲೆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. 2011ರಲ್ಲಿ ತೆರೆ ಕಂಡ ರಂಗಪ್ಪ ಹೋಗ್ಬಿಟ್ನಾ ಇವರ ಮೊದಲ ಚಿತ್ರ. ಕೇವಲ 10 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕೆಲಸ ಮಾಡಿದರೂ ಸಹ, ಅವರು ನಿರ್ವಹಿಸಿದ ಪಾತ್ರಗಳ ವೈವಿಧ್ಯತೆಗಾಗಿ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ್ದರು. ಜೂನ್ 14, 2021ರಂದು ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್ ಮೃತಪಟ್ಟರು.
ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಿಷಬ್ ಶೆಟ್ಟಿ ಅತ್ಯುತ್ತಮ ನಟ - National Film Awards