ನವದೆಹಲಿ: ವೊಡಾಫೋನ್ ಐಡಿಯಾ ಚಂದಾದಾರರ ಸಂಖ್ಯೆ ಸತತವಾಗಿ ಇಳಿಕೆಯಾಗುತ್ತಿದೆ. 2023ರ ಡಿಸೆಂಬರ್ನಲ್ಲಿ ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಚಂದಾದಾರರ ಸಂಖ್ಯೆ ಏರಿಕೆಯಾಗಿದ್ದರೆ, ವೊಡಾಫೋನ್ ಐಡಿಯಾ ಚಂದಾದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ - ಅಂಶಗಳು ತಿಳಿಸಿವೆ.
ವೊಡಾಫೋನ್ ಐಡಿಯಾ ಡಿಸೆಂಬರ್ನಲ್ಲಿ 13.68 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ. ನವೆಂಬರ್ನಲ್ಲಿ ಕಂಪನಿಯು 10.73 ಲಕ್ಷ ಚಂದಾದಾರರನ್ನು ಕಳೆದುಕೊಂಡಿತ್ತು. ರಿಲಯನ್ಸ್ ಜಿಯೋ ನವೆಂಬರ್ನಲ್ಲಿ 34.47 ಲಕ್ಷಕ್ಕೆ ಹೋಲಿಸಿದರೆ ಡಿಸೆಂಬರ್ನಲ್ಲಿ 39.94 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನು ಪಡೆದುಕೊಂಡಿದೆ. ಭಾರ್ತಿ ಏರ್ ಟೆಲ್ ಕೂಡ ಡಿಸೆಂಬರ್ನಲ್ಲಿ 18.5 ಲಕ್ಷ ಹೊಸ ಚಂದಾದಾರರನ್ನು ಪಡೆದಿದೆ. ಇದು ಹಿಂದಿನ ತಿಂಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಡಿಸೆಂಬರ್ ನಲ್ಲಿ 1.5 ಲಕ್ಷ ವೈರ್ಲೆಸ್ ಚಂದಾದಾರರನ್ನು ಕಳೆದುಕೊಂಡಿದೆ. ಇದು ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡಾ 84 ರಷ್ಟು ಕಡಿಮೆಯಾಗಿದೆ. ಟ್ರಾಯ್ ಅಂಕಿ- ಅಂಶಗಳ ಪ್ರಕಾರ, ನವೆಂಬರ್ನಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟಾರೆ ಹೊಸ ಮೊಬೈಲ್ ಸಂಪರ್ಕಗಳು ಶೇಕಡಾ 35.78 ರಷ್ಟು ಏರಿಕೆಯಾಗಿ 43.22 ಲಕ್ಷಕ್ಕೆ ತಲುಪಿದೆ.
ಭಾರ್ತಿ ಏರ್ ಟೆಲ್ ಶೇಕಡಾ 98.9 ಕ್ಕಿಂತ ಹೆಚ್ಚು ಸಕ್ರಿಯ ಚಂದಾದಾರರೊಂದಿಗೆ ಸಕ್ರಿಯ ಚಂದಾದಾರರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಜಿಯೋದ ಸಕ್ರಿಯ ಚಂದಾದಾರರ ಸಂಖ್ಯೆ ಡಿಸೆಂಬರ್ ನಲ್ಲಿ ಶೇಕಡಾ 92.32 ಕ್ಕೆ ಇಳಿಕೆಯಾಗಿದೆ. ಹಿಂದಿನ ತಿಂಗಳಲ್ಲಿ ಇದು ಶೇಕಡಾ 93.87 ರಷ್ಟಿತ್ತು.
ನಿಧಿ ಸಂಗ್ರಹಣೆಗೆ ವೊಡಾಫೋನ್ ಐಡಿಯಾ ಪ್ರಯತ್ನ: ಫೆಬ್ರವರಿ 27 ರಂದು ವೊಡಾಫೋನ್ ಐಡಿಯಾ ಆಡಳಿತ ಮಂಡಳಿಯ ಸಭೆ ನಡೆಯಲಿದ್ದು, ಸಭೆಯಲ್ಲಿ ಬಂಡವಾಳ ಸಂಗ್ರಹ ಪ್ರಸ್ತಾಪಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕಂಪನಿಯು ಗುರುವಾರ ಬಿಎಸ್ಇ ಫೈಲಿಂಗ್ನಲ್ಲಿ ತಿಳಿಸಿದೆ. ಈಕ್ವಿಟಿ ಅಥವಾ ಡೆಬ್ಟ್ ಸಾಧನಗಳ ರೂಪದಲ್ಲಿ ಬಂಡವಾಳ ಸಂಗ್ರಹಿಸುವುದು ಸೇರಿದಂತೆ ಇನ್ನಿತರ ಆಯ್ಕೆಗಳ ಬಗ್ಗೆ ಚರ್ಚೆಯಾಗಲಿದೆ.
ವೊಡಾಫೋನ್ ಐಡಿಯಾ ನಿವ್ವಳ ನಷ್ಟವು ಡಿಸೆಂಬರ್ 2023 ರ ತ್ರೈಮಾಸಿಕದಲ್ಲಿ 6,986 ಕೋಟಿ ರೂ.ಗೆ ಇಳಿದಿದೆ. ಕಂಪನಿಯ ಕಾರ್ಯಕ್ಷಮತೆಯಲ್ಲಿನ ಸುಧಾರಣೆಯ ಕಾರಣದಿಂದ ಒಂದು ಬಾರಿಯ ₹ 755.5 ಕೋಟಿ ಅಸಾಧಾರಣ ಲಾಭ ಬಂದಿದೆ. ಕಂಪನಿಗೆ ಪ್ರತಿ ಚಂದಾದಾರರಿಂದ ಬರುವ ಸರಾಸರಿ ಆದಾಯವೂ 2024 ರ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚಾಗಿದೆ. ಕಳೆದ ವರ್ಷ ಕಂಪನಿಯ ನಿವ್ವಳ ನಷ್ಟ 7,990 ಕೋಟಿ ರೂ. ಆಗಿತ್ತು.
ಇದನ್ನೂ ಓದಿ : 7 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಭಾರತದ ವ್ಯಾಪಾರ ಬೆಳವಣಿಗೆ ದರ