ಮುಂಬೈ: ಕಾಲಮಾನ ಮತ್ತು ಮಾರುಕಟ್ಟೆಗಳ ಸ್ವರೂಪಕ್ಕೆ ಅನುಗುಣವಾಗಿ ಉದ್ಯೋಗದ ಬೇಡಿಕೆಗಳು ಸೃಷ್ಟಿಯಾಗುತ್ತವೆ. ಅದರನುಸಾರ ಆತಿಥ್ಯ ಉದ್ಯಮ (Hospitality Industry) ಮುಂದಿನ ದಿನಗಳಲ್ಲಿ ಬಹುಬೇಡಿಕೆ ಪಡೆಯಲಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಪ್ರತಿಭೆ ಮತ್ತು ವಿಸ್ತರಣೆ ಕೊರತೆ ಉಂಟಾಗಿತ್ತು. ಆದರೆ ಮುಂದಿನ ಕೆಲವು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸುಮಾರು 1 ಮಿಲಿಯನ್ ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಸ್ತುತ ಈ ಉದ್ಯಮದಲ್ಲಿ ಪ್ರತಿಭೆಗಳ ನಡುವಿನ ಬೇಡಿಕೆ ಮತ್ತು ಪೂರೈಕೆಯ ಅಂತರ 55-60ರಷ್ಟಿದೆ. ಇದು ಅಗತ್ಯತೆ ಮತ್ತು ಲಭ್ಯವಿರುವ ಪ್ರತಿಭೆಗಳ ನಡುವಿನ ಭಾರೀ ಅಂತರವಾಗಿದೆ ಎಂದು ರ್ಯಾಂಡ್ಸ್ಯಾಂಡ್ ಇಂಡಿಯಾ ನಿರ್ದೇಶಕ, ಪ್ರೊಫೆಷನಲ್ ಟ್ಯಾಲೆಂಟ್ ಸಲ್ಯೂಷನ್ ಸಂಜಯ್ ಶೆಟ್ಟಿ ಹೇಳಿದ್ದಾರೆ.
ಸಾಂಕ್ರಾಮಿಕ ಕಾಲದ ಬಳಿಕ ಪ್ರತಿಭೆ ಕೊರತೆಯ ಸಮಸ್ಯೆಯನ್ನು ಭರ್ತಿ ಮಾಡುವ ಕಾರ್ಯಕ್ಕೆ ಮುಂದಾಗಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ. ಇದು ಮುಂದಿನ ಕೆಲವು ವರ್ಷ ಮುಂದುವರೆಯಲಿದ್ದು, ಕನಿಷ್ಠ 1 ಮಿಲಿಯನ್ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದಾರೆ.
ಕೋವಿಡ್ ಬಳಿಕ ಪ್ರವೇಶ ಹಂತದ ಹುದ್ದೆಗಳ ಭರ್ತಿಗೆ ಅತಿಹೆಚ್ಚಿನ ಬೇಡಿಕೆ ಇದೆ. ಕೆಲವು ಕಂಪನಿಗಳು ಇರುವ ಪ್ರತಿಭೆಗಳಲ್ಲಿ ಕೌಶಲ್ಯ ಹೆಚ್ಚಿಸುತ್ತಿದ್ದಾರೆ. ಮತ್ತೆ ಕೆಲವರು ಇತರೆ ಉದ್ಯಮಗಳಿಂದ ನೇಮಕಾತಿಗೆ ಮುಂದಾಗಿದ್ದಾರೆ. ಮತ್ತೆ ಕೆಲವರು ಮಾರುಕಟ್ಟೆಗೆ ಅನುಗುಣವಾಗಿ ಸ್ಪರ್ಧಾತ್ಮಕ ವೇತನ, ಪ್ರಯೋಜನ ಮತ್ತು ವೃತ್ತಿ ಬೆಳವಣಿಗೆ ಮೂಲಕ ಪ್ರತಿಭೆಗಳ ಸೆಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.
2023ರಲ್ಲಿ ಪ್ರವಾಸೋದ್ಯಮ ಮತ್ತು ಆತಿಥೇಯ ಉದ್ಯಮ ಅಂದಾಜು 11.1 ಮಿಲಿಯನ್ ಜನರಿಗೆ ಉದ್ಯೋಗವನ್ನು ನೀಡಿದೆ. 2024ರಲ್ಲಿ ಈ ಕ್ಷೇತ್ರದ ಉದ್ಯೋಗಿಗಳ ಬೇಡಿಕೆ 11.8 ಮಿಲಿಯನ್ ಆಗಿದೆ. 2028ರಲ್ಲಿ ಈ ಕ್ಷೇತ್ರದಲ್ಲಿ ವಾರ್ಷಿಕ ಬೆಳವಣಿಗೆ ದರ 16.5ರ ಬೆಳವಣಿಗೆ ಜೊತೆಗೆ ಉದ್ಯೋಗ ಬೇಡಿಕೆ 14.8 ಮಿಲಿಯನ್ ಹೆಚ್ಚುವ ನಿರೀಕ್ಷೆ ಇದೆ ಎಂದು ಟೀಮ್ಲೀಸ್ ಡಿಗ್ರಿ ಅಪ್ರೆಂಟಿಸ್ಶಿಪ್ನ ಉಪಾಧ್ಯಕ್ಷ ಮತ್ತು ಬ್ಯುಸಿನೆಸ್ ಮುಖ್ಯಸ್ಥ ಧೃತಿ ಪ್ರಸನ್ನಾ ಮಹಂತಾ ವಿವರಿಸಿದರು.
ಇದನ್ನೂ ಓದಿ: ಉದ್ಯೋಗ ಮಾರ್ಗಸೂಚಿ: ಕೆಲಸ ಹುಡುಕುವ ಅಭ್ಯರ್ಥಿಗಳು ವ್ಯಕ್ತಿಗತವಾಗಿ ರೂಢಿಸಿಕೊಳ್ಳಬೇಕಾದ ಕೌಶಲ್ಯಗಳಿವು