ಮುಂಬೈ: ಭಾರತದ ಅಸ್ಮಿತೆಯಾಗಿದ್ದ ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರು 86ನೇ ವಯಸ್ಸಿನಲ್ಲಿ ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ. ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಿಸಿದ ರತನ್ ಟಾಟಾ, ಮುಂಬೈನಲ್ಲೇ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದರು. ಕಾರ್ನೆಲ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದುಕೊಂಡ ಟಾಟಾ ಅವರು, 1962 ರಲ್ಲಿ ಕಾರ್ಯನಿರ್ವಾಹಕ ಜವಾಬ್ದಾರಿ ವಹಿಸಿಕೊಂಡು ಟಾಟಾ ಗ್ರೂಪ್ಗೆ ಸೇರ್ಪಡೆಗೊಂಡಿದ್ದರು.
ವಿದೇಶದಲ್ಲಿ ಉನ್ನತ ಶಿಕ್ಷಣ ಪೂರೈಸಿ 1962ರ ಕೊನೆಯಲ್ಲಿ ಭಾರತಕ್ಕೆ ಆಗಮಿಸಿದ ಅವರು, ಟಾಟಾ ಸನ್ಸ್ ಕಂಪನಿಯನ್ನು ಮುಗಿಲೆತ್ತರಕ್ಕೆ ತೆಗೆದುಕೊಂಡು ಹೋಗಲು ಸಾಕಷ್ಟು ಶ್ರಮಿಸಿದರು. ಭಾರತಕ್ಕೆ ವಾಪಸ್ ಆಗುವ ಮುನ್ನ ರತನ್ ಟಾಟಾ ಲಾಸ್ ಏಂಜಲೀಸ್‌ನಲ್ಲಿ ಜೋನ್ಸ್ ಮತ್ತು ಎಮ್ಮನ್ಸ್ ಅವರೊಂದಿಗೆ ಕೆಲಸ ಮಾಡಿದರು. ಆ ಬಳಿಕ ಅವರು ಟಾಟಾ ಸ್ಟೀಲ್ ನಲ್ಲಿ ಮಹತ್ವದ ಭೂಮಿಕೆ ನಿರ್ವಹಿಸಿದರು.
ವಿವಿಧ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ ನಂತರ ರತನ್ 1971 ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಯ ನಿರ್ದೇಶಕರಾಗಿ ನೇಮಕಗೊಂಡರು. 1975 ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪೂರ್ಣಗೊಳಿಸಿದರು.
1981 ರಲ್ಲಿ ಅವರು, ಟಾಟಾ ಸಮೂಹದ ಇತರ ಕಂಪನಿಯಾದ ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ನೇಮಕಗೊಂಡರು. ಉನ್ನತ-ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು, ಹೊಸ ಹೊಸ ಉದ್ಯಮಗಳ ಪ್ರವರ್ತಕರಾದರು. ನಿವೃತ್ತಿಯ ನಂತರ ಟಾಟಾ ಅವರಿಗೆ ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಕೆಮಿಕಲ್ಸ್‌ನ ಚೇರ್ಮನ್ ಎಮೆರಿಟಸ್ ಗೌರವ ಪ್ರಶಸ್ತಿ ನೀಡಲಾಯಿತು.
ಹಲವು ಪುರಸ್ಕಾರಗಳಿಗೆ ಟಾಟಾ ಭಾಜನ: ಟಾಟಾ ಪ್ರಸ್ತುತ ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿದ್ದರು. ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಅಲೈಡ್ ಟ್ರಸ್ಟ್, ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಅಲೈಡ್ ಟ್ರಸ್ಟ್‌ಗಳ ಅಧ್ಯಕ್ಷರಾಗಿ ಅವರು ಟಾಟಾ ಗ್ರೂಪ್ ಮುನ್ನಡೆಸುತ್ತಿದ್ದರು. ಭಾರತ ಸರ್ಕಾರವು ಟಾಟಾ ಅವರಿಗೆ 2008 ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ. ಭಾರತೀಯ ಮತ್ತು ಜಾಗತಿಕ ವಿಶ್ವವಿದ್ಯಾನಿಲಯಗಳಿಂದ ಅನೇಕ ಇತರ ಪ್ರಶಸ್ತಿಗಳು, ಗೌರವಗಳು, ಗೌರವ ಡಾಕ್ಟರೇಟ್‌ಗಳು ಮತ್ತು ಇತರ ಪುರಸ್ಕಾರಗಳು ರತನ್ ಟಾಟಾ ಅವರನ್ನು ಅರಸಿ ಬಂದಿವೆ.
1991 ರಿಂದ ಡಿಸೆಂಬರ್ 28, 2012ರವರೆಗೆ, ಅಂದರೆ ನಿವೃತ್ತರಾಗುವವರೆಗೆ ಟಾಟಾ ಗ್ರೂಪ್‌ನ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ರತನ್ ಸೇವೆ ಸಲ್ಲಿಸಿದರು. ಅವರ ಉಸ್ತುವಾರಿ ಅವಧಿಯಲ್ಲಿ ಟಾಟಾ ಸನ್ಸ್ $100 ಶತಕೋಟಿ ಡಾಲರ್ ಆದಾಯದ ಕಂಪನಿಯಾಗಿ ಬೆಳೆದು ನಿಂತಿತ್ತು
ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಪವರ್, ಟಾಟಾ ಗ್ಲೋಬಲ್ ಬೆವರೇಜಸ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಸೇರಿದಂತೆ ಪ್ರಮುಖ ಟಾಟಾ ಕಂಪನಿಗಳ ಅಧ್ಯಕ್ಷರಾಗಿ ರತನ್ ಟಾಟಾ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರು ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ಸಂಸ್ಥೆಗಳೊಂದಿಗೆ ಸಹ ಸಂಬಂಧ ಹೊಂದಿದ್ದರು ಮತ್ತು ಮಿತ್ಸುಬಿಷಿ ಕಾರ್ಪೊರೇಷನ್ ಮತ್ತು ಜೆಪಿ ಮೋರ್ಗಾನ್ ಚೇಸ್‌ನ ಅಂತಾರಾಷ್ಟ್ರೀಯ ಸಲಹಾ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು.
ಟಾಟಾ ಅವರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಕೌನ್ಸಿಲ್ ಆಫ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಟ್ರಸ್ಟಿಗಳ ಮಂಡಳಿಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು.