ನವದೆಹಲಿ: ಸಿಬಿಎಸ್ಸಿಯ 12ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳ ಉತ್ತೀರ್ಣ ಫಲಿತಾಂಶ 87.98 ಇದ್ದು, ಕಳೆದ ವರ್ಷಕ್ಕಿಂತ ಅಲ್ಪ ಏರಿಕೆ ಕಂಡಿದೆ. ಕಳೆದ ಬಾರಿಗಿಂತ ಈ ಬಾರಿಯ ಪಾಸಿಂಗ್ ಪರ್ಸೆಂಟೇಜ್ 0.65 ಹೆಚ್ಚಾಗಿದ್ದು, ಕಳೆದ ವರ್ಷ ಉತ್ತೀರ್ಣತೆ ದರ 87.33ರಷ್ಟಿತು.
91.52ರಷ್ಟು ಬಾಲಕಿಯರು ಉತ್ತೀರ್ಣಗೊಂಡಿದ್ದು, ಬಾಲಕರ ಉತ್ತೀರ್ಣ ದರಕ್ಕಿಂತ 6.40ರಷ್ಟು ಹೆಚ್ಚು ಅಂಕವನ್ನು ಪಡೆದಿದ್ದಾರೆ. ಒಟ್ಟಾರೆ 24,068 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚಿನ ಅಂಕ ಪಡೆದರೆ, 1,16,145 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ 16.21 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ದೇಶಾದ್ಯಂತ 7,126 ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಫೆಬ್ರವರಿ 15ರಿಂದ ಏಪ್ರಿಲ್ 2ರ ವರೆಗೆ ಪರೀಕ್ಷೆ ನಡೆದಿತ್ತು. ತಿರುವನಂತಪುರ ಅತಿ ಹೆಚ್ಚಿನ ಪಾಸಿಂಗ್ ಪರ್ಸೆಂಟೇಜ್ 99.91 ಹೊಂದಿದ್ದು, ನಂತರದ ಸ್ಥಾನದಲ್ಲಿ 99.04 ವಿಜಯವಾಡ ಇದೆ. ಬೆಂಗಳೂರಿನ ಉತ್ತೀರ್ಣತೆ ದರ 96.95 ಆಗಿದೆ.
ಸಿಬಿಎಸ್ಸಿ ಫಲಿತಾಂಶ ವೀಕ್ಷಣೆಗೆ ವಿದ್ಯಾರ್ಥಿಗಳು cbse.nic.in, cbse.gov.in, cbseresults.nic.in, ಮತ್ತು results.cbse.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗ್ತಿದ್ದೀರಾ? ಈ ಸಂಗತಿಗಳನ್ನು ತಪ್ಪದೆ ಪಾಲಿಸಿ