ಚೆನ್ನೈ: ಅಕಾಲಿಕ ಮಳೆಯಿಂದಾಗಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಉಪ್ಪು ಉತ್ಪಾದನೆಗೆ ಅಡ್ಡಿಯುಂಟಾಗಿದೆ. ದಕ್ಷಿಣ ಭಾರತದಲ್ಲಿಯೇ ಗರಿಷ್ಠ ಉಪ್ಪು ಉತ್ಪಾದಿಸುವ ತೂತುಕುಡಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಉಪ್ಪು ಉತ್ಪಾದನಾ ಪ್ರದೇಶಗಳು ಜಲಾವೃತವಾಗಿದ್ದರಿಂದ, ಉತ್ಪಾದನೆ ಕುಂಠಿತವಾಗಿದೆ.
ಇಲ್ಲಿ 20 ಲಕ್ಷ ಟನ್ ಉಪ್ಪು ಉತ್ಪಾದನೆ: ತೂತುಕುಡಿ ಉಪ್ಪು ಉದ್ಯಮದ ಪ್ರಕಾರ, ಜಿಲ್ಲೆಯಲ್ಲಿ ವಾರ್ಷಿಕವಾಗಿ 20 ಲಕ್ಷ ಟನ್ ಉಪ್ಪು ಉತ್ಪಾದನೆಯಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ನಲ್ಲಿ ಸೀಸನ್ ಕೊನೆಗೊಳ್ಳುವ ಹಂತ ತಲುಪಿದ್ದರೂ ಕೇವಲ 12 ಲಕ್ಷ ಟನ್ ಉಪ್ಪು ಉತ್ಪಾದಿಸಲಾಗಿದೆ. ಉಪ್ಪು ಉತ್ಪಾದನೆಯಲ್ಲಿನ ತೀವ್ರ ಕುಸಿತದಿಂದಾಗಿ ತಯಾರಕರು ಮತ್ತು ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ.
ಈ ಬಗ್ಗೆ ಗುರುವಾರ ಹೇಳಿಕೆ ನೀಡಿರುವ ಟ್ಯುಟಿಕೋರಿನ್ ಸಣ್ಣ ಪ್ರಮಾಣದ ಉಪ್ಪು ತಯಾರಕರ ಸಂಘ (ಟಿಎಸ್ಎಸ್ಎಸ್ಎಂಎ), ಉಪ್ಪು ಉತ್ಪಾದನೆಗೆ ತೀವ್ರ ಹೊಡೆತ ಬಿದ್ದಿದೆ ಮತ್ತು ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದ್ದು, ಇದು ಉಪ್ಪು ತಯಾರಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಹೇಳಿದೆ. ಉಪ್ಪಿನ ಉತ್ಪಾದನೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಬೆಲೆ ಏರಿಕೆ ಸಾಧ್ಯತೆ: ಪ್ರಸ್ತುತ, ಒಂದು ಟನ್ ಗುಣಮಟ್ಟದ ಉಪ್ಪು 2,200 ರಿಂದ 3,500 ರೂ.ವರೆಗೆ ಸಿಗುತ್ತಿದೆ. ಆದರೆ ಉತ್ಪಾದನೆ ತೀವ್ರವಾಗಿ ಕುಸಿದಿರುವುದರಿಂದ, ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಾಗಬಹುದು ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಟ್ಯುಟಿಕೋರಿನ್ ಸಾಲ್ಟ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ. ತೆನ್ರಾಜಾ, ಟುಟಿಕೋರಿನ್ನಲ್ಲಿ ಉಪ್ಪು ಉತ್ಪಾದನೆ ಕುಂಠಿತವಾಗಿದ್ದರಿಂದ ಖರೀದಿದಾರರು ದೇಶದ ಅತಿದೊಡ್ಡ ಉಪ್ಪು ತಯಾರಕ ರಾಜ್ಯವಾಗಿರುವ ಗುಜರಾತ್ನಿಂದ ಉಪ್ಪು ಖರೀದಿಸುತ್ತಿದ್ದಾರೆ ಎಂದು ಹೇಳಿದರು. ಗುಜರಾತ್ ಈಗಾಗಲೇ ಶೇಕಡಾ 60 ರಷ್ಟು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದು, ಇದು ತೂತುಕುಡಿ ಉಪ್ಪು ಉದ್ಯಮದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಅಕಾಲಿಕ ಮಳೆಯಿಂದಾಗಿ ತಿರುಚೆಂಡೂರ್, ಪುನ್ನಕೈಯಿಲ್, ಕಾಯಲ್ಪಟ್ಟಿಣಂ ಮತ್ತು ವೆಪ್ಪಲಡೈನ ಶೇಕಡಾ 50 ರಷ್ಟು ಉಪ್ಪು ಉತ್ಪಾದನಾ ಪ್ರದೇಶಗಳಲ್ಲಿ ಉತ್ಪಾದನೆ ಗಮನಾರ್ಹವಾಗಿ ಕುಸಿದಿದೆ ಎಂದು ಟಿಎಸ್ಎಸ್ಎಸ್ಎಂಎ ತಿಳಿಸಿದೆ. 2023 ರ ಪ್ರವಾಹದ ನಂತರ ಉದ್ಯಮವು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿತ್ತು, ಆದರೆ, ಹಠಾತ್ ಮಳೆಯಿಂದಾಗಿ ಉತ್ಪಾದನೆಗೆ ಮತ್ತೆ ಅಡಚಣೆಯಾಗಿದೆ ಎಂದು ಸಂಘ ಹೇಳಿದೆ. ಗುಜರಾತ್ ನಂತರ ದೇಶದ ಎರಡನೇ ಅತಿದೊಡ್ಡ ತೂತುಕುಡಿ ಉಪ್ಪು ಉದ್ಯಮದಲ್ಲಿ 30,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಜನರ ಬಳಿ ಇನ್ನೂ ಇದೆ 7 ಸಾವಿರ ಕೋಟಿಗೂ ಹೆಚ್ಚು ₹2000 ನೋಟು: ಠೇವಣಿಗೆ ಈಗಲೂ ಇದೆ ಅವಕಾಶ - RBI Update on 2000 rupee note