ತಿರುವನಂತಪುರಂ : ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ದಾಖಲೆಯ ಹೆಚ್ಚಳವಾಗಿದೆ. 2024-25ರ ಮೊದಲ ತ್ರೈಮಾಸಿಕದಲ್ಲಿ ಇಲ್ಲಿಂದ 1.26 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.
"2023-24ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇಕಡಾ 21 ರಷ್ಟು ಬೆಳವಣಿಗೆಯಾಗಿದೆ. ಆ ಅವಧಿಯಲ್ಲಿ 1.038 ಮಿಲಿಯನ್ ಪ್ರಯಾಣಿಕರು ನಿಲ್ದಾಣದ ಮೂಲಕ ಪ್ರಯಾಣಿಸಿದ್ದರು. ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಟಿಆರ್ವಿ) ಈಗ ಮಾಸಿಕ 4,00,000 ಕ್ಕೂ ಹೆಚ್ಚು ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ. ಒಟ್ಟು ಪ್ರಯಾಣಿಕರಲ್ಲಿ 6,61,000 ದೇಶೀಯವಾಗಿ ಮತ್ತು 5,98,000 ಅಂತರರಾಷ್ಟ್ರೀಯವಾಗಿ ಪ್ರಯಾಣಿಸಿದ್ದಾರೆ ಎಂದು ಟಿಆರ್ವಿ ಪ್ರಕಟಣೆ ಬುಧವಾರ ತಿಳಿಸಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ತಕ್ಕಂತೆ ಟಿಆರ್ವಿ ತನ್ನ ಮೂಲಸೌಕರ್ಯವನ್ನು ಹೆಚ್ಚಿಸಿದೆ. ಚೆಕ್-ಇನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ದೇಶೀಯ ಟರ್ಮಿನಲ್ನಲ್ಲಿ ಮೂರು ಹೊಸ ಚೆಕ್-ಇನ್ ಕೌಂಟರ್ಗಳನ್ನು ಆರಂಭಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಮತ್ತು ವಿಮಾನಯಾನ ಕಾರ್ಯಾಚರಣೆಗಳು ಹೆಚ್ಚುತ್ತಿರುವುದರಿಂದ ತಡೆರಹಿತ ಪ್ರಯಾಣದ ಅನುಭವಕ್ಕಾಗಿ ಸೌಲಭ್ಯಗಳನ್ನು ಮತ್ತಷ್ಟು ನವೀಕರಿಸುವ ಯೋಜನೆಗಳು ನಡೆಯುತ್ತಿವೆ ಎಂದು ಪ್ರಕಟಣೆ ತಿಳಿಸಿದೆ.
ಜಾಗತಿಕ ಕಂಪನಿಯಾದ ಅದಾನಿ ಗ್ರೂಪ್ನ ಪ್ರಮುಖ ಅಂಗಸಂಸ್ಥೆಯಾದ ಅದಾನಿ ಎಂಟರ್ ಪ್ರೈಸಸ್ನ ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ಈ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ.
2024-25ರ ಮೊದಲ ತ್ರೈಮಾಸಿಕದಲ್ಲಿ 7,954 ಬಾರಿ ವಿಮಾನಗಳು ಇಲ್ಲಿಂದ ಅಥವಾ ಇಲ್ಲಿಗೆ ಹಾರಾಟ (ಏರ್ ಟ್ರಾಫಿಕ್ ಮೂವ್ ಮೆಂಟ್ -ಎಟಿಎಂ) ನಡೆಸಿದ್ದವು. ಇದು 2023-24 ರ ಮೊದಲ ತ್ರೈಮಾಸಿಕದಲ್ಲಿ ಇದ್ದ 6,887 ಎಟಿಎಂಗಳಿಗಿಂತ ಶೇಕಡಾ 14 ರಷ್ಟು ಹೆಚ್ಚಾಗಿದೆ. ಟಿಆರ್ವಿ ಪ್ರಸ್ತುತ ದುಬೈ, ಅಬುಧಾಬಿ, ಶಾರ್ಜಾ, ದೋಹಾ, ದಮ್ಮಾಮ್, ಸಿಂಗಾಪುರ್, ಮಾಲೆ, ಕೌಲಾಲಂಪುರ್ ಮತ್ತು ಕೊಲಂಬೊ ಸೇರಿದಂತೆ 13 ಅಂತರ ರಾಷ್ಟ್ರೀಯ ಸ್ಥಳಗಳಿಗೆ ಸೇವೆಗಳನ್ನು ಒದಗಿಸುತ್ತದೆ.
ಹಾಗೆಯೇ ದೇಶೀಯವಾಗಿ ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೊಚ್ಚಿ ಮತ್ತು ಕಣ್ಣೂರುಗಳಿಗೆ ಇಲ್ಲಿಂದ ವಿಮಾನ ಸೇವೆ ಲಭ್ಯವಿದೆ. ಇಲ್ಲಿಂದ ಶಾರ್ಜಾ ಅತಿ ಹೆಚ್ಚು ಜನ ಪ್ರಯಾಣಿಸುವ ಅಂತರರಾಷ್ಟ್ರೀಯ ತಾಣವಾಗಿದ್ದರೆ, ಬೆಂಗಳೂರು ದೇಶೀಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ. 1932 ರಲ್ಲಿ ಸ್ಥಾಪನೆಯಾದ ತಿರುವನಂತಪುರಂ ವಿಮಾನ ನಿಲ್ದಾಣವು ಕೇರಳ ರಾಜ್ಯದ ಮೊದಲ ವಿಮಾನ ನಿಲ್ದಾಣ ಮತ್ತು ಭಾರತದ ಐದನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು 700 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿದೆ.
ಇದನ್ನೂ ಓದಿ : ಗೂಗಲ್ ನೇತೃತ್ವದಲ್ಲಿ 92 ಕೋಟಿ ರೂ. ಫಂಡಿಂಗ್ ಸಂಗ್ರಹಿಸಿದ ದೇಶೀಯ ಆ್ಯಪ್ 'ನಮ್ಮ ಯಾತ್ರಿ' - Namma Yatri