ನವದೆಹಲಿ: ಭಾರತದ ಷೇರು ಮಾರುಕಟ್ಟೆಗಳು ಬುಧವಾರ ಭಾರಿ ಕುಸಿತ ಕಂಡಿದ್ದು, ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಬುಧವಾರ ಸುಮಾರು 1,000 ಪಾಯಿಂಟ್ಗಳಷ್ಟು ಕುಸಿದು 73,000 ಮಟ್ಟಕ್ಕಿಂತ ಕೆಳಗಿಳಿದಿತ್ತು. ಇನ್ನು ನಿಫ್ಟಿ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದಿದೆ. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಹೆಚ್ಚು ಕುಸಿತ ಕಂಡವು. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 5 ಕ್ಕಿಂತ ಹೆಚ್ಚು ಕುಸಿದಿದೆ. ದಿನದ ಕೊನೆಯಲ್ಲಿ ಸೆನ್ಸೆಕ್ಸ್ 906 ಪಾಯಿಂಟ್ಸ್ ಕುಸಿದು 72,761 ಕ್ಕೆ ತಲುಪಿದ್ದರೆ, ನಿಫ್ಟಿ 338 ಪಾಯಿಂಟ್ಸ್ ಕುಸಿದು 22,000 ಕ್ಕಿಂತ ಮೂರು ಪಾಯಿಂಟ್ಸ್ ಕಡಿಮೆಯಾಗಿದೆ.
ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ 1730 ಪಾಯಿಂಟ್ ಅಥವಾ ಶೇಕಡಾ 3.61 ರಷ್ಟು ಕುಸಿತ ಕಂಡಿದೆ. ಅದೇ ಸಮಯದಲ್ಲಿ, ನಿಫ್ಟಿಯ ಸ್ಮಾಲ್ ಕ್ಯಾಪ್ ಸೂಚ್ಯಂಕ 676 ಪಾಯಿಂಟ್ ಅಥವಾ ಶೇಕಡಾ 4.50 ರಷ್ಟು ಕುಸಿತ ಕಂಡಿದೆ. ಇದಲ್ಲದೇ, ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ 1824 ಮತ್ತು ಮಿಡ್ ಕ್ಯಾಪ್ ಸೂಚ್ಯಂಕ 1382 ಪಾಯಿಂಟ್ಗಳಷ್ಟು ಕುಸಿತ ಕಂಡಿದೆ.
ಮಾರುಕಟ್ಟೆ ಕುಸಿತಕ್ಕೆ ಕಾರಣವೇನು? : ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಬಗ್ಗೆ ಇತ್ತೀಚೆಗೆ ಸೆಬಿ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದರು. ಸೆಬಿ ಈ ಷೇರುಗಳ ಮೇಲೆ ತೀವ್ರ ನಿಗಾ ಇಟ್ಟಿದೆ ಎಂದು ಅವರು ಹೇಳಿದ್ದರು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಬೆಲೆಗಳಲ್ಲಿ ಹಸ್ತಕ್ಷೇಪವಾಗಿರುವ ಲಕ್ಷಣಗಳು ಕಂಡು ಬಂದಿವೆ. ಅಲ್ಲದೇ ಎಸ್ಎಂಐ ಐಪಿಒದಲ್ಲಿ ತೊಂದರೆಯ ಚಿಹ್ನೆಗಳಿವೆ. ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಸೆಬಿ ಮುಖ್ಯಸ್ಥರು ಹೂಡಿಕೆದಾರರಿಗೆ ಸೂಚಿಸಿದ್ದರು. ಸೆಬಿ ಹೇಳಿಕೆ ನಂತರ ಮಾರುಕಟ್ಟೆಯ ಭಾವನೆ ಬದಲಾಯಿತು ಹಾಗೂ ಅದರ ಪರಿಣಾಮ ಇಂದು ಕಾಣಿಸಿಕೊಂಡಿದೆ.
ಒಂದೇ ದಿನದಲ್ಲಿ ಸುಮಾರು 13 ಲಕ್ಷ ಕೋಟಿ ರೂ. ನಷ್ಟ: ಬುಧವಾರ, ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತದಿಂದಾಗಿ ಬಿಎಸ್ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ 12.67 ಲಕ್ಷ ಕೋಟಿ ರೂ. ಕಡಿಮೆಯಾಗಿ 372 ಲಕ್ಷ ಕೋಟಿ ರೂ.ಗೆ ಇಳಿದಿದೆ. ಇದರರ್ಥ ಹೂಡಿಕೆದಾರರು ಕೆಲವೇ ಗಂಟೆಗಳಲ್ಲಿ ಸುಮಾರು 13 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಅದಾನಿ ಷೇರುಗಳು ತೀವ್ರ ಕುಸಿತ: ಅದಾನಿ ಷೇರುಗಳ ಕುಸಿತದಿಂದಾಗಿ ಅದಾನಿ ಗ್ರೂಪ್ನ ಮಾರುಕಟ್ಟೆ ಕ್ಯಾಪ್ 90,000 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಮತ್ತು ಗೌತಮ್ ಅದಾನಿ 100 ಬಿಲಿಯನ್ ಡಾಲರ್ ಕ್ಲಬ್ನಿಂದ ಹೊರ ಬರುವಂತಾಗಿದೆ. ಬುಧವಾರ ಅದಾನಿಯ ಎಲ್ಲ ಷೇರುಗಳು ಕುಸಿತ ಕಂಡವು. ಅದಾನಿ ಗ್ರೀನ್ ಎನರ್ಜಿ ಷೇರುಗಳು ಶೇಕಡಾ 9 ರಷ್ಟು ಕುಸಿತ ಕಂಡವು.
ಇದನ್ನೂ ಓದಿ : ಪ್ರತಿ ಆರ್ಡರ್ಗೆ 2 ರೂ. ಪ್ಲಾಟ್ಫಾರ್ಮ್ ಫೀ ವಿಧಿಸಲಾರಂಭಿಸಿದ Zepto