ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್) ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಅಭ್ಯರ್ಥಿಗಳು ಸೆಪ್ಟೆಂಬರ್ 2ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ವಿದ್ಯಾರ್ಹತೆ: ಅಧಿಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ. ಒಟ್ಟು 41 ವಿಷಯದಲ್ಲಿ ಅರ್ಹರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯೋಮಿತಿ ಇಲ್ಲ.
ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ನಿರ್ವಹಣೆಗೆ ಕೆ ಸೆಟ್ ಅರ್ಹತೆ ಪಡೆಯುವುದು ಅವಶ್ಯವಾಗಿದ್ದು, ಅಭ್ಯರ್ಥಿಗಳು ಪರೀಕ್ಷೆಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಯುಜಿಸಿ ನಿಯಮದ ಅಡಿಯಲ್ಲಿ ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ ಸುಲಭವಾಗಲಿದೆ. ಇಲ್ಲಿಯವರೆಗೆ ಈ ಪರೀಕ್ಷೆಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ನಡೆಸಲಾಗುತ್ತಿತ್ತು. ಆದರೆ, ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿದೆ.
ಪರೀಕ್ಷೆ: ಈ ಅರ್ಹತಾ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರಲಿದೆ. ಈ ಪರೀಕ್ಷೆಯಲ್ಲಿ ಕನಿಷ್ಠ 40 ಅಂಕಗಳನ್ನು ಗಳಿಸುವ ಮೂಲಕ ಅರ್ಹತೆ ಸಂಪಾದಿಸಬಹುದು. ರಾಜ್ಯದ ಪ್ರಮುಖ 11 ಕೇಂದ್ರದಲ್ಲಿ ಈ ಪರೀಕ್ಷೆ ನಡೆಯಲಿದೆ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 1000 ರೂ, ಮತ್ತು ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನ ಅಭ್ಯರ್ಥಿಗಳಿಗೆ 700 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹಿಂದೆ ಅರ್ಜಿ ಸಲ್ಲಿಕೆ ದಿನಾಂಕ ಆಗಸ್ಟ್ 22 ನಿಗದಿಸಲಾಗಿತ್ತು. ಇದೀಗ ವಿಸ್ತರಣಾ ಅಧಿಸೂಚನೆ ಅನುಸಾರ ಸೆಪ್ಟೆಂಬರ್ 2ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಈ ಅರ್ಹತಾ ಪರೀಕ್ಷೆ ಕುರಿತು ಹೆಚ್ಚಿನ ವಿವರ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kea.kar.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಮಂಗಳೂರಿನ ಜಿ.ಟಿ.ಟಿ.ಸಿ. ಡಿಪ್ಲೋಮಾ ಕೋರ್ಸ್ಗೆ ಅರ್ಜಿ ಆಹ್ವಾನ; 15 ಸಾವಿರ ರೂ. ಶಿಷ್ಯ ವೇತನದ ಜೊತೆಗೆ ಕೆಲಸವೂ ಗ್ಯಾರೆಂಟಿ