ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರಿ ಆಹಾರದ ಬೆಲೆ ವಿಪರೀತ ಹೆಚ್ಚಾಗುತ್ತಿರುವುದರಿಂದ ಶಾಕಾಹಾರಿಗಳು ಚಿಂತೆಗೀಡಾಗಿದ್ದಾರೆ. ಮನೆಯಲ್ಲಿ ತಯಾರಿಸಿದ ಸಸ್ಯಾಹಾರಿ ಥಾಲಿಯ ಬೆಲೆಗಳು ಕಳೆದ ನವೆಂಬರ್ 2023ರಿಂದ ಹೆಚ್ಚಾಗುತ್ತಲೇ ಸಾಗಿವೆ. ಈ ವರ್ಷದ ಜೂನ್ನಲ್ಲಿ ಮನೆಯಲ್ಲಿ ಬೇಯಿಸಿದ ವೆಜ್ ಥಾಲಿಯ ಬೆಲೆ ಶೇಕಡಾ 10ರಷ್ಟು ಹೆಚ್ಚಾದರೆ, ನಾನ್ ವೆಜ್ ಥಾಲಿಯ ಬೆಲೆ ಶೇಕಡಾ 4ರಷ್ಟು ಕಡಿಮೆಯಾಗಿದೆ ಎಂದು ವರದಿಯೊಂದು ತೋರಿಸಿದೆ.
ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಯ ಬೆಲೆಗಳಲ್ಲಿ ಕ್ರಮವಾಗಿ ಶೇಕಡಾ 30, 46 ಮತ್ತು 59ರಷ್ಟು ಏರಿಕೆಯಾದ ಕಾರಣ ವೆಜ್ ಥಾಲಿಯ ಬೆಲೆ ಹೆಚ್ಚಾಗಿದೆ.
"ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಕಾರಣದಿಂದ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಇವುಗಳ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ" ಎಂದು ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್ನ ಸಂಶೋಧನಾ ನಿರ್ದೇಶಕ ಪುಶನ್ ಶರ್ಮಾ ಹೇಳಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಟೊಮೆಟೊ ಬೆಲೆಗಳು ಏರಿಕೆಯಾಗಿದ್ದರಿಂದ ವೆಜ್ ಥಾಲಿ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಆದರೆ ಬರುವ ದಿನಗಳಲ್ಲಿ ಟೊಮೆಟೊ ಬೆಲೆ ಕಡಿಮೆಯಾದಂತೆ ಥಾಲಿ ಬೆಲೆ ಕೂಡ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರಬಿ ಹಂಗಾಮಿನಲ್ಲಿ ಈರುಳ್ಳಿ ಆವಕ ಕುಸಿತ, ಮಾರ್ಚ್ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಆಲೂಗಡ್ಡೆ ಬೆಳೆ ನಷ್ಟದಿಂದ ಇವುಗಳ ಬೆಲೆಗಳು ಏರಿಕೆಯಾಗಿವೆ. ಹಾಗೆಯೇ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿನ ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಅತಿಯಾದ ಬಿಸಿಲಿನ ಶಾಖದಿಂದ ಇಳುವರಿ ಕುಸಿತವಾಗಿದ್ದರಿಂದ ಈ ಬಾರಿ ಟೊಮೆಟೊ ಆವಕದಲ್ಲಿ ಶೇ 35ರಷ್ಟು ಕಡಿಮೆಯಾಗಿದೆ. ಇದರಿಂದ ಟೊಮೆಟೊ ಬೆಲೆಗಳು ಗಗನಕ್ಕೇರಿದ್ದವು ಎಂದು ಕ್ರಿಸಿಲ್ ವರದಿ ಹೇಳಿದೆ.
ಕಳೆದ ಹಣಕಾಸು ವರ್ಷದಲ್ಲಿ ಮೂಲ ದರದ ಆಧಾರದ ಮೇಲೆ ಬ್ರಾಯ್ಲರ್ ಮಾಂಸದ ಬೆಲೆ ವಾರ್ಷಿಕವಾಗಿ ಶೇಕಡಾ 14ರಷ್ಟು ಕುಸಿತವಾಗಿದೆ. ಜೊತೆಗೆ ಅತಿಯಾದ ಮಾಂಸ ಪೂರೈಕೆ ಮತ್ತು ವರ್ಷದಿಂದ ವರ್ಷಕ್ಕೆ ಕಡಿಮೆ ಮೇವಿನ ವೆಚ್ಚಗಳ ಕಾರಣದಿಂದ ನಾನ್-ವೆಜ್ ಥಾಲಿಯ ಬೆಲೆ ಕಡಿಮೆಯಾಗಿದೆ.
ಆದಾಗ್ಯೂ ಕಳೆದ ತಿಂಗಳಿಗೆ ಹೋಲಿಸಿದರೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳ ಬೆಲೆ ತಿಂಗಳಿಗೆ ಕ್ರಮವಾಗಿ ಶೇಕಡಾ 6 ಮತ್ತು ಶೇಕಡಾ 4ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಒಂದೊಮ್ಮೆ ನಾನ್ ವೆಜ್ ಊಟ ತುಂಬಾ ದುಬಾರಿ ಎನ್ನಲಾಗುತ್ತಿತ್ತು. ಆದರೆ ಬದಲಾದ ಕಾಲಮಾನದಲ್ಲಿ ಸಸ್ಯಾಹಾರಿ ಊಟ ದುಬಾರಿಯಾಗಿರುವುದು ಮಾತ್ರವಲ್ಲದೆ, ಶುಚಿಯಾದ ಊಟ ಸಿಗುವುದೇ ದುರ್ಲಭವಾಗುತ್ತಿದೆ.
ಇದನ್ನೂ ಓದಿ: 5 ವರ್ಷದಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆ ಶೇ 57ರಷ್ಟು ಹೆಚ್ಚಳ - Bengaluru Residential Prices