ನವದೆಹಲಿ: ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲಿ ಭಾರತ ಅಭಿವೃದ್ಧಿಪಡಿಸಿದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ತಂತ್ರಜ್ಞಾನವನ್ನು ಇಂದಿನಿಂದ ಜಾರಿಗೊಳಿಸಲಾಗಿದೆ. ಫ್ರಾನ್ಸ್‌ನಲ್ಲಿ ಆರಂಭವಾದ ಒಂದು ವಾರದ ನಂತರ ಈಗ ಈ ಎರಡು ದೇಶಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಜಾರಿಗೆ ಬಂದಿದೆ. ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರೊಂದಿಗೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಮಾರಿಷಸ್ ನಲ್ಲಿ ಇಂದು ರುಪೇ ಕಾರ್ಡ್ಗಳನ್ನು ಸಹ ಪರಿಚಯಿಸಲಾಯಿತು.
"ಶ್ರೀಲಂಕಾ ಮತ್ತು ಮಾರಿಷಸ್ನೊಂದಿಗೆ ಭಾರತದ ದೃಢವಾದ ಸಾಂಸ್ಕೃತಿಕ ಸಂಬಂಧ ಮತ್ತು ಜನರ ನಡುವಿನ ಸಂಪರ್ಕವನ್ನು ಗಮನಿಸಿದರೆ, ಯುಪಿಐ ವ್ಯವಸ್ಥೆಯು ವೇಗದ ಮತ್ತು ತಡೆರಹಿತ ಡಿಜಿಟಲ್ ವಹಿವಾಟಿನ ಅನುಭವದ ಮೂಲಕ ಜನರಿಗೆ ಪ್ರಯೋಜನ ನೀಡಲಿದೆ ಮತ್ತು ದೇಶಗಳ ನಡುವೆ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸಲಿದೆ" ಎಂದು ನರೇಂದ್ರ ಮೋದಿ ಅವರ ಕಚೇರಿ ತಿಳಿಸಿದೆ.
ಅನುಕೂಲವೇನು?: ಉಭಯ ದೇಶಗಳಿಗೆ ಭೇಟಿ ನೀಡುವ ಭಾರತೀಯರು ಆ ದೇಶಗಳಲ್ಲಿ ಯುಪಿಐ ಬಳಸಿ ಪಾವತಿ ಮಾಡಲು ಸಾಧ್ಯವಾಗಲಿದೆ ಮತ್ತು ಅದೇ ರೀತಿ ಭಾರತಕ್ಕೆ ಬರುವ ಮಾರಿಷಸ್ ಜನತೆ ಸಹ ಇದನ್ನು ಬಳಸಲು ಸಾಧ್ಯವಾಗಲಿದೆ. ರುಪೇ ಸೇವೆಗಳ ವಿಸ್ತರಣೆಯು ಮಾರಿಷಸ್ ಬ್ಯಾಂಕುಗಳಿಗೆ ರುಪೇ ಕಾರ್ಡ್ ಗಳನ್ನು ವಿತರಿಸಲು ಮತ್ತು ಅವುಗಳನ್ನು ಭಾರತ ಮತ್ತು ಮಾರಿಷಸ್ ಎರಡರಲ್ಲೂ ವ್ಯಾಪಾರಗಳಲ್ಲಿ ಬಳಸಲು ಅನುವು ಮಾಡಿಕೊಡುತ್ತದೆ.
"ಫಿನ್ಟೆಕ್ ಆವಿಷ್ಕಾರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಭಾರತವು ನಾಯಕನಾಗಿ ಹೊರಹೊಮ್ಮಿದೆ. ನಮ್ಮ ಅಭಿವೃದ್ಧಿ ಅನುಭವಗಳು ಮತ್ತು ಸಂಶೋಧನೆಗಳನ್ನು ಪಾಲುದಾರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಪ್ರಧಾನಿ ಬಲವಾದ ಒತ್ತು ನೀಡಿದ್ದಾರೆ" ಎಂದು ಸರ್ಕಾರ ಹೇಳಿದೆ. ಫೆಬ್ರವರಿ 2ರಂದು ಪ್ಯಾರಿಸ್ನ ಐಫೆಲ್ ಟವರ್ನಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಯುಪಿಐ ಅನ್ನು ಪ್ರಾರಂಭಿಸಲಾಗಿತ್ತು. ಇದನ್ನು ಪ್ರಧಾನಿ ಮೋದಿಯವರ "ಯುಪಿಐ ಅನ್ನು ಜಾಗತಿಕವಾಗಿ ಅಳವಡಿಸುವ ದೃಷ್ಟಿಕೋನದ" ಭಾಗವೆಂದು ಸರ್ಕಾರ ಕರೆದಿತ್ತು.
ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಎಂಬುದು ಅನೇಕ ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ ಬಳಸಬಹುದಾದ ವ್ಯವಸ್ಥೆಯಾಗಿದೆ. ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳು ಇದರಲ್ಲಿದ್ದು, ತಡೆರಹಿತ ಹಣ ವರ್ಗಾವಣೆ ಮಾಡಬಹುದು. ಅಲ್ಲದೆ ಯಾವುದೇ ಖರೀದಿಯ ನಂತರ ಅದಕ್ಕೆ ನೀವು ಈ ಆ್ಯಪ್ನಿಂದ ಹಣ ಪಾವತಿಸಬಹುದು.
ಇದನ್ನೂ ಓದಿ: ಅಯೋಧ್ಯೆಯಲ್ಲಿ 5 - ಸ್ಟಾರ್ ಹೋಟೆಲ್ ನಿರ್ಮಿಸಲಿದೆ Ease My Trip