ಹೈದರಾಬಾದ್: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರಾಗಿ ತೆಲಂಗಾಣದ ಚಲ್ಲಾ ಶ್ರೀನಿವಾಸುಲು ಶೆಟ್ಟಿ ಅವರನ್ನು ಕೇಂದ್ರ ಸರ್ಕಾರ ಮಂಗಳವಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಅವರು ಬ್ಯಾಂಕಿನ MD ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಎಸ್‌ಬಿಐನ ಹಾಲಿ ಚೇರ್ಮನ್ ಆಗಿ ದಿನೇಶ್ ಕುಮಾರ್ ಖಾರ ಕಾರ್ಯನಿರ್ವಹಿಸುತ್ತಿದ್ದು, ಅವರು ಇದೇ 28ರಂದು ಅಧಿಕಾರದಿಂದ ಕೆಳಗಿಳಿಯಲಿದ್ದರೆ, ಅದೇ ದಿನ ಶ್ರೀನಿವಾಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಲ್ಲಾ ಶ್ರೀನಿವಾಸುಲು ಅವರು ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಶ್ರೀನಿವಾಸುಲು ಶೆಟ್ಟಿ ಅವರ ನೇಮಕವನ್ನು ಹಣಕಾಸು ಸೇವೆಗಳ ಇಲಾಖೆ ಶಿಫಾರಸು ಮಾಡಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ನೇಮಕಾತಿ ಸಮಿತಿ ಎಸಿಸಿ ಈ ಶಿಫಾರಸನ್ನು ಒಪ್ಪಿಕೊಂಡಿದ್ದು, ಮುಂದಿನ ಅಧ್ಯಕ್ಷರ ಶಿಫಾರಸನ್ನು ಅನುಮೋದಿಸಿದೆ.
ಪಿಒ ಆಗಿ ಕೆಲಸಕ್ಕೆ ಸೇರಿ ಅಧ್ಯಕ್ಷ ಸ್ಥಾನದವರೆಗೂ ಏರಿದ ಶೆಟ್ಟಿ : ಕೃಷಿಯಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಮಾಡಿರುವ ಶ್ರೀನಿವಾಸ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್‌ಗಳ ಪ್ರಮಾಣೀಕೃತ ಬ್ಯಾಂಕರ್ ಕೂಡಾ ಆಗಿದ್ದಾರೆ. 1988 ರಲ್ಲಿ ಎಸ್‌ಬಿಐನಲ್ಲಿ ಪ್ರೊಬೇಷನರಿ ಅಧಿಕಾರಿ ಪಿಒ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು.
ತೆಲಂಗಾಣದ ಪೆದ್ದಪೋತುಲಪಾಡು ಗ್ರಾಮದಲ್ಲಿ ಜನಿಸಿದ ಶ್ರೀನಿವಾಸ್ (ಈಗ ಜೋಗುಲಾಂಬ ಗದ್ವಾಲಾ ಜಿಲ್ಲೆ) ಎಸ್‌ಬಿಐನಲ್ಲಿ ಚಿಲ್ಲರೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಪೋರ್ಟ್‌ಫೋಲಿಯೊಗಳ ಮೇಲ್ವಿಚಾರಣೆ ಮಾಡುತ್ತಿದ್ದರು. ಕಾರ್ಪೊರೇಟ್ ಸಾಲ, ಚಿಲ್ಲರೆ ವ್ಯಾಪಾರ, ಡಿಜಿಟಲ್ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್‌ನಲ್ಲಿ ವ್ಯಾಪಕ ಅನುಭವ ಗಳಿಸಿಕೊಂಡಿದ್ದಾರೆ. ಈ ಹಿಂದೆ ಶ್ರೀನಿವಾಸ್ ಅವರು, ಭಾರತ ಸರ್ಕಾರವು ಸ್ಥಾಪಿಸಿದ ಹಲವಾರು ಕಾರ್ಯಪಡೆಗಳು ಮತ್ತು ಸಮಿತಿಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ ಅನುಭವವನ್ನು ಕೂಡಾ ಹೊಂದಿದ್ದಾರೆ.
ಎಸ್‌ಬಿಐ ಎಂಡಿ ಆಗಿ ರಾಣಾ ಅಶುತೋಷ್ ಕುಮಾರ್ ಸಿಂಗ್: ಇನ್ನು ಶ್ರೀನಿವಾಸ್ ಅವರು ಎಸ್‌ಬಿಐನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಹಿನ್ನೆಲೆಯಲ್ಲಿ ಬ್ಯಾಂಕ್ನ ನೂತನ MD ಆಗಿ ರಾಣಾ ಅಶುತೋಷ್ ಕುಮಾರ್ ಸಿಂಗ್ ಅವರನ್ನು ಸರ್ಕಾರ ನೇಮಿಸಿದೆ. ಅವರು ಜೂನ್ 30, 2027 ರವರೆಗೆ ಈ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಎಸ್‌ಬಿಐ ಒಬ್ಬ ಅಧ್ಯಕ್ಷರು ಮತ್ತು ನಾಲ್ಕು ಎಂಡಿಗಳನ್ನು ಹೊಂದಿದೆ. ಪ್ರಸ್ತುತ ಸಿಂಗ್ ಅವರು ಡೆಪ್ಯೂಟಿ ಎಂಡಿ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.