ನವದೆಹಲಿ: 2021-22ರಲ್ಲಿ ಉನ್ನತ ಶಿಕ್ಷಣಕ್ಕೆ 4.33 ಕೋಟಿ ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು, ಈ ಪ್ರಮಾಣವು 2014-2015ಕ್ಕೆ ಹೋಲಿಕೆ ಮಾಡಿದಾಗ ಶೇ 26.5ರಷ್ಟು ಅಧಿಕವಾಗಿದೆ ಎಂದು ಶಿಕ್ಷಣ ಸಚಿವಾಲಯದಿಂದ ನಡೆಸಲಾದ ಸಮೀಕ್ಷೆ ತಿಳಿಸಿದೆ.
ಉನ್ನತ ಶಿಕ್ಷಣದ ಮೇಲಿನ ಅಖಿಲ ಭಾರತ ಸಮೀಕ್ಷೆ (ಎಐಎಸ್ಎಚ್ಇ) ಗುರುವಾರ ಈ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2015-15ರಿಂದ 341 ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಮಟ್ಟದ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ವರದಿ ತಿಳಿಸಿದೆ.
ಸಮೀಕ್ಷೆಯಲ್ಲಿ ಒಟ್ಟು ದಾಖಲಾತಿ ದರವು 2014-15ರಲ್ಲಿ 23.7ರಷ್ಟಿದ್ದು, ಇದು 2021-22ಕ್ಕೆ 28.4ರಷ್ಟು ಹೆಚ್ಚಳ ಕಂಡಿದೆ. ಮಹಿಳೆಯರ ಒಟ್ಟು ದಾಖಲಾತಿ ದರವು 2014-15ರಲ್ಲಿ 22.9 ಇದ್ದರೆ, 2021-22ರಲ್ಲಿ 28.5ರಷ್ಟಿದೆ ಎಂದು ತೋರಿಸಿದೆ.
ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವಾಲಯ 2021-22ರ ಉನ್ನತ ಶಿಕ್ಷಣದ ಮೇಲಿನ ಅಖಿಲ ಭಾರತ ಸಮೀಕ್ಷೆ ಬಿಡುಗಡೆ ಮಾಡಿದೆ. 2022ರಿಂದ ಸಚಿವಾಲಯವು ಎಐಎಸ್ಎಚ್ಇಯನ್ನು ನಡೆಸುತ್ತಿದ್ದು, ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ದಾಖಲಾತಿ, ಶಿಕ್ಷಕರು, ಮೂಲಭೂತ ಸೌಕರ್ಯ ಮಾಹಿತಿ ಸೇರಿದಂತೆ ವಿವಿಧ ಮಾನದಂಡಗಳ ಆಧಾರಿತವಾಗಿ ವಿವರವಾದ ಮಾಹಿತಿಯನ್ನು ಸಂಗ್ರಹಿಸುತ್ತದೆ.
ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ: 2020-21ರಲ್ಲಿ 4.14 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾದರೆ 2021-2022ರಲ್ಲಿ 4.33 ಕೋಟಿ ದಾಖಲಾಗಿದ್ದಾರೆ. 2014-15ಕ್ಕೆ ಹೋಲಿಕೆ ಮಾಡಿದಾಗ ಈ ದಾಖಲಾತಿಯು ಶೇ 3.42ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷೆ ಪ್ರಕಾರ ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿ 2014-15ರಲ್ಲಿ 1.57ರಷ್ಟಿದ್ದರೆ, 2021-22ರಲ್ಲಿ 2.07 ಕೋಟಿ ಆಗಿದೆ.
ಈ ನಡುವೆ 2014-15ರಲ್ಲಿ 46.07 ಲಕ್ಷ ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳು ದಾಖಲಾದರೆ, 2021-22ರಲ್ಲಿ 66.23 ಲಕ್ಷ ಮಂದಿ ದಾಖಲಾತಿ ಪಡೆದಿದ್ದಾರೆ. ಅಂದರೆ ಈ ವಿದ್ಯಾರ್ಥಿಗಳ ಸಂಖ್ಯೆ ಶೇ 44ರಷ್ಟು ಹೆಚ್ಚಳ ಕಂಡು ಬಂದಿದೆ. ಇದೇ ವೇಳೆ ಪರಿಶಿಷ್ಟ ಜಾತಿಯ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ 2014-16ರಲ್ಲಿ 21.02 ಲಕ್ಷ ಇದ್ದರೆ, 2021-22ರಲ್ಲಿ 31.71 ಲಕ್ಷ ಆಗಿದೆ. ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ದಾಖಲಾತಿ 2014-15ರಲ್ಲಿ 27.1 ಲಕ್ಷ ಆದರೆ, 2021-22ರಲ್ಲಿ 1.63 ಕೋಟಿ ಆಗಿದೆ.
ಈ ಸಮೀಕ್ಷೆಯು 1,168 ವಿಶ್ವವಿದ್ಯಾನಿಲಯಗಳು, ವಿಶ್ವವಿದ್ಯಾನಿಲಯ ಮಟ್ಟದ ಸಂಸ್ಥೆ ಮತ್ತು 45,473 ಕಾಲೇಜ್ ಮತ್ತು 12.002 ಸ್ವತಂತ್ರ ಸಂಸ್ಥೆಗಳನ್ನು ಒಳಗೊಂಡಿದೆ.
ವಿವಿಧ ವಿಭಾಗದಲ್ಲಿನ ದಾಖಲಾತಿ: ಎಐಎಸ್ಎಚ್ಇ 2021-22ರ ಪದವಿಪೂರ್ವ ಮಟ್ಟದಲ್ಲಿ ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 34.2ರಷ್ಟು ದಾಖಲಾತಿ ಕಂಡರೆ, ವಿಜ್ಞಾನ ವಿಭಾಗದಲ್ಲಿ 14.8ರಷ್ಟು ಮತ್ತು ವಾಣಿಜ್ಯ ವಿಭಾಗದಲ್ಲಿ 13.3ರಷ್ಟು ಹಾಗೂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 11.8ರಷ್ಟು ವಿದ್ಯಾರ್ಥಿಗಳು ದಾಖಲಾತಿ ಕಂಡಿದ್ದಾರೆ.
ಎಐಎಸ್ಎಚ್ಇ 2021-22ರ ಸ್ನಾತಕೋತ್ತರ ಮಟ್ಟದಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ಅತಿ ಹೆಚ್ಚು ಅಂದರೆ ಶೇ 21.1ರಷ್ಟು ವಿದ್ಯಾರ್ಥಿಗಳು ದಾಖಲಾತಿ ಪಡೆದರೆ ವಿಜ್ಞಾನದಲ್ಲಿ 14.7ರಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
2014-15ಕ್ಕೆ ಹೋಲಿಕೆ ಮಾಡಿದಾಗ ಪಿಎಚ್ಡಿ ದಾಖಲಾತಿ ಕೂಡ ಹೆಚ್ಚಾಗಿದೆ. 2014-15ರಲ್ಲಿ ಪಿಎಚ್ಡಿ ನೋಂದಣಿ 1.17 ಲಕ್ಷ ಇದ್ದರೆ, 2021-22ರಲ್ಲಿ 2.12 ಲಕ್ಷ (ಶೇ 81.2ರಷ್ಟು) ಇದೆ.
2021-22ರಲ್ಲಿ ಒಟ್ಟಾರೆ ಶಿಕ್ಷಕರು ಮತ್ತು ಸಿಬ್ಬಂದಿಗಳ ದಾಖಲಾತಿ 15.98 ಲಕ್ಷ ಇದ್ದು, ಇದರಲ್ಲಿ 56.6ರಷ್ಟು ಪುರುಷರು ಮತ್ತು 43.4ರಷ್ಟು ಮಹಿಳಾ ಸಿಬ್ಬಂದಿಗಳಿದ್ದಾರೆ. ಮಹಿಳಾ ಸಿಬ್ಬಂದಿ ಮತ್ತು ಶಿಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.
ಸಮೀಕ್ಷೆ ಪ್ರಕಾರ, 2021-22ರಲ್ಲಿ 6.94 ಲಕ್ಷ ಮಹಿಳಾ ಶಿಕ್ಷಕರು ದಾಖಲಾಗಿದ್ದು, 2014-15ಕ್ಕೆ ಹೋಲಿಕೆ ಮಾಡಿದಾಗ ಇವರ ಸಂಖ್ಯೆ ಶೇ 22ರಷ್ಟು ಹೆಚ್ಚಾಗಿದೆ. (ಎಎನ್ಐ)
ಇದನ್ನೂ ಓದಿ: ಅರ್ಧದಷ್ಟು ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಬರಲ್ಲ: ASER ವರದಿ