ನವದೆಹಲಿ: ಕೇಂದ್ರ ಸರ್ಕಾರವು 2024-25ರ ಆರ್ಥಿಕ ವರ್ಷದಲ್ಲಿ 341.55 ದಶಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯ ಗುರಿಯನ್ನು ನಿಗದಿಪಡಿಸಿದೆ.
ದೇಶದಲ್ಲಿ ಖಾದ್ಯ ತೈಲದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಸ್ವಾವಲಂಬಿಗಳಾಗಲು, ಎಣ್ಣೆಕಾಳುಗಳ ಉತ್ಪಾದನೆಯನ್ನು 2022-23ರಲ್ಲಿ 39.2 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ನಿಂದ 2030-31 ರಲ್ಲಿ 69.7 ಎಂಎಂಟಿಗೆ ಹೆಚ್ಚಿಸುವುದು, ಕೃಷಿ ಪ್ರದೇಶವನ್ನು ಈಗಿರುವ 29 ಮಿಲಿಯನ್ ಹೆಕ್ಟೇರ್ ಗಳಿಂದ 33 ಮಿಲಿಯನ್ ಹೆಕ್ಟೇರ್ಗಳಿಗೆ ಹೆಚ್ಚಿಸುವುದು ಮತ್ತು ಇಳುವರಿಯನ್ನು 1353 ಕೆಜಿ / ಹೆಕ್ಟೇರ್ ನಿಂದ 2112 ಕೆಜಿಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ದೇಶವು ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಸಾಗಬೇಕಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ರೈತರಿಗೆ ನೈಜ ಬೆಲೆಗಳನ್ನು ನೀಡುವ ಮೂಲಕ ಪ್ರತಿ ಹೆಕ್ಟೇರ್ ಇಳುವರಿಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಖರೀದಿ ಬೆಲೆ ಮತ್ತು ಮಾರಾಟ ಬೆಲೆಯ ನಡುವಿನ ಅಂತರ ಕಡಿಮೆ ಮಾಡಲು ಸಾರಿಗೆ ವೆಚ್ಚ ತಗ್ಗಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವರು ರಾಷ್ಟ್ರ ರಾಜಧಾನಿಯಲ್ಲಿ ನಡೆದ 'ರಬಿ ಅಭಿಯಾನ 2024 ಗಾಗಿ ಕೃಷಿ ಕುರಿತ ರಾಷ್ಟ್ರೀಯ ಸಮ್ಮೇಳನ' ದಲ್ಲಿ ಹೇಳಿದರು.
"ಭಾರತವನ್ನು ವಿಶ್ವದ ಅತಿದೊಡ್ಡ ಆಹಾರ ಉತ್ಪಾದಕ ದೇಶವನ್ನಾಗಿ ಮಾಡಲು ರಾಜ್ಯಗಳು ಕೇಂದ್ರದ ಸಹಯೋಗದೊಂದಿಗೆ, ಕೃಷಿ-ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಉತ್ಪಾದನೆಯ ಕೆಲಸ ಮಾಡಬೇಕಿದೆ. 2024-25ರಲ್ಲಿ 341.55 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದಿಸುವ ರಾಷ್ಟ್ರೀಯ ಗುರಿ ಹಾಕಿಕೊಳ್ಳಲಾಗಿದೆ." ಎಂದು ಸಚಿವರು ಹೇಳಿದರು.
ಸಚಿವರು ಮತ್ತು ರಾಜ್ಯ ಪ್ರತಿನಿಧಿಗಳು ನೀಡುವ ಪ್ರತಿಯೊಂದು ಸಲಹೆಯ ಮೇರೆಗೆ ಸರ್ಕಾರವು ಸಹಯೋಗದಿಂದ ಕೆಲಸ ಮಾಡುತ್ತದೆ ಎಂದು ಅವರು ಭರವಸೆ ನೀಡಿದರು.
ಅಗತ್ಯ ಕೃಷಿ ಒಳಹರಿವುಗಳ ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯನ್ನು ಬೆಂಬಲಿಸಲು, ಆ ಮೂಲಕ ಬೆಳೆ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ನವೀನ ಕೃಷಿ ಪದ್ಧತಿಗಳು ಮತ್ತು ಡಿಜಿಟಲ್ ಉಪಕ್ರಮಗಳ ಬಗ್ಗೆ ಎಲ್ಲಾ ಮಧ್ಯಸ್ಥಗಾರರ ನಡುವೆ ಚರ್ಚೆ ನಡೆಸುವ ಉದ್ದೇಶದಿಂದ ರಬಿ ಅಭಿಯಾನ ಕೃಷಿ ಸಮ್ಮೇಳನ ನಡೆಯುತ್ತಿದೆ. ಕೃಷಿ-ಒಳಹರಿವಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮತ್ತು ಪೂರ್ವಭಾವಿ ಕೀಟ ನಿರ್ವಹಣಾ ತಂತ್ರಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಇತ್ತೀಚಿನ ಕೃಷಿ-ತಂತ್ರಜ್ಞಾನ ಉಪಕ್ರಮಗಳನ್ನು ಸಮ್ಮೇಳನದಲ್ಲಿ ಪ್ರದರ್ಶಿಸಿತು.
ಇದನ್ನೂ ಓದಿ : ಸರ್ಕಾರದಿಂದ ಪೂರೈಕೆ ಕಡಿತ: ಸಿಎನ್ಜಿ ಬೆಲೆ 4 ರಿಂದ 6 ರೂ. ಹೆಚ್ಚಳ ಸಾಧ್ಯತೆ