ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಗುರುವಾರದ ವಹಿವಾಟಿನಲ್ಲಿ ತಲಾ ಶೇಕಡಾ 1 ಕ್ಕಿಂತ ಹೆಚ್ಚು ಲಾಭದೊಂದಿಗೆ ದಾಖಲೆಯ ಗರಿಷ್ಠ ಮಟ್ಟದಲ್ಲಿ ಮುಕ್ತಾಯಗೊಂಡಿವೆ.
ಬಿಎಸ್ಇ ಸೆನ್ಸೆಕ್ಸ್ 1,439.55 ಪಾಯಿಂಟ್ಸ್ ಅಥವಾ ಶೇಕಡಾ 1.77 ರಷ್ಟು ಏರಿಕೆಯಾಗಿ 82,962.71 ರಲ್ಲಿ ಕೊನೆಗೊಂಡಿದೆ. ದಿನದ ವಹಿವಾಟಿನಲ್ಲಿ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ 83,116.19 ಕ್ಕೆ ತಲುಪಿತ್ತು. ಹಾಗೆಯೇ ನಿಫ್ಟಿ50 ಸಹ 470.45 ಪಾಯಿಂಟ್ಸ್ ಅಥವಾ ಶೇಕಡಾ 1.89 ರಷ್ಟು ಏರಿಕೆಯಾಗಿ 25,388.90 ರಲ್ಲಿ ಕೊನೆಗೊಂಡಿದೆ. ಗುರುವಾರದ ಇಂಟ್ರಾ-ಡೇ ವಹಿವಾಟಿನಲ್ಲಿ ನಿಫ್ಟಿ ಸಾರ್ವಕಾಲಿಕ ಗರಿಷ್ಠ 25,433.35 ಕ್ಕೆ ತಲುಪಿತ್ತು.
ನೆಸ್ಲೆ ಇಂಡಿಯಾ ಹೊರತುಪಡಿಸಿ ನಿಫ್ಟಿ 50 ಯಲ್ಲಿನ ಎಲ್ಲಾ ಷೇರುಗಳು ಏರಿಕೆಯೊಂದಿಗೆ ಕೊನೆಗೊಂಡವು. ಹಿಂಡಾಲ್ಕೊ ಇಂಡಸ್ಟ್ರೀಸ್, ಭಾರ್ತಿ ಏರ್ ಟೆಲ್, ಎನ್ಟಿಪಿಸಿ, ಶ್ರೀರಾಮ್ ಫೈನಾನ್ಸ್ ಮತ್ತು ಮಹೀಂದ್ರಾ & ಮಹೀಂದ್ರಾ ಗುರುವಾರ ಶೇಕಡಾ 4.15 ರಷ್ಟು ಲಾಭ ಗಳಿಸಿದವು. ಹಾಗೆಯೇ ಬಿಎಸ್ಇಯಲ್ಲಿ ಕೂಡ ನೆಸ್ಲೆ ಇಂಡಿಯಾ ಹೊರತುಪಡಿಸಿ ಸೆನ್ಸೆಕ್ಸ್ ಎಲ್ಲಾ ಷೇರುಗಳು ಏರಿಕೆಯೊಂದಿಗೆ ಕೊನೆಗೊಂಡವು. ಸೆನ್ಸೆಕ್ಸ್ನಲ್ಲಿ ಭಾರ್ತಿ ಏರ್ಟೆಲ್, ಎನ್ ಟಿಪಿಸಿ, ಜೆಎಸ್ಡಬ್ಲ್ಯೂ ಸ್ಟೀಲ್ ಮತ್ತು ಮಹೀಂದ್ರಾ & ಮಹೀಂದ್ರಾ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ.
ಏತನ್ಮಧ್ಯೆ, ಎಲ್ಲಾ ವಲಯದ ಸೂಚ್ಯಂಕಗಳು ಗುರುವಾರ ಸಕಾರಾತ್ಮಕವಾಗಿ ಕೊನೆಗೊಂಡವು. ನಿಫ್ಟಿ ಆಟೋ ಮತ್ತು ಮೆಟಲ್ ಸೂಚ್ಯಂಕಗಳು ಶೇಕಡಾ 2 ರಿಂದ 3 ರಷ್ಟು ಲಾಭದೊಂದಿಗೆ ಸ್ಥಿರಗೊಂಡವು. ನಿಫ್ಟಿ ಬ್ಯಾಂಕ್, ಪಿಎಸ್ಯು ಬ್ಯಾಂಕ್, ಹಣಕಾಸು ಸೇವೆಗಳು, ಐಟಿ ಮತ್ತು ಖಾಸಗಿ ಬ್ಯಾಂಕ್ ತಲಾ ಶೇಕಡಾ 1 ಕ್ಕಿಂತ ಹೆಚ್ಚು ಏರಿಕೆ ಕಂಡರೆ, ನಿಫ್ಟಿ ರಿಯಾಲ್ಟಿ ಮತ್ತು ಫಾರ್ಮಾ ತಲಾ 0.9 ಶೇಕಡಾ ಲಾಭ ಗಳಿಸಿದವು.
ಡಾಲರ್ ಎದುರು ಹೊಸ ಕನಿಷ್ಠ ಮಟ್ಟಕ್ಕಿಳಿದ ರೂಪಾಯಿ: ಗುರುವಾರದಂದು ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಹೊಸ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಬುಧವಾರದ ಡಾಲರ್ಗೆ 83.9800 ರೂ.ಗೆ ಹೋಲಿಸಿದರೆ ಗುರುವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ ಶೇಕಡಾ 0.02 ರಷ್ಟು ಕುಸಿದು 83.9912 ರೂ.ಗೆ ತಲುಪಿದೆ. ಮಧ್ಯಾಹ್ನ 2:05 ಕ್ಕೆ ಡಾಲರ್ ಎದುರು ರೂಪಾಯಿ 83.99 ರೂ. ಆಗಿತ್ತು.
ಇದನ್ನೂ ಓದಿ : ಕೇಂದ್ರ ತೆರಿಗೆಯಲ್ಲಿನ ರಾಜ್ಯಗಳ ಪಾಲನ್ನು ಶೇಕಡಾ 50 ಕ್ಕೆ ಹೆಚ್ಚಿಸಿ: ಕೇರಳ ಸಿಎಂ ಒತ್ತಾಯ - Union taxes