ನವದೆಹಲಿ: ಈ ವರ್ಷದ ಫೆಬ್ರವರಿಯಲ್ಲಿ ಇಪಿಎಫ್‌ಒಗೆ 15.48 ಲಕ್ಷ ನಿವ್ವಳ ಸಂಖ್ಯೆಯ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ ಎಂದು ಇಪಿಎಫ್ಒ ಶನಿವಾರ ಬಿಡುಗಡೆ ಮಾಡಿದ ಉದ್ಯೋಗಿಗಳ ತಾತ್ಕಾಲಿಕ ಅಂಕಿಅಂಶಗಳು ತೋರಿಸಿವೆ. ಇದು ಈ ತಿಂಗಳಲ್ಲಿ ದೇಶದ ಸಂಘಟಿತ ವಲಯದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿರುವುದನ್ನು ಪ್ರತಿಬಿಂಬಿಸುತ್ತದೆ.
ಫೆಬ್ರವರಿಯಲ್ಲಿ ಸುಮಾರು 7.78 ಲಕ್ಷ ಹೊಸ ಸದಸ್ಯರು ಇಪಿಎಫ್ಒಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ 18-25 ವಯಸ್ಸಿನ ಯುವಜನತೆಯ ಪ್ರಮಾಣ ಗಮನಾರ್ಹ ಶೇಕಡಾ 56.36 ರಷ್ಟಿದೆ. ಸಂಘಟಿತ ಉದ್ಯೋಗ ವಲಯಕ್ಕೆ ಸೇರ್ಪಡೆಯಾಗಿರುವ ಹೆಚ್ಚಿನವರು ಯುವ ವಯಸ್ಕರಾಗಿದ್ದು, ಮುಖ್ಯವಾಗಿ ಮೊದಲ ಬಾರಿಗೆ ನೌಕರಿಗೆ ಸೇರಿದವರಾಗಿದ್ದಾರೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉದ್ಯೋಗಿಗಳ ದತ್ತಾಂಶದ ಪ್ರಕಾರ 11.78 ಲಕ್ಷ ಉದ್ಯೋಗಿಗಳು ಇಪಿಎಫ್ಓನಿಂದ ನಿರ್ಗಮಿಸಿ ನಂತರ ಮತ್ತೆ ಇಪಿಎಫ್ಒಗೆ ಮರಳಿದ್ದಾರೆ. ಈ ಉದ್ಯೋಗಿಗಳು ತಮ್ಮ ನೌಕರಿಯನ್ನು ಬದಲಾಯಿಸಿದ್ದು, ಮತ್ತೆ ಇಪಿಎಫ್ಒ ವ್ಯಾಪ್ತಿಗೆ ಬರುವ ಕಂಪನಿಗೆ ಸೇರಿಕೊಂಡಿದ್ದಾರೆ ಹಾಗೂ ಅಂತಿಮ ಇಪಿಎಫ್ಒ ಸೆಟ್ಲಮೆಂಟ್ಗೆ ಅರ್ಜಿ ಸಲ್ಲಿಸುವ ಬದಲು ತಮ್ಮ ಇಪಿಎಫ್ಒ ಮೊತ್ತವನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ದೀರ್ಘಕಾಲೀನ ಆರ್ಥಿಕ ಯೋಗಕ್ಷೇಮವನ್ನು ಸುರಕ್ಷಿತವಾಗಿಟ್ಟುಕೊಂಡಿದ್ದಾರೆ ಮತ್ತು ಸಾಮಾಜಿಕ ಭದ್ರತಾ ರಕ್ಷಣೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಉದ್ಯೋಗಿಗಳ ದತ್ತಾಂಶವನ್ನು ಲಿಂಗವಾರು ವಿಶ್ಲೇಷಿಸಿದಾಗ, 7.78 ಲಕ್ಷ ಹೊಸ ಸದಸ್ಯರಲ್ಲಿ ಸುಮಾರು 2.05 ಲಕ್ಷ ಹೊಸ ಮಹಿಳಾ ಸದಸ್ಯರು ಇಪಿಎಫ್ಒಗೆ ಸೇರ್ಪಡೆಯಾಗಿರುವುದು ತಿಳಿದು ಬಂದಿದೆ. ಅಲ್ಲದೆ, ತಿಂಗಳಲ್ಲಿ ನಿವ್ವಳ ಮಹಿಳಾ ಸದಸ್ಯರ ಸೇರ್ಪಡೆ ಸುಮಾರು 3.08 ಲಕ್ಷದಷ್ಟಿದೆ. ಮಹಿಳಾ ಸದಸ್ಯರ ಸೇರ್ಪಡೆಯು ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಕಾರ್ಯಪಡೆಯತ್ತ ಸಮಗ್ರ ಬದಲಾವಣೆಯನ್ನು ಸೂಚಿಸುತ್ತದೆ.
ಕಂಪ್ಯೂಟರ್ಗಳ ಉತ್ಪಾದನೆ, ಮಾರುಕಟ್ಟೆ, ಸೇವೆ ಮತ್ತು ಬಳಕೆಯಲ್ಲಿ ತೊಡಗಿರುವ ಸಂಸ್ಥೆಗಳು ಹಾಗೂ ರಸ್ತೆ, ಮೋಟಾರು ಸಾರಿಗೆ, ಆಟೋಮೊಬೈಲ್ ಸೇವೆ, ಜವಳಿ ಇತ್ಯಾದಿ ವಲಯಗಳಲ್ಲಿ ಹೆಚ್ಚು ಹೊಸ ಉದ್ಯೋಗಗಳು ಸೇರ್ಪಡೆಯಾಗಿರುವುದು ಉದ್ಯಮವಾರು ಮಾಸಿಕ ಅಂಕಿಅಂಶಗಳ ಹೋಲಿಕೆಯಿಂದ ತಿಳಿದು ಬರುತ್ತದೆ. ಒಟ್ಟು ನಿವ್ವಳ ಸದಸ್ಯತ್ವದಲ್ಲಿ, ಸುಮಾರು 41.53 ಪ್ರತಿಶತದಷ್ಟು ಸದಸ್ಯತ್ವವು ಹೆಚ್ಚುವರಿ ತಜ್ಞ ಸೇವೆಗಳಾದ ಮಾನವಶಕ್ತಿ ಪೂರೈಕೆದಾರರು, ಸಾಮಾನ್ಯ ಗುತ್ತಿಗೆದಾರರು, ಭದ್ರತಾ ಸೇವೆಗಳು ಮತ್ತು ಇನ್ನಿತರ ವಿವಿಧ ಚಟುವಟಿಕೆಗಳ ವಲಯಗಳಿಗೆ ಸೇರಿದೆ.
ಇದನ್ನೂ ಓದಿ : ಬೇಸಿಗೆ ಪ್ರಯಾಣ ದಟ್ಟಣೆ: 2,742 ಹೆಚ್ಚುವರಿ ಟ್ರಿಪ್ ಓಡಿಸಲಿದೆ ಭಾರತೀಯ ರೈಲ್ವೆ - Indian Railways