ಮುಂಬೈ: ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಮಂಗಳವಾರದ ವಹಿವಾಟಿನಲ್ಲಿ ಆರಂಭಿಕ ಲಾಭದ ನಂತರ ನಷ್ಟದೊಂದಿಗೆ ಕೊನೆಗೊಂಡವು. ಬಿಎಸ್ಇ ಸೆನ್ಸೆಕ್ಸ್ 166 ಪಾಯಿಂಟ್ಸ್ ಅಥವಾ ಶೇಕಡಾ 0.21ರಷ್ಟು ಕುಸಿದು 78,593ರಲ್ಲಿ ಕೊನೆಗೊಂಡಿತು. ಬಿಎಸ್ಇ ಸೂಚ್ಯಂಕವು ದಿನದ ವಹಿವಾಟಿನ ಒಂದು ಹಂತದಲ್ಲಿ ಶೇಕಡಾ 1.38ರಷ್ಟು ಏರಿಕೆಯಾಗಿ ದಿನದ ಗರಿಷ್ಠ 79,852.08ಕ್ಕೆ ತಲುಪಿತ್ತು.
ಮತ್ತೊಂದೆಡೆ, ಎನ್ಎಸ್ಇ ನಿಫ್ಟಿ50 63 ಪಾಯಿಂಟ್ಸ್ ಅಥವಾ ಶೇಕಡಾ 0.26ರಷ್ಟು ಕುಸಿದು 23,992 ರಲ್ಲಿ ಕೊನೆಗೊಂಡಿದೆ. ಇದು ಇಂಟ್ರಾಡೇ ವಹಿವಾಟಿನಲ್ಲಿ ಶೇಕಡಾ 1.35ರಷ್ಟು ಏರಿಕೆಯಾಗಿ ದಿನದ ಗರಿಷ್ಠ 24,382.6ಕ್ಕೆ ತಲುಪಿತ್ತು.
ಎನ್ಎಸ್ಇ ನಿಫ್ಟಿಯ 50 ಷೇರುಗಳ ಪೈಕಿ 29 ಷೇರುಗಳು ಕುಸಿದವು. ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಕಂಪನಿ ಮತ್ತು ಎಸ್ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ ಶೇಕಡಾ 4.28ರವರೆಗೆ ಕುಸಿದಿವೆ. ಬಿಪಿಸಿಎಲ್, ಶ್ರೀರಾಮ್ ಫೈನಾನ್ಸ್ ಮತ್ತು ಮಹೀಂದ್ರಾ & ಮಹೀಂದ್ರಾ ನಿಫ್ಟಿ 50 ಸೂಚ್ಯಂಕದಲ್ಲಿ ನಷ್ಟ ಅನುಭವಿಸಿದ ಇತರ ಪ್ರಮುಖ ಷೇರುಗಳಾಗಿವೆ.
ಬಿಎಸ್ಇಯಲ್ಲಿ ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ 17 ಷೇರುಗಳು ಇಳಿಕೆಯಲ್ಲಿ ಕೊನೆಗೊಂಡವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹೀಂದ್ರಾ & ಮಹೀಂದ್ರಾ ಮತ್ತು ಭಾರ್ತಿ ಏರ್ಟೆಲ್ ಬಿಎಸ್ಇಯಲ್ಲಿ ಕುಸಿದ ಪ್ರಮುಖ ಷೇರುಗಳಾಗಿವೆ. ಇಂಡಿಯಾ ವಿಎಕ್ಸ್ ಸೂಚ್ಯಂಕ ಮಂಗಳವಾರ ಶೇಕಡಾ 7.97ರಷ್ಟು ಕುಸಿದು 18.74 ಪಾಯಿಂಟ್ಗಳಲ್ಲಿ ಕೊನೆಗೊಂಡಿತು.
ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕವು ಶೇಕಡಾ 0.92ರಷ್ಟು ಕುಸಿದಿದೆ. ನಿಫ್ಟಿ ಮಿಡ್ ಕ್ಯಾಪ್ 100 ಮತ್ತು ಸ್ಮಾಲ್ ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 061 ಮತ್ತು ಶೇಕಡಾ 0.39ರಷ್ಟು ಕುಸಿದವು. ವಲಯ ಸೂಚ್ಯಂಕಗಳಲ್ಲಿ ಹಣಕಾಸು ಸೇವೆಗಳು, ಬ್ಯಾಂಕಿಂಗ್ ಮತ್ತು ತೈಲ ಮತ್ತು ಅನಿಲ ಶೇಕಡಾ 1.42ರಷ್ಟು ಕುಸಿತದೊಂದಿಗೆ ಕೊನೆಗೊಂಡವು. ಏತನ್ಮಧ್ಯೆ, ಐಟಿ, ಮೆಟಲ್, ರಿಯಾಲ್ಟಿ, ಮೀಡಿಯಾ ಮತ್ತು ಎಫ್ಎಂಸಿಜಿ ಶೇಕಡಾ 0.84ರಷ್ಟು ಲಾಭದೊಂದಿಗೆ ಸ್ಥಿರಗೊಳ್ಳುವಲ್ಲಿ ಯಶಸ್ವಿಯಾದವು.
ಆಗಸ್ಟ್ 6ರ ಮಂಗಳವಾರ ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ತನ್ನ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 83.95ಕ್ಕೆ ಕುಸಿದಿದ್ದು, ಸೋಮವಾರದ (ಆಗಸ್ಟ್ 5) ವಹಿವಾಟಿನಲ್ಲಿ ದಾಖಲಾಗಿದ್ದ ಹಿಂದಿನ ಕನಿಷ್ಠ 83.84ಕ್ಕಿಂತ ಇಳಿಕೆಯಾಗಿದೆ. ಭಾರತೀಯ ಕರೆನ್ಸಿ ಡಾಲರ್ ವಿರುದ್ಧ ದಾಖಲೆಯ ಕನಿಷ್ಠ 83.84ರಲ್ಲಿ ವಹಿವಾಟು ಪ್ರಾರಂಭಿಸಿತ್ತು.
ಇದನ್ನೂ ಓದಿ: ಭಾರ್ತಿ ಏರ್ಟೆಲ್ ನಿವ್ವಳ ಲಾಭ 4,160 ಕೋಟಿ ರೂ.ಗೆ ಏರಿಕೆ: 8 ಲಕ್ಷ ಹೊಸ ಚಂದಾದಾರರ ಸೇರ್ಪಡೆ - Bharti Airtel Net Profit